ಕಲಬುರಗಿ | ಸೈಯದ್ ಶಾಹ್ ಖುಸ್ರೋ ಹುಸೈನಿ ನಡೆದಾಡುವ ಜ್ಞಾನಕೋಶವಾಗಿದ್ದರು : ಪ್ರೊ.ಸುಲೇಮಾನ್
ಕಲಬುರಗಿ : ದಿವಂಗತ ಸೈಯದ್ ಶಾಹ್ ಖುಸ್ರೋ ಹುಸೈನಿ ಅವರು ಒಳ್ಳೆಯ ಓದುಗಾರರಾಗಿದ್ದರು. ಸೂಫಿಸಂ ಬಗ್ಗೆ ಅಧ್ಯಯನ ಮಾಡುವ ವಿದೇಶಿಗರು ಸೈಯದ್ ಖುಸ್ರೋ ಅವರನ್ನು ತಪ್ಪದೇ ಭೇಟಿಯಾಗುತ್ತಿದ್ದರು. ಅವರು ಅನೇಕ ಭಾಷೆಯನ್ನು ಬಲ್ಲವರಾಗಿದ್ದರು, ಅವರು ನಡೆದಾಡುವ ಜ್ಞಾನಕೋಶದಂತೆ ಇದ್ದರು ಎಂದು ಉಸ್ಮಾನಿಯ ವಿವಿಯ ಮಾಜಿ ಉಪಕುಲಪತಿ ಪ್ರೊ. ಸುಲೇಮಾನ್ ಸಿದ್ದಿಕಿ ನುಡಿದರು.
ಪ್ರಸಿದ್ದ ಸೂಫಿ ಹಝ್ರತ್ ಖಾಜಾ ಬಂದಾ ನವಾಜ್ (ರ.ಅ) ದರ್ಗಾದ ಪೀಠಾಧಿಪತಿ ಕೆಬಿಎನ್ ವಿವಿಯ ಸಂಸ್ಥಾಪಕ ವಿದ್ವಾಂಸರಾಗಿದ್ದ ದಿವಂಗತ ಹಜರತ್ ಡಾ.ಸೈಯದ್ ಷಾ ಖುಸ್ರೋ ಹುಸೈನಿ ಅವರು ಇತ್ತಿಚೆಗೆ ನಿಧನರಾದ ಹಿನ್ನೆಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಖುಸ್ರೋ ಅವರು ಬರೆದ ಪುಸ್ತಕಗಳು ಆಕರ ಗ್ರಂಥಗಳಾಗಿವೆ. ಅಷ್ಟೇ ಅಲ್ಲದೇ ಅವರು ಅನೇಕ ಪುಸ್ತಕಗಳನ್ನು ಎಡಿಟ್ ಮಾಡಿ ಮರುಪ್ರಕಟಿಸಿದ್ದಾರೆ. ಜೊತೆಗೆ ಅನೇಕ ಪ್ರಬಂಧಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಜರ್ನಲ್ ಗಳಲ್ಲಿ ಪ್ರಕಟಿಸಿದ್ದಾರೆ. ಅನೇಕ ಸೂಫಿಸಂತರ ಜೀವನ ಚರಿತ್ರೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಪರ್ಶಿಯನ್ ಭಾಷೆಯ ಪುಸ್ತಕಗಳನ್ನು ಬರೆದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎಚ್ ಕೆ ಸೊಸೈಟಿಯ ಅಧ್ಯಕ್ಷ ಶಶೀಲ್ ಜಿ.ನಮೋಶಿ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮುಹಮ್ಮದ್ ಅಝಾರುದ್ದಿನ್, ಶರಣಬಸವ ವಿವಿಯ ಮಾಜಿ ಉಪ ಕುಲಪತಿ ಪ್ರೊ.ನಿರಂಜನ್ ನಿಷ್ಠಿ, ವಿವಿಯ ನಿರ್ದೇಶಕ ಡಾ.ಮುಸ್ತಫಾ ಅಲ್ ಹುಸೈನಿ, ಕೆಬಿಎನ್ ವಿವಿಯ ಕುಲಾಧಿಪತಿ ಹಾಪೀಝ್ ಮುಹಮ್ಮದ್ ಅಲಿ ಅಲ್ ಹುಸೈನಿ, ಡಾ.ಜೇಬಾ ಪರ್ವೀನ, ಡಾ.ಮುಹಮ್ಮದ್ ಇರ್ಫಾನ್ ಅಲಿ, ಮೌಲನ ಸಯ್ಯದ್ ತನ್ವೀರ್ ಅಹ್ಮದ್, ವಿದ್ಯಾರ್ಥಿನಿ ರುಕಯ್ಯ ರಾಫಾ, ವಿದ್ಯಾರ್ಥಿಗಳಾದ ಡಾ.ಅದ್ನಾನ್ ಇಮಾಮ, ಸಯ್ಯದ ಸೂಫಿಯನ ಖಾದ್ರಿ, ಡಾ.ಮುಹಮ್ಮದ್ ಮೊಯಿನುದ್ದಿನ, ಡಾ.ಪಿ.ಎಸ್.ಶಂಕರ, ಸಯ್ಯದ ಜಮಾಲ್, ಡಾ.ವಿರೂಪಾಕ್ಷಯ್ಯ, ಉಪಕುಲಪತಿ ಅಲಿ ರಜಾ ಮೂಸ್ವಿ, ಮಾಜೀದ್ ಅಹ್ಮದ್ ತಾಳಿಕೋಟಿ, ಡಾ.ವಿಜಯಕುಮಾರ ಮಾತನಾಡಿದರು.
ಡಾ. ಇರಫಾನ್ ಅಲಿ ನಿರೂಪಿಸಿದರೆ, ಡಾ.ನಿಶಾತ್ ಆರೀಫ್ ಹುಸ್ಸೇನಿ ಸ್ವಾಗತಿಸಿದರು. ಪ್ರೊ.ಎ.ಎಂ.ಪಠಣ್ ವಂದಿಸಿದರು. ಖಾಜಾ ಶಿಕ್ಷಣ ಸಂಸ್ಥೆ ಮತ್ತು ಕೆಬಿಎನ್ ವಿವಿಯ ಎಲ್ಲ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು, ಶಿಕ್ಷಕ ಮತ್ತು ಶಿಕ್ಷಕೇತರ ವೃಂದ ಹಾಜರಿದ್ದರು.