ಅಂತರ್ ರಾಜ್ಯ ಎಟಿಎಂ ಡರೋಡೆಕೋರರ ಕಾಲಿಗೆ ಗುಂಡಿಕ್ಕಿ ಬಂಧನ; ಕಮಿಷನರ್ ಡಾ.ಶರಣಪ್ಪ ಎಸ್.ಡಿ ಹೇಳಿದ್ದೇನು?

ಕಲಬುರಗಿ: ಎಪ್ರಿಲ್ 9ರಂದು ನಗರದ ಪೂಜಾರಿ ಚೌಕ್ ಬಳಿ ನಡೆದ ಎಟಿಎಂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆ ಮರೆಸಿಕೊಂಡಿದ್ದ ಅಂತರ್ ರಾಜ್ಯ ಎಟಿಎಂ ಕಳ್ಳರ ಮೇಲೆ ಶನಿವಾರ ಬೆಳಗ್ಗೆ ಇಲ್ಲಿನ ಬೇಲೂರ್ ಕ್ರಾಸ್ ಬಳಿ ನಗರ ಪೊಲೀಸರು ಗುಂಡು ಹಾರಿಸಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಕಮಿಷನರ್ ಡಾ.ಶರಣಪ್ಪ ಎಸ್.ಡಿ ಅವರು ತಿಳಿಸಿದ್ದಾರೆ.
ನಗರದ ಪೊಲೀಸ್ ಆಯುಕ್ತಾಲಯ ಕೆಚೇರಿಯಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹೊರವಲಯದ ಬೇಲೂರ್ ಕ್ರಾಸ್ ಸಮೀಪದ ಕೈಗಾರಿಕಾ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಎಟಿಎಂ ಕಳ್ಳತನ ಮಾಡಲು ಯತ್ನಿಸುತ್ತಿದ್ದ ಕಳ್ಳರನ್ನು ಬಂಧಿಸಲು ತೆರಳಿದ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರು ಆತ್ಮರಕ್ಷಣೆಗಾಗಿ ಫೈರಿಂಗ್ ನಡೆಸಿ ಆರೋಪಿಗಳ ಕಾಲಿಗೆ ಗುಂಡು ಹರಿಸಿದ್ದಾರೆ. ಇದರಲ್ಲಿ ಪ್ರಮುಖ ಆರೋಪಿ ತಸ್ಲೀಮ್ ಹಾಗೂ ಷರೀಫ್ ಕಾಲಿಗೆ ಗುಂಡು ಹಾರಿಸಲಾಗಿದ್ದು, ಇನ್ನಿಬ್ಬರು ಆರೋಪಿಗಳಾದ ಶಫಿಕ್ ಹಾಗೂ ಮಹ್ಮದ್ ಅಮಿರ್ ಪೊಲೀಸರಿಗೆ ಶರಣಾಗಿದ್ದಾರೆ. ಬಂಧಿತರಿಂದ ಬಿಳಿ ಬಣ್ಣದ ಐ20 ಕಾರೊಂದನ್ನು ವಶಕ್ಕೆ ಪಡೆಯಲಾಗಿದೆ ಹೇಳಿದರು.
ಗುಂಡಿನ ದಾಳಿಯ ಘಟನೆಯಲ್ಲಿ ಪಿಎಸ್ಐ ಬಸವರಾಜ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ರಾಜಕುಮಾರ್, ಮಂಜುನಾಥ್ ಹಾಗೂ ಫಿರೋಜ್ ಅವರಿಗೆ ಗಾಯಗಳಾಗಿದ್ದು, ಅವರನ್ನು ಎಲ್ಲರನ್ನೂ ನಗರದ ಜಿಮ್ಸ್ ಆವರಣದಲ್ಲಿರುವ ಟ್ರಾಮಾ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಳಿಗೂ ಇಲ್ಲೇ ಚಿಕಿತ್ಸೆ ಕೊಡಲಾಗುತ್ತಿದೆ. ಕಳೆದ ಎಪ್ರಿಲ್ 9ರಂದು ನಡೆದ ಪೂಜಾರಿ ಕ್ರಾಸ್ ಎಟಿಎಂ ನಿಂದ 18 ಲಕ್ಷ ರು.ಗಳ ದರೋಡೆ ಪ್ರಕರಣದಲ್ಲಿ ಇವರ ಕೈವಾಡ ಇರುವ ಬಗ್ಗೆ ತನಿಖೆಯಿಂದ ಬಯಲಾಗಿದೆ. ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನಲೆ ಬಿ.ಎನ್.ಎಸ್ 111 ಸೆಕ್ಷನ್ ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದರು.

(ಬಂಧಿತ ಆರೋಪಿಗಳು)
ಆರೋಪಿಗಳು ಹರಿಯಾಣದ ಮೇವತ್ ಜಿಲ್ಲೆಯವರಾಗಿದ್ದು, ಇವರ ಮೇಲೆ ಮಹಾರಾಷ್ಟ್ರ, ತೆಲಂಗಾಣ, ರಾಜಸ್ತಾನ, ಉತ್ತರಾಖಂಡ, ಉತ್ತರಪ್ರದೇಶ ಹಾಗೂ ಕರ್ನಾಟಕದಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ. ಎಟಿಎಂ ಕಳ್ಳತನದ ಪ್ರಮುಖ ಆರೋಪಿ ತಸ್ಲೀಮ್ ವಿರುದ್ಧ ಹತ್ತಕ್ಕೂ ಹೆಚ್ಚು ಎಟಿಎಂ ಕಳ್ಳತನ ಪ್ರಕರಣಗಳು ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಈ ವೇಳೆ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಿದ ಸಬ್-ಅರ್ಬನ್ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಡಿ.ಜಿ ರಾಜಣ್ಣ, ಸಿ.ಇ.ಎನ್ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮಡೋಳಪ್ಪ ಅವರ ಮಾರ್ಗದರ್ಶನದ ಪಿ.ಐ ಸಂತೋಷ ಎಲ್.ತಟ್ಟೆಪಳ್ಳಿ, ಸುಶೀಲ್ ಕುಮಾರ ಅವರ ನೇತೃತ್ವದಲ್ಲಿ ಪಿಎಸ್ಐ ಬಸವರಾಜು ಹಾಗೂ ಸಿಬ್ಬಂದಿಗಳಾದ ಮಂಜುನಾಥ, ಫಿರೋಜ್, ಶಶಿಕಾಂತ, ವಿಶ್ವಲ್, ಭೀಮಾನಾಯಕ, ರಾಜಕುಮಾರ, ರಾಜು ಟಾಕಳೆ, ಗುರುರಾಜ, ಅನೀಲ ರಾಠೋಡ, ನಾಗೇಂದ್ರ, ಚನ್ನವಿರೇಶ ಎ.ಹೆಚ್.ಸಿ ಅವರನ್ನೊಳಗೊಂಡ ತಂಡಕ್ಕೆ ಪ್ರಶಂಸೆ ಪತ್ರದ ಜತೆಗೆ 25 ಸಾವಿರ ನಗದು ಬಹುಮಾನ ನೀಡಿ ಶ್ಲಾಘಿಸಿದರು.
ಈ ವೇಳೆ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ನಾಯಕ್ ಇದ್ದರು.
ಎಸ್.ಬಿ.ಐ ಎಟಿಎಂ ಗಳೇ ಆರೋಪಿಗಳ ಟಾರ್ಗೆಟ್:
ಹರಿಯಾಣದ ಮೇವತ್ ಜಿಲ್ಲೆಯ ಮೂಲದ ತಸ್ಲೀಮ್ ತನ್ನ ತಂಡದೊಂದಿಗೆ ಕಳೆದ ಮೂರ್ನಾಲ್ಕು ವರ್ಷಗಳಿಂದ ವಿವಿಧ ರಾಜ್ಯಗಳಲ್ಲಿ ಎಟಿಎಂ ಕಳ್ಳತನ ದಂಧೆ ಇಳಿದಿದ್ದ, ಕರ್ನಾಟಕ ಅಲ್ಲದೇ, ಮಹಾರಾಷ್ಟ್ರ, ತೆಲಂಗಾಣ, ಉತ್ತರಪ್ರದೇಶ ಸೇರಿ ವಿವಿಧ ರಾಜ್ಯಗಳಲ್ಲಿ ಎಟಿಎಂ ಕಳ್ಳತನ ಮಾಡುತ್ತಿದರು. ನಗರದ ಹೊರವಲಯದ ಹಾಗೂ ಎಸ್.ಬಿ.ಐ ಏಟಿಎಂ ಗಳೇ ಇವರ ಟಾರ್ಗೆಟ್ ಆಗಿದ್ದವು. ಯಾರು ಇರದ, ಸಿಸಿಟಿವಿ ಇಲ್ಲದ, ಹಾಗೂ ಅತಿ ಹೆಚ್ಚು ಹಣ ಇರುವ ಎಟಿಎಂ ಗಳನ್ನು ಗ್ಯಾಸ್ ಕಟ್ಟರ್ ಬಳಿಸಿ ದರೋಡೆ ಮಾಡುತ್ತಿದ್ದರು ಎಂದು ಪೊಲೀಸ್ ಕಮಿಷನರ್ ಹೇಳಿದರು.
ಸುಳಿವು ನೀಡಿದ ಐ20 ಕಾರು:
ಕಲಬುರಗಿಯಲ್ಲಿ ಎ. 9ರಂದು ಪೂಜಾರಿ ಚೌಕ್ ಹತ್ತಿರ ಎಟಿಎಂ ದರೋಡೆಯಾದ ಬಳಿಕ ಡಿಸಿಪಿ ಹಾಗೂ ಎಸಿಪಿ ನೇತೃತ್ವದಲ್ಲಿ 4 ತಂಡ ರಚಿಸಿ ಶೋಧ ನಡೆಸಲಾಗುತ್ತಿತ್ತು. ಈ ವೇಳೆ ಅನುಮಾನಸ್ಪದವಾಗಿ ಬಿಳಿಯ ಬಣ್ಣದ ಐ20 ಹಾಗೂ ಬ್ಲಾಕ್ ಕ್ರೆಟಾ ಕಾರ್ ಓಡಾಡುತ್ತಿದ್ದವು. ಇದರಲ್ಲಿ ಐ20 ಕಾರ್ ಬೇರೆ ರಾಜ್ಯದ ಡಿ.ಎಲ್ ಬಳಸಿ ಓಡಾಡುತ್ತಿತ್ತು. ತೀವ್ರ ನೀಗಾ ಇಟ್ಟು ಪತ್ತೆ ಹಚ್ಚಿದ್ದಾಗ ಎಟಿಎಂ ಕಳ್ಳರ ಕಾರ್ ಇದೆ ಎನ್ನುವ ಖಚಿತ ಮಾಹಿತಿ ದೊರಕಿದೆ. ಶನಿವಾರ ಬೆಳಗ್ಗೆ ಮತ್ತೆ ಅದೇ ಕಾರಿನಲ್ಲಿ ಬೇಲೂರ್ ಕ್ರಾಸ್ ಹತ್ತಿದ ಕೈಗಾರಿಕಾ ಪ್ರದೇಶದಲ್ಲಿ ಎಟಿಎಂ ಕಳ್ಳತನ ಮಾಡಲು ಯತ್ನಿಸುತ್ತಿದಾಗ, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ, ಆಗ ಆತ್ಮರಕ್ಷಣೆಗಾಗಿ ಫೈರಿಂಗ್ ಮಾಡಿ ಕಳ್ಳರನ್ನು ಬಂಧಿಸಲಾಗಿದೆ ಎಂದು ಡಾ. ಶರಣಪ್ಪ ಎಸ್.ಡಿ ವಿವರಿಸಿದರು.