ಜೀವನಾನುಭವ ಪಡೆಯಲು ಸಾಹಿತ್ಯ ಅರ್ಥೈಸಿಕೊಳ್ಳಿ: ಡಾ.ಸಿದ್ದರಾಮ ಹೊನ್ಕಲ್

ಕಲಬುರಗಿ: ಇಲ್ಲಿನ ಸೆಂಟ್ ಜೋಸೆಫ್ ಪಿಯು ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವತಿಯಿಂದ ಚಕೋರ ಸಾಹಿತ್ಯ ವಿಚಾರ ವೇದಿಕೆ ಕಾರ್ಯಕ್ರಮದ ಅಡಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು ಆಗಿರುವ ಡಾ.ಸಿದ್ದರಾಮ ಹೊನ್ಕಲ್ ಅವರು ಚಕೋರ ಸಾಹಿತ್ಯ ವಿಚಾರ ವೇದಿಕೆಯ ಧ್ಯೇಯೋದ್ದೇಶ ಕುರಿತು ಆಶಯ ನುಡಿ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸಾಹಿತ್ಯ ಹಾಗೂ ಜೀವನಾನುಭವ ಪಡೆಯಲು ಸಾಹಿತ್ಯ ಸಂಗೀತ ಕಲೆ ಸಂಸ್ಕೃತಿ ಬಗ್ಗೆ ತಿಳಿದುಕೊಂಡಿರಬೇಕು. ಇದು ಯಾವ ವಿವಿಯೂ ಕಲಿಸುವುದಿಲ್ಲ, ಆ ಕಾರಣ ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದ ಮೂಲಕ ಜೀವನಾನುಭವ ಗಳಿಸಿದರೆ ಬದುಕಿನಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಲು ಸಾಧ್ಯ ಆಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯ ಉಪನ್ಯಾಸಕರು ಡಾ.ಸಂತೋಷಕುಮಾರ ಕಂಬಾರ ಅವರು ಡಾ.ಚಂದ್ರಶೇಖರ ಕಂಬಾರ ಅವರ ಬದುಕು ಬರಹದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್.ನಿರಗುಡಿ, ಶ್ಯಾಮುವೆಲ್ ಎಸ್. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ಚಿ.ಸಿ.ನಿಂಗಣ್ಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಪಾಲ್ಗೊಂಡಿದ್ದರು.