ಉಪ್ಪಿನಂಗಡಿ | ಕಲ್ಲೇರಿಯಲ್ಲಿ ಇಂಡಿಯಾ ವನ್ ಎಟಿಎಂನಿಂದ ಕಳ್ಳತನಕ್ಕೆ ಯತ್ನ : ಓರ್ವನ ಬಂಧನ?

ಉಪ್ಪಿನಂಗಡಿ : ಇಲ್ಲಿನ ಸಮೀಪದ ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ಖಾಸಗಿ ಕಂಪೆನಿ ಇಂಡಿಯಾ ವನ್ ನ ಎಟಿಎಂಗೆ ನುಗ್ಗಿದ ಕಳ್ಳರು ಕಳ್ಳತನಕ್ಕೆ ಯತ್ನಿಸಿ ಸೊತ್ತುಗಳನ್ನು ಹಾನಿಗೊಳಿಸಿದ ಘಟನೆ ನಡೆದಿದೆ.
ಈ ಕುರಿತು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದ್ದು, ಓರ್ವನ ಬಂಧನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಲ್ಲೇರಿಯಲ್ಲಿನ ತಣ್ಣೀರುಪಂತ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡದಲ್ಲಿ ಇಂಡಿಯಾ ವನ್ ಎಂಬ ಹೆಸರಿನ ಖಾಸಗಿ ಸಂಸ್ಥೆಯ ಏಟಿಎಂ ಕೇಂದ್ರಕ್ಕೆ ನುಗ್ಗಿದ ಕಳ್ಳರು ಅಲ್ಲಿನ ಸಿಸಿ ಕ್ಯಾಮರಾ ವನ್ನು ಕಿತ್ತೆಗೆಯಲು ಯತ್ನಿಸಿ, ಎಟಿಎಂ ಮಷಿನ್ ಗೆ ಹಾನಿಯನ್ನುಂಟು ಮಾಡಿದ್ದಾರೆ.
ಈ ಬಗ್ಗೆ ಇಂಡಿಯಾ ವನ್ ಕಾಲ್ ಸೆಂಟರ್ ನಿಂದ ಕಲ್ಲೇರಿಯ ಎಟಿಎಂ ಕೇಂದ್ರದಲ್ಲಿ ಯಾವುದೋ ಅನುಚಿತ ಕೃತ್ಯ ನಡೆಯುತ್ತಿದೆ ಎಂಬ ಸಂದೇಶ ರವಾನೆಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಕಳವು ಯತ್ನ ಪ್ರಕರಣ ನಡೆದಿರುವುದು ಕಂಡು ಬಂದಿದೆ. ಈ ಬಗ್ಗೆ ಪ್ರಶಾಂತ್ ಡಿ ಕೋಸ್ಟಾ ರವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಸುರಕ್ಷತೆಯ ಹೊರತಾಗಿಯೂ ಪದೇ ಪದೇ ಕಳವು ಯತ್ನ :
ಖಾಸಗಿ ಎಟಿಎಂ ಕೇಂದ್ರವು ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಪ್ರತಿ ಕೇಂದ್ರದ ಚಲನವಲನಗಳ ಬಗ್ಗೆ ನಿಗಾವಹಿಸುವ ವ್ಯವಸ್ಥೆಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಎಟಿಎಂ ಕೇಂದ್ರದ ಒಳ ಹೊಕ್ಕು ಮಿಷಿನ್ ತೆರೆಯಲು ಯತ್ನಿಸಿದರೂ, ಹಣತುಂಬಿದ ವಿಭಾಗದ ಬಾಗಿಲು ತೆರೆಯಬೇಕಾದರೆ ಒಟಿಪಿ ಆಧಾರಿತ ವ್ಯವಸ್ಥೆಯ ಭದ್ರೆತೆ ಅಳವಡಿಸಲಾಗಿದೆ. ಕೆಲ ಸಮಯದ ಹಿಂದೆ ತೆಕ್ಕಾರು ಎಂಬಲ್ಲಿ ಇದೇ ರೀತಿ ಎಟಿಎಂ ಕೇಂದ್ರದಲ್ಲಿ ಕಳವು ಯತ್ನ ನಡೆದಿತ್ತು. ಈಗ ಕಲ್ಲೇರಿಯಲ್ಲಿ ಕಳವು ಯತ್ನ ನಡೆದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪರಿಸರದ ಸಿಸಿ ಕ್ಯಾಮರಾದಲ್ಲಿನ ದೃಶ್ಯಾವಳಿಗನ್ನು ಪರಿಶೀಲಿಸಿದ್ದಾರೆ.