ಕಲಬರಗಿ | ಮಾದಕ ವಸ್ತಗಳಿಗೆ ಯುವಕರು ಬಲಿಯಾಗಬೇಡಿ: ಡಾ.ಸಂಗನಗೌಡ ಪಿ.ಹೊಸಳ್ಳಿ

ಕಲಬರಗಿ: ಇಂದಿನ ಯುವಶಕ್ತಿ ಮಾದಕ ವಸ್ತುಗಳಿಗೆ ಬಲಿಯಾಗಿ ತಮ್ಮ ಉತ್ತಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದು, ಇಂಥಹ ದುಶ್ಚಟಗಳಿಂದ ದೂರವಿದ್ದು ಯುವಕರು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕಲಬುರಗಿ ಅಬಕಾರಿ ಆಯಕ್ತರಾದ ಡಾ.ಸಂಗನಗೌಡ ಪಿ ಹೊಸಳ್ಳಿ ಹೇಳಿದರು.
ನಗರದಲ್ಲಿರುವ ಪಿ.ಡಿ.ಎ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಬಕಾರಿ ಇಲಾಖೆಯ ವತಿಯಿಂದ ಹಮ್ಮಿಕೊಂಡ ವಿದ್ಯಾರ್ಥಿಗಳಿಗೆ ಮಾದಕ ಹಾಗೂ ಮನೋದ್ರೇಕಕಾರಿ ವಸ್ತುಗಳು ಎನ್.ಡಿ. ಪಿ.ಎಸ್. ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಯುವಕರನ್ನು ಹೆಚ್ಚು ಓದಿನ ಕಡೆ ಗಮನ ನೀಡಬೇಕು, ದುಶ್ಚಟಗಳು ನಮ ಭವಿಷ್ಯವನ್ನು ಹಾಳು ಮಾಡುತ್ತವೆ, ಇದರ ಬಗ್ಗೆ ಎಚ್ಚರದಿಂದ ಇರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಚಿಂಚೋಳಿ ವಲಯ ಅಬಕಾರಿ ನಿರೀಕ್ಷಕ ಧನರಾಜ ಹಳ್ಳಿಖೇಡ ಅವರು ಮಾತನಾಡಿ, ಪಿಪಿಟಿಯ ಮೂಲಕ ಮಾದಕ ಹಾಗೂ ಮನೋದ್ರೇಕಕಾರಿ ವಸ್ತುಗಳ ವಿವರ ಹಾಗೂ ವಿಧಗಳಾದ ಗಾಂಜಾ, ಹಶೀಷ, ಚರಸ್, ಕೊಕೇನ್, ಎಲ್.ಎಸ್.ಡಿ., ಎಂ.ಡಿ.ಎಂ.ಎ., ಬ್ರೌನ್ ಶುಗರ್‌ಗಳ ಬಗ್ಗೆ ವಿವರಿಸಿದರು. ಅವುಗಳ ಸೇವನೆಯಿಂದ ಮಾನವನ ದೇಹದ ವಿವಿಧ ಅಂಗಗಳ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ವಿವರಿಸಿದರು.
ಕಲಬುರಗಿ ವಲಯ ನಂ.1 ಅಬಕಾರಿ ನಿರೀಕ್ಷಕ ಸಿದ್ರಾಮಪ್ಪ ತಾಳಿಕೋಟಿ ಮಾತನಾಡಿ, ಮಾದಕ ಹಾಗೂ ಮನೋದ್ರೇಕಕಾರಿ ವಸ್ತುಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ, ಸಾಗಾಣಿಕೆ, ಸೇವನೆ ಹಾಗೂ ಅಪರಾಧಿಕ ಕೃತ್ಯಗಳಿಗೆ ಸ್ವತ್ತನ್ನು ಹಾರ್ಬರಿಂಗ್ ಮಾಡುವುದರಿಂದ ಉಂಟಾಗುವ ಕಾನೂನಾತ್ಮಕ ದುಷ್ಟರಿಣಾಮಗಳ ಬಗ್ಗೆ ವಿವರಿಸಿದರು.
ಎನ್.ಡಿ.ಪಿ.ಎಸ್. ಕಾಯ್ದೆ 1985 ರ ಅಡಿಯಲ್ಲಿ ಅಪರಾಧಿಗಳಿಗೆ ಪಾಸ್‌ಪೋರ್ಟ್ ಹಾಗೂ ಸರಕಾರಿ ನೌಕರಿ ಪಡೆಯುವ ಸಮಯದಲ್ಲಿ ಉಂಟಾಗುವ ಕಾನೂನು ತೊಡಕುಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಂದ " ಸೇ ನೋಟು ಡ್ರಗ್ಸ್" ಎಂದು ಘೋಷಣೆ ಹೊರಡಿಸಲಾಯಿತು.
ಕಲಬುರಗಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಮಲ್ಲಿಕಾರ್ಜುನ ದೊಡ್ಡಮನಿ, ರಮೇಶ ಬಿರಾದಾರ, ಶಿವಾನಂದ ಪಾಟಿಲ ಹಾಗೂ ನರೇಂದ್ರಕುಮಾರ ಹಾಗೂ ಸಿಬ್ಬಂದಿ ಹಾಜರಿದ್ದರು.
