ಕಳಕೋಡು: ಶಿಥಿಲಾವಸ್ಥೆಯಲ್ಲಿದ್ದರೂ ಕಾಣದ ದುರಸ್ತಿ ಭಾಗ್ಯ

ಚಿಕ್ಕಮಗಳೂರು: ಸರಕಾರಿ ಶಾಲೆಯೊಂದರ ಅವ್ಯವಸ್ಥೆ, ದುಸ್ಥಿತಿ ಕಂಡು ಮರುಗುತ್ತಿರುವ ಶಾಲೆಯ ಮಕ್ಕಳ ಪೋಷಕರು ದಾನಿಗಳ ನೆರವಿನೊಂದಿಗೆ ಶಾಲೆಗೆ ಸುಣ್ಣ ಬಣ್ಣ ಬಳಿಯುವುದರೊಂದಿಗೆ ಶಾಲೆ ಮುಚ್ಚುವುದನ್ನು ತಡೆಯಲು ಪ್ರಯತ್ನಿಸುತ್ತಿರುವ ಘಟನೆ ಕಳಕೋಡು ಗ್ರಾಮದಲ್ಲಿ ವರದಿಯಾಗಿದೆ.
ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಳಕೋಡು ಗ್ರಾಮ ಕಳಸ ಪಟ್ಟಣದಿಂದ ಸುಮಾರು 15 ಕಿ.ಮೀ. ದೂರದಲ್ಲಿದ್ದರೆ, ಸಂಸೆಯಿಂದ 10 ಕಿ.ಮೀ. ದೂರದಲ್ಲಿದೆ. ಈ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದ್ದು, ಇದುವರೆಗೂ ದುರಸ್ತಿ ಕಾಣದೆ ಶಿಥಿಲಾವಸ್ಥೆಯಲ್ಲಿದೆ.
ಶಾಲೆಯ ಮೇಲ್ಛಾವಣಿ ದುರಸ್ತಿ ಭಾಗ್ಯ ಕಾಣದೆ ಎರಡು ದಶಕಗಳು ಕಳೆದಿದ್ದು, ದುರಸ್ತಿಗಾಗಿ ಮಕ್ಕಳ ಪೋಷಕರು ಸ್ಥಳೀಯ ಗ್ರಾಮ ಪಂಚಾಯತ್, ತಾಪಂ, ಜಿಪಂ ಹಾಗೂ ಶಿಕ್ಷಣ ಇಲಾಖೆಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಕಳಸಕೋಡು, ಈಚಲುಹೊಳೆ, ಕಾರ್ಲೇ ಕುಗ್ರಾಮಗಳ ಬಡಜನರ ಮಕ್ಕಳ ಶಿಕ್ಷಣದ ಕನಸಿಗೆ ಏಕೈಕ ಆಸರೆಯಾಗಿರುವ ಕಳಕೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಲವಾರು ವರ್ಷಗಳಿಂದ ದುರಸ್ತಿ ಕಾಣದೆ ಅವ್ಯವಸ್ಥೆಯ ಆಗರವಾಗಿದೆ. ಶಾಲೆಯಲ್ಲಿ ಬಿಸಿಯೂಟ ತಯಾರಿಸಲು ಬೇಕಾದ ಸುಸಜ್ಜಿತ ಅಡುಗೆ ಕೊಠಡಿ ಇಲ್ಲವಾಗಿದೆ. ಶಾಲೆಯ ಮೇಲ್ಛಾವಣಿ ಮಳೆಗಾಲದಲ್ಲಿ ಸೋರುವುದರಿಂದ ಶಿಕ್ಷಕರು ಪಾಠ ಮಾಡಲು ಪರದಾಡುವಂತಾಗಿದ್ದರೆ, ಮಕ್ಕಳು ನೆಮ್ಮದಿಯಿಂದ ಕುಳಿತು ಪಾಠ ಕೇಳಲೂ ಸಾಧ್ಯವಾಗದಂತಾಗಿದೆ.
ಈ ಶಾಲೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಬಹುತೇಕ ಮಕ್ಕಳು ಕೂಲಿ ಕೆಲಸ ಮಾಡುವ ಹಾಗೂ ತಳ ಸಮುದಾಯದವರ ಮಕ್ಕಳಾಗಿದ್ದಾರೆ. ಈ ಗ್ರಾಮಗಳ ಸ್ಥಿತಿವಂತರ ಮಕ್ಕಳು ಕಳಸ ಪಟ್ಟಣದಲ್ಲಿರುವ ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದರೆ, ಬಡಜನರು ಆರ್ಥಿಕ ಪರಿಸ್ಥಿತಿಯ ಕಾರಣಕ್ಕೆ ಕಳಕೋಡು ಗ್ರಾಮದಲ್ಲಿರುವ ಈ ಸರಕಾರಿ ಶಾಲೆಯನ್ನೇ ನಂಬಿಕೊಂಡಿದ್ದಾರೆ.
ಶಾಲೆಯ ಮೇಲ್ಛಾವಣಿ ಶಿಥಿಲಗೊಂಡಿ ರುವುದರಿಂದ ಮಳೆಗಾಲದಲ್ಲಿ ಮಳೆ ನೀರು ಶಾಲಾ ಕಟ್ಟಡದ ಗೋಡೆಗಳ ಮೇಲೆ ಬಿದ್ದು ಗೋಡೆಗಳೂ ಶಿಥಿಲಾವಸ್ಥೆಯಲ್ಲಿವೆ. ಮೇಲ್ಛಾವಣಿ ಶಿಥಿಲಗೊಂಡು ಮಕ್ಕಳು ಜೀವ ಭಯದಲ್ಲಿ ಪಾಠ ಕೇಳುವ ಸ್ಥಿತಿ ಈ ಹಿಂದೆ ನಿರ್ಮಾಣವಾಗಿತ್ತು. ಈ ವೇಳೆ ದಾನಿಗಳ ನೆರವಿನಿಂದ ಮೇಲ್ಛಾವಣಿಯನ್ನು ದುರಸ್ತಿ ಮಾಡಿದ್ದರೇ ಹೊರತು ಸರಕಾರದಿಂದ ದುರಸ್ತಿಗೆ ನಯಾ ಪೈಸೆ ಅನುದಾನ ಬಂದಿಲ್ಲ ಎಂದು ಮಕ್ಕಳ ಪೋಷಕರು ಆರೋಪಿಸುತ್ತಿದ್ದಾರೆ.
ಶಾಲೆಯ ಮೇಲ್ಛಾವಣಿಗೆ ಹಾಕಿರುವ ಹೆಂಚುಗಳನ್ನು ಎರಡು ದಶಕಗಳಿಂದ ಬದಲಾಯಿಸದ ಕಾರಣದಿಂದ ಮಳೆ, ಗಾಳಿಗೆ ಹೆಂಚುಗಳೂ ಶಿಥಿಲಗೊಂಡಿದ್ದು, ಒಡೆದು ಹೋದ ಹೆಂಚುಗಳನ್ನು ಸ್ಥಳೀಯರು, ಮಕ್ಕಳ ಪೋಷಕರೇ ಬದಲಾಯಿಸಿ ಮಕ್ಕಳ ಪಾಠಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಶಾಲಾ ಮಕ್ಕಳ ಉತ್ತಮ ಕಲಿಕೆಗಾಗಿ ಸಂಸ್ಥೆಯೊಂದು ಈ ಶಾಲೆಗೆ ಸ್ಮಾರ್ಟ್ ಟಿವಿಯನ್ನು ನೀಡಿದ್ದರೂ ಎಲ್ಲ ಕೊಠಡಿಗಳ ಮೇಲ್ಛಾವಣಿ ಸೋರುವುದರಿಂದ ಟಿವಿಯನ್ನು ಎಲ್ಲೂ ಜೋಡಿಸಲು ಸಾಧ್ಯವಾಗದಂತಾಗಿದ್ದು, ಈ ಶಾಲಾ ಮಕ್ಕಳ ಪಾಲಿಗೆ ಸ್ಮಾರ್ಟ್ ಟಿವಿಯ ಕಲಿಕೆ ಮರೀಚಿಕೆಯಾಗಿದೆ.
ಸದ್ಯ ಮಕ್ಕಳ ಪೋಷಕರೇ ದಾನಿಗಳ ನೆರವಿನಿಂದ ಶಾಲೆಗೆ ಸುಣ್ಣ ಬಣ್ಣ ಬಳಿಯಲು ಮುಂದಾಗಿದ್ದಾರೆ. ಅಗತ್ಯವಾಗಿ ಬೇಕಾಗಿರುವ ದುರಸ್ತಿ ಕೆಲಸವನ್ನೂ ಮಕ್ಕಳ ಪೋಷಕರು ಶ್ರಮದಾನದ ಮೂಲಕ ಮಾಡುತ್ತಿದ್ದಾರೆ. ಈ ಮೂಲಕ ಶಾಲೆಯ ಅವ್ಯವಸ್ಥೆಯ ಕಾರಣಕ್ಕೆ ತಮ್ಮ ಮಕ್ಕಳ ಶಿಕ್ಷಣ ಕುಂಠಿತವಾಗಬಾರದು ಎಂದು ತಮ್ಮ ಸಂಪಾದನೆಯ ಕೂಲಿ ಕೆಲಸ ಬಿಟ್ಟು ಸರಕಾರಿ ಶಾಲೆಯಲ್ಲಿ ಶ್ರಮದಾನದ ಮಾಡುತ್ತಿದ್ದಾರೆ.
ನೀರು ಹೊರುತ್ತಿರುವ ಶಾಲಾ ಮಕ್ಕಳು, ಶಿಕ್ಷಕರು
ಶಾಲೆಯಲ್ಲಿ ಶೌಚಾಲಯಗಳಿದ್ದರೂ ಶೌಚಾಲಯಗಳಿಗೆ ಅಗತ್ಯವಾಗಿ ಬೇಕಾದ ನೀರಿನ ಪೂರೈಕೆ ಇಲ್ಲವಾಗಿದೆ. ಶಾಲಾ ದಿನಗಳಲ್ಲಿ ಶಾಲಾ ಮಕ್ಕಳೇ ನೀರು ಹೊತ್ತು ಶಾಲೆಯಲ್ಲಿರುವ ಸಿಂಟೆಕ್ಸ್ ತುಂಬಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇನ್ನು ಬಿಸಿಯೂಟಕ್ಕೂ ವಿದ್ಯಾರ್ಥಿಗಳೇ ನೀರು ಹೊತ್ತು ತರಬೇಕಾದ ಪರಿಸ್ಥಿತಿ ಈ ಶಾಲಾ ಮಕ್ಕಳದ್ದಾಗಿದೆ. ಶಾಲೆಯ ಸಮೀಪದಲ್ಲಿ ಸಣ್ಣ ನೀರಿನ ಕಾಲುವೆ ಇದ್ದು, ಈ ಕಾಲುವೆಯಿಂದ ಮಕ್ಕಳು, ಶಿಕ್ಷಕರು ಹಾಗೂ ಕೆಲವೊಮ್ಮೆ ಮಕ್ಕಳ ಪೋಷಕರೇ ನೀರು ಹೊತ್ತು ಶಾಲೆಯ ಸಿಂಟೆಕ್ಸ್‌ಗೆ ತುಂಬಿಸುತ್ತಾರೆ. ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಸಂಬಂಧಿಸಿದ ಇಲಾಖೆ, ಗ್ರಾಪಂಗಳಿಗೆ ಮನವಿ ಮಾಡಿದರೂ ಇದುವರೆಗೂ ಪ್ರಯೋಜನವಾಗಿಲ್ಲ ಎಂದು ಮಕ್ಕಳ ಪೋಷಕರು, ಶಿಕ್ಷಕರು ಆರೋಪಿಸುತ್ತಿದ್ದಾರೆ.
ಕಳಕೋಡು ಕುಗ್ರಾಮವಾಗಿದ್ದು, ಇಲ್ಲಿನ ಸುತ್ತಮುತ್ತಲಿನ ಬಡಜನರ ಮಕ್ಕಳ ಶಿಕ್ಷಣಕ್ಕೆ ಇಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದೇ ಆಸರೆಯಾಗಿದೆ. ಆದರೆ ಈ ಶಾಲಾ ಕಟ್ಟಡ ಶಿಥಿಲಾವಸ್ಥೆಯ ಹಂತಕ್ಕೆ ತಲುಪಿದೆ. ಪರಿಣಾಮ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಶಾಲೆಯಲ್ಲಿ ಅಗತ್ಯ ಮೂಲಸೌಕರ್ಯಗಳಿಲ್ಲ. ಇಲ್ಲಿನ ಸಮಸ್ಯೆಗಳ ಬಗ್ಗೆ ಸಂಬಂಧಿಸಿದವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸದ್ಯ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಅನುಕೂಲಕ್ಕಾಗಿ ದಾನಿಗಳ ನೆರವಿನಿಂದ ಶಾಲೆಯಲ್ಲಿ ಸಣ್ಣಪುಟ್ಟ ದುರಸ್ತಿ ಕೆಲಸವನ್ನು ಶ್ರಮದಾನದಿಂದ ಮಕ್ಕಳ ಪೋಷಕರು ಮಾಡುತ್ತಿದ್ದಾರೆ. ಸರಕಾರ ಇನ್ನಾದರೂ ಈ ಶಾಲೆಯ ಅಭಿವೃದ್ಧಿಗೆ ಒತ್ತು ನೀಡಬೇಕು, ತಪ್ಪಿದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಈ ಶಾಲೆ ಬಾಗಿಲು ಮುಚ್ಚುವುದು ಖಚಿತ, ಆಗ ಇಲ್ಲಿನ ಬಡ ಮಕ್ಕಳು ಬೇರೆ ಶಾಲೆಯತ್ತ ಮುಖ ಮಾಡುವುದು ಅನಿವಾರ್ಯವಾಗಲಿದೆ.
ಉಮೇಶ್ ಕೆ. ಆಚಾರ್ಯ, ಕಳಕೋಡು ಗ್ರಾಮಸ್ಥ