ಕಲ್ಪನಾ ಸೊರೇನ್ ಜಾರ್ಖಂಡ್ ನ ನೂತನ ಸಿಎಂ?
ರಾಂಚಿ: ಭೂಮಿ ಅವ್ಯವಹಾರ ಪ್ರಕರಣದಲ್ಲಿ ಕಾನೂನು ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗುವ ಪೂರ್ವದಲ್ಲಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ 40 ಗಂಟೆಗಳ ಕಾಲ ಕಣ್ಮರೆಯಾಗಿದ್ದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಬಂಧನದ ಭೀತಿಯಲ್ಲಿರುವ ಸೊರೇನ್ ತಮ್ಮ ಪತ್ನಿ ಕಲ್ಪನಾ ಸೊರೇನ್ ಅವರನ್ನು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಮಾಡುವ ಸಾಧ್ಯತೆ ಇದೆ ಎಂದು ಬಿಜೆಪಿಯ ನಿಶಿಕಾಂತ್ ದುಬೆ ಹೇಳಿದ್ದಾರೆ.
ಲಾಲೂ ಪ್ರಸಾದ್ ಯಾದವ್ 1996ರಲ್ಲಿ ಬಂಧನವಾದ ಸಂದರ್ಭದಲ್ಲಿ ರಾಬ್ಡಿದೇವಿ ಬಿಹಾರದ ಸಿಎಂ ಗಾದಿಗೆ ಏರಿದಂತೆ ಕಲ್ಪನಾ ಕೂಡಾ ಜಾರ್ಖಂಡ್ ಸಿಎಂ ಆಗುತ್ತಾರೆ ಎಂಬ ವದಂತಿಗಳನ್ನು ಹೇಮಂತ್ ಸೊರೇನ್ ತಳ್ಳಿಹಾಕಿದ್ದಾರೆ.
ಕಲ್ಪನಾ ಯಾವುದೇ ರಾಜಕೀಯ ಹಿನ್ನೆಲೆ ಹೊಂದಿರುವವರಲ್ಲ ಹಾಗೂ ಮೂಲತಃ ಒಡಿಶಾದ ಮಯೂರ್ಗಂಜ್ ಜಿಲ್ಲೆಯವರು. 2006ರ ಫೆಬ್ರುವರಿ 7ರಂದು ಅವರು ಹೇಂಂತ್ ಸೊರೇನ್ ಅವರನ್ನು ವಿವಾಹವಾಗಿದ್ದು, ಇವರಿಗೆ ನಿಖಿಲ್ ಹಾಗೂ ಅಂಶ್ ಎಂಬ ಇಬ್ಬರು ಮಕ್ಕಳಿದ್ದಾರೆ.
ಕಲ್ಪನಾ ಅವರ ತಂದೆ ಉದ್ಯಮಿ ಹಾಗೂ ತಾಯಿ ಗೃಹಿಣಿ. ಕಲ್ಪನಾ ವ್ಯವಹಾರ ಮತ್ತು ದತ್ತಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಲ್ಪನಾ ಶಾಲೆಯನ್ನು ನಡೆಸುತ್ತಿದ್ದು, ಸಾವಯವ ಕೃಷಿ ಮಾಡುತ್ತಿದ್ದಾರೆ. 1976ರಲ್ಲಿ ರಾಂಚಿಯಲ್ಲಿ ಜನಿಸಿದ ಕಲ್ಪನಾ ಎಂಜಿನಿಯರಿಂಗ್ ಹಾಗೂ ಎಂಬಿಎ ಪದವಿ ಪಡೆದಿದ್ದಾರೆ.
ಕಲ್ಪನಾ ಶಾಸಕರಲ್ಲದೇ ಇರುವ ಕಾರಣ ಸಿಎಂ ಆದಲ್ಲಿ, ಒಬ್ಬ ಶಾಸಕ ಅವರ ಸ್ಥಾನವನ್ನು ತೆರವುಗೊಳಿಸಬೇಕಾಗುತ್ತದೆ. ಬಿಜೆಪಿಯ ನಿಶಿಕಾಂತ್ ದುಬೆ ಅವರ ಪ್ರಕಾರ, ಹೇಮಂತ್ ಅವರ ಸಹೋದರ ಬಸಂತ್ ಸೊರೇನ್ ಹಾಗೂ ಅತ್ತಿಗೆ ಸೀತಾ ಸೊರೆನ್, ಕಲ್ಪನಾ ಅವರನ್ನು ಸಿಎಂ ಮಾಡುವ ಪ್ರಸ್ತಾವವನ್ನು ವಿರೋಧಿಸಿದ್ದಾರೆ.
ಆದರೆ ಇದನ್ನು ಸೊರೇನ್ ಸಹೋದರ ಅಲ್ಲಗಳೆದಿದ್ದು, ಕುಟುಂಬದಲ್ಲಿ ಯಾವುದೇ ಒಡಕು ಇಲ್ಲ; ಜಾರ್ಖಂಡ್ ಮುಕ್ತಿ ಮೋರ್ಚಾ ಕುಟುಂಬ ಸಂಘಟಿತವಾಗಿದ್ದು, ಸಂಘರ್ಷ ಇರುವುದು ನಿಶಿಕಾಂತ್ ದುಬೆ ಕುಟುಂಬದಲ್ಲಿ ಎಂದು ತಿರುಗೇಟು ನೀಡಿದ್ದಾರೆ.