ಮಂಗಳೂರು: ಏಕರೂಪ ನಾಗರಿಕ ಸಂಹಿತೆಯ ಕರಡು ಪ್ರತಿ ನೀಡಲು ಕೆಥೊಲಿಕ್ ಸಭಾ ಮನವಿ

Update: 2023-07-12 08:28 GMT

ಮಂಗಳೂರು, ಜು. 12: 'ಕೇಂದ್ರ ಸರಕಾರ ಏಕರೂಪ ನಾಗರಿಕ ಸಂಹಿತೆ(ಯುಸಿಸಿ)ಯನ್ನು ತರುವ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಆದರೆ ಈ ಬಗ್ಗೆ ಪ್ರಶ್ನಾವಳಿ ನೀಡುವ ಬದಲು ಸಂಹಿತೆಯಡಿ ವೈಯಕ್ತಿಕ ಕಾನೂನುಗಳಿಗೆ ಯಾವ ರೀತಿಯಲ್ಲಿ ಪರಿಹಾರ ಒದಗಿಸಲಾಗುತ್ತದೆ ಎಂಬ ಕುರಿತಂತೆ ವಿವರವನ್ನು ಒಳಗೊಂಡ ಕರಡುಪ್ರತಿಯನ್ನು ನೀಡಿದರೆ ಈ ಬಗ್ಗೆ ಅಭಿಪ್ರಾಯ ಮಂಡಿಸಲಾ ಸಾಧ್ಯವಾಗಲಿದೆ' ಎಂದು ಕಥೋಲಿಕ್ ಸಭಾ ಮಂಗಳೂರು ಪ್ರದೇಶ ಇದರ ಕಾನೂನು ಸಲಹೆಗಾರ ನ್ಯಾಯವಾದಿ ಪ್ರವೀಣ್ ಪಿಂಟೋ ಹೇಳಿದ್ದಾರೆ. 

ಬುಧವಾರ ನಗರದ ಪ್ರೆಸ್‌ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 'ದೇಶದಲ್ಲಿ 10ಕ್ಕೂ ಹೆಚ್ಚು ಪ್ರಬಲ ಧರ್ಮಗಳು, 3 ಸಾವಿರ ಜಾತಿಗಳು, 25 ಸಾವಿರ ಉಪಜಾತಿಗಳು, ಸುಮಾರು 1109 ಪರಿಶಿಷ್ಟ ಜಾತಿಗಳು ಹಾಗೂ 744 ಪರಿಶಿಷ್ಟ ಪಂಗಡಗಳು ಇದ್ದು, ಎಲ್ಲ ಜಾತಿಗಳು ತಮ್ಮದೇ ಆದ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯಗಳನ್ನು, ಭಾಷೆ, ಪರಂಪರೆಯನ್ನು ಹೊಂದಿದೆ. ಆದರೆ ಯುಸಿಸಿ ಯಾವುದೇ ಕರಡನ್ನು ಜನರಿಗೆ ನೀಡದೆ ಅಭಿಪ್ರಾಯ ಕೇಳಿದರೆ ಹೇಗೆ' ಎಂದು ಪ್ರಶ್ನಿಸಿದರು.

'ದೇಶದಲ್ಲಿ ನಾನಾ ಮದುವೆ, ವಿಚ್ಛೇಧನ, ಉತ್ತರಾಧಿಕಾರ ದತ್ತು ಸೇರಿದಂತೆ ಎಲ್ಲಕ್ಕೂ ವೈಯಕ್ತಿಕ ಕಾನೂನುಗಳನ್ನು ಕ್ರೋಡೀಕರಿಸಲಾಗಿದೆ. ಆದರೆ ಭಾರತದ ಹೆಚ್ಚಿನ ಕಾನೂನುಗಳು ಧರ್ಮ, ಜಾತಿ, ವರ್ಗ, ಜನಾಂಗ ಇತ್ಯಾದಿಗಳ ಹೊರತಾಗಿಯೂ ಎಲ್ಲ ನಾಗರಿಕರಿಗೆ ಏಕರೂಪವಾಗಿ ಅನ್ವಯವಾಗಿದ್ದರೂ ಸಹ ಅವರ ಆಚಾರ ಮತ್ತು ಸಂಪ್ರದಾಯಗಳು ವಿಭಿನ್ನವಾಗಿದೆ. ವಿಶಿಷ್ಟ ಆಚರಣೆಗಳನ್ನು ರಕ್ಷಿಸಲು ವೈಯಕ್ತಿಕ ಕಾನೂನು ಬಹಳ ಅಗತ್ಯವಿದೆ. ಇಂತಹ ಕಾನೂನುಗಳನ್ನು ತೆಗೆದುಹಾಕುವುದು ಪದ್ದತಿ ಹಾಗೂ ಆಚರಣೆಗಳಿಗೆ ಮಾರಕವಾಗಿದೆ' ಎಂದರು.

ಸೆ. 8ರಂದು ತೆನೆ ಹಬ್ಬಕ್ಕೆ ರಜೆ ಘೋಷಣೆಗೆ ಆಗ್ರಹ: ಕಥೋಲಿಕ್ ಸಭಾ ಮಂಗಳೂರು ಪ್ರದೇಶ ಇದರ ಅಧ್ಯಕ್ಷ ಆಲ್ವಿನ್ ಡಿಸೋಜ ಮಾತನಾಡಿ, ದ.ಕ ಹಾಗೂ ಉಡುಪಿಯಲ್ಲಿ ಸೆ.8ರಂದು ತೆನೆ ಹಬ್ಬವನ್ನು ಅನಾದಿ ಕಾಲದಿಂದಲ್ಲೂ ಕ್ರೈಸ್ತರು ಆಚರಿಸಿಕೊಂಡು ಬರುತ್ತಿದ್ದು, ಈ ಜಿಲ್ಲೆಗಳಲ್ಲಿ ಈ ಹಬ್ಬಕ್ಕೆ ಸರಕಾರಿ ರಜೆಯನ್ನು ಘೋಷಣೆ ಮಾಡಬೇಕು. ಕ್ರೈಸ್ತ ನಿಗಮಕ್ಕೆ 100 ಕೋಟಿ ರೂ. ನೀಡಲಾಗಿದೆ. ಮುಂದೆ ಅದಕ್ಕೆ 200 ಕೋಟಿ ರೂ. ನೀಡಬೇಕು. ಮತಾಂತರ ನಿಷೇಧ ಕಾಯಿದೆಯನ್ನು ಹಿಂದಕ್ಕೆ ಪಡೆಯುವ ಕಾರ್ಯ ಮಾಡುವಂತೆ ಸರಕಾರಕ್ಕೆ ಮನಿವಿ ಮೂಲಕ ಒತ್ತಾಯಿಸಲಾಗುತ್ತದೆ ಎಂದರು.

ಕಥೋಲಿಕ್ ಸಭಾ ಮಂಗಳೂರು ಪ್ರದೇಶದ ಮಾಜಿ ಅಧ್ಯಕ್ಷ ಪಾವ್ಲ್ ರೋಲ್ಫಿ ಡಿಕೋಸ್ತ, ನಿಕಟಪೂರ್ವ ಅಧ್ಯಕ್ಷ ಸ್ಟ್ಯಾನಿ ಲೋಬೊ, ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೆರೋ ಮೊದಲಾದವರು ಉಪಸ್ಥಿತರಿದ್ದರು.

 

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News