ಪ್ರಾಕೃತಿಕ ವಿಕೋಪಗಳಿಗೆ ತಕ್ಷಣ ಸ್ಪಂದಿಸಿ: ರವಿ ಅಂಗಡಿ

Update: 2023-07-12 14:30 GMT

ಉಡುಪಿ, ಜು.12: ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಉಡುಪಿ ತಾಲೂಕಿನಲ್ಲಿ ವಿಕೋಪಗಳಿಂದ ಜನ ಮತ್ತು ಜಾನುವಾರುಗಳ ಜೀವ ಹಾನಿಯಾ ಗದಂತೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಸೂಕ್ತ ರಕ್ಷಣೆ ಒದಗಿಸುವಂತೆ ತಹಶೀಲ್ದಾರ್ ರವಿ ಎಸ್. ಅಂಗಡಿ ಹೇಳಿದ್ದಾರೆ.

ಬುಧವಾರ ಉಡುಪಿ ತಾಲೂಕು ಕಚೇರಿಯಲ್ಲಿ ನಡೆದ ಪ್ರಾಕೃತಿಕ ವಿಕೋಪ ನಿರ್ವಹಣೆ ಕುರಿತ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ತಾಲೂಕಿನ ಎಲ್ಲಾ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ಲಭ್ಯವಿದ್ದು, ಯಾವುದೇ ಸಂದರ್ಭದಲ್ಲಿ ಸಾರ್ವಜನಿಕರ ನೆರವಿಗೆ ಸ್ಪಂದಿಸಬೇಕು. ತಮ್ಮ ಮೊಬೈಲ್‌ ಗಳನ್ನು ಸ್ವಿಚ್‌ಆಫ್ ಮಾಡದೇ ದಿನದ 24 ಗಂಟೆಯೂ ಸಂಪರ್ಕಕ್ಕೆ ಸಿಗುವಂತಿರಬೇಕು ಎಂದರು.

ಮಳೆಯಿಂದ ಹಾನಿಯುಂಟಾದಲ್ಲಿ ಕೂಡಲೇ ನಷ್ಠದ ಅಂದಾಜು ಮಾಹಿತಿ ಯನ್ನು ಸಿದ್ಧಪಡಿಸಿ, ಶೀಘ್ರದಲ್ಲಿ ಪರಿಹಾರ ತಲುಪಿಸಬೇಕು. ನೆರೆಯಿಂದ ಹಾನಿಗೊಳಗಾಗುವ ಪ್ರದೇಶಗಳನ್ನು ಮುಂಚಿತವಾಗಿ ಗುರುತಿಸಿ, ತುರ್ತು ಸಂದರ್ಭದಲ್ಲಿ ಅಲ್ಲಿ ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ ಸಾರ್ವಜನಿಕ ರನ್ನು ಅಪಾಯದಿಂದ ರಕ್ಷಿಸಬೇಕು ಎಂದರು.

ವಿಕೋಪದಿಂದ ರಕ್ಷಿಸಿದ ಸಾರ್ವಜನಿಕರಿಗೆ ಸೂಕ್ತ ವಸತಿ ಕಲ್ಪಿಸಲು ಕಾಳಜಿ ಕೇಂದ್ರಗಳನ್ನು ಗುರುತಿಸಿ, ಅಲ್ಲಿ ಎಲ್ಲಾ ರೀತಿಯ ಅಗತ್ಯ ಮೂಲಭೂತ ಸೌಕರ್ಯಗಳನ್ನು ದೊರಕಿಸಿಕೊಡಬೇಕು. ಮೆಸ್ಕಾಂ ಮತ್ತು ಅರಣ್ಯ ಇಲಾಖೆ ವತಿಯಿಂದ ಅಪಾಯಕಾರಿ ಮರಗಳನ್ನು ಗುರುತಿಸಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಮಳೆಯಿಂದ ಮರಗಳು ಬಿದ್ದಲ್ಲಿ ತಕ್ಷಣ ಅದನ್ನು ತೆರವುಗೊಳಿಸಲು ಅಗತ್ಯವಿರುವ ಉಪಕರಣಗಳು ಮತ್ತು ಸಿಬ್ಬಂದಿಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಅವರು ತಿಳಿಸಿದರು.

ಶಿಕ್ಷಣ ಇಲಾಖೆಯ ವತಿಯಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮಳೆಗಾಲದಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ತಿಳಿಸುವ ಕಾರ್ಯ ಆಗಬೇಕು. ನಗರಸಭೆ ವತಿಯಿಂದ ಉಡುಪಿ ನಗರದ ತೋಡುಗಳಲ್ಲಿ ನೀರು ಸರಾಗವಾಗಿ ಹರಿದುಹೋಗುವ ಕುರಿತಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಹಾನಿ ಬಗ್ಗೆ ಸಂಬಂಧಿ ಸಿದ ಅಧಿಕಾರಿಗಳು ನಷ್ಟದ ವಿವರಗಳನ್ನು ಶೀಘ್ರದಲ್ಲಿ ನೀಡಬೇಕು ಎಂದರು.

ಸಭೆಯಲ್ಲಿ ಉಡುಪಿ ತಾಲೂಕು ಮಟ್ಟದ ವಿವಿಧ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News