ಮಂಜೇಶ್ವರ : ಯುವಕನಿಗೆ ಗುಂಡೇಟು; ಆಸ್ಪತ್ರೆಗೆ ದಾಖಲು

ಮಂಜೇಶ್ವರ : ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಗುಂಡೇಟು ತಗಲಿರುವ ಘಟನೆ ಕೇರಳದ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕಜೆಪದವು ಎಂಬಲ್ಲಿ ರವಿವಾರ ನಡೆದಿದೆ.
ಕರ್ನಾಟಕ ಗಡಿಭಾಗ ಮುಡಿಪು ಸಮೀಪದ ಬಾಕ್ರಬೈಲ್ ನಡಿಬೈಲು ನಿವಾಸಿ ಸವಾದ್ (20) ಗಾಯಗೊಂಡ ಯುವಕ. ಯುವ ಅಡಿಕೆ ವ್ಯಾಪಾರಿಯಾಗಿರುವ ಸವಾದ್ ರವಿವಾರ ರಾತ್ರಿ ವೇಳೆ ಕಾಡಿನ ಮಧ್ಯೆ ಇರುವ ಕಾಲುದಾರಿಯಲ್ಲಿ ಮನೆಗೆ ತೆರಳುತ್ತಿರುವ ಸಂದರ್ಭ ಕಜೆಪದವು ತಿರುವಿನಲ್ಲಿ ಈ ಘಟನೆ ನಡೆದಿದೆ.
ಬೇಟೆಗಾರರು ಕಾಡಿನಲ್ಲಿ ಹಂದಿ ಬೇಟೆಗೆ ಸಿಡಿಯುವ ವಸ್ತು ಇಟ್ಟಿದ್ದರು. ಇದನ್ನು ಗಮಿನಿಸದ ಸವಾದ್ ನಡಕೊಂಡು ಹೋಗುವ ವೇಳೆ ತುಳಿದ ಕಾರಣ ತಗುಲಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರಿಂದ ಕಾಲಿಗೆ ಗಂಭೀರ ಗಾಯಗೊಂಡ ಸಾವಾದ್ ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಜೇಶ್ವರ ಠಾಣಾ ಪೋಲೀಸರು ಸ್ಥಳದಲ್ಲಿ ಬೀಡುಬಿಟ್ಟಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ. ಗುಂಡಿಟ್ಟ ವ್ಯಕ್ತಿಯ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ.
ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಜಿಲ್ಲಾ ಪಂಚಾಯತ್ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಮತ್ತಿತರರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.