ಕಾಶ್ಮೀರ: ಉಗ್ರರು ತೋಡಿದ ಖೆಡ್ಡಾದ ಬಗ್ಗೆ ಎಚ್ಚರ ಅಗತ್ಯ

ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದ ಸ್ಥಳದ ಬಳಿ ಭಾರಿ ಪ್ರಮಾಣದಲ್ಲಿ ನಿಯೋಜಿಸಲಾದ ಭಾರತೀಯ ಸೇನೆ
PC: x.com/TheYouthPlus
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪೆಹಲ್ಗಾಮ್‌ನಲ್ಲಿ ಭಾರತೀಯ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿ ಐದು ದಿನಗಳು ಕಳೆದಿವೆ. ಪ್ರಧಾನಿ ಮೋದಿಯವರು ಚುನಾವಣೆ ನಡೆಯಲಿರುವ ಬಿಹಾರಕ್ಕೆ ತೆರಳಿ ಭಾಷಣಗಳ ಕ್ಷಿಪಣಿಗಳನ್ನು ಹಾರಿಸಿದ್ದಾರೆ. ಆದರೆ ಪ್ರಧಾನಿ ಮೋದಿಯ ಭಾಷಣಗಳಿಗೆ ಹೆದರಿ ಉಗ್ರಗಾಮಿಗಳು ತಮ್ಮ ಕುಕೃತ್ಯಗಳನ್ನು ನಿಲ್ಲಿಸುವುದಾಗಲಿ, ಅವರಿಗೆ ಬೆಂಬಲ ನೀಡುವ ಕೆಲಸದಿಂದ ಪಾಕಿಸ್ತಾನ ಹಿಂದೆ ಸರಿಯುತ್ತದೆ ಎಂದು ಭಾವಿಸುವುದಾಗಲಿ ನಮ್ಮ ಹುಂಬತನವಾಗುತ್ತದೆ. ‘‘ಉಗ್ರರ ಕೃತ್ಯದಿಂದ ಭಾರತೀಯರ ರಕ್ತ ಕುದಿಯುತ್ತಿದೆ’’ ಎಂದು ಪ್ರಧಾನಿ ಮೋದಿಯವರು ತಮ್ಮ ‘ಮನ್ ಕೀ ಬಾತ್’ನಲ್ಲಿ ಹೇಳಿದ್ದಾರೆ. ನಿಜ. ಆದರೆ ಅವರ ರಕ್ತ ಕುದಿಯುತ್ತಿರುವುದು ಬರೇ ಉಗ್ರರ ವಿರುದ್ಧ ಮಾತ್ರವಲ್ಲ. ‘ಉಗ್ರರನ್ನು ಸಂಪೂರ್ಣ ನಿಯಂತ್ರಿಸಿದ್ದೇವೆ’ ಎಂದು ಹೇಳುತ್ತಲೇ, ನಾಗರಿಕರನ್ನು ಉಗ್ರರ ಬಾಯಿಗೆ ಕೊಟ್ಟ ಕೇಂದ್ರ ಸರಕಾರದ ವೈಫಲ್ಯದ ಬಗ್ಗೆಯೂ ಅವರು ಆಕ್ರೋಷಿತರಾಗಿದ್ದಾರೆ. ಸರಕಾರದ ಮಾತುಗಳನ್ನು ನಂಬಿ ಕಾಶ್ಮೀರಕ್ಕೆ ಪ್ರವಾಸ ಹೋದ ಪ್ರವಾಸಿಗರಿಗೆ ಕನಿಷ್ಠ ಭದ್ರತೆಯನ್ನು ಒದಗಿಸದೆ ಅವರನ್ನು ಹಾಡಹಗಲೇ ಉಗ್ರರಿಗೆ ಬಲಿಕೊಟ್ಚ ಸರಕಾರದ ವಿರುದ್ಧ ಭಾರತೀಯರ ರಕ್ತ ಕುದಿಯುತ್ತಿರುವುದು ಸುಳ್ಳಲ್ಲ. ಈ ಆಕ್ರೋಶದಿಂದ ಪಾರಾಗುವ ಭಾಗವಾಗಿ ದಾಳಿಗೆ ‘ಹಿಂದೂ-ಮುಸ್ಲಿಮ್’ ಬಣ್ಣ ಕೊಡಲು ಸರಕಾರದ ನೇತೃತ್ವದಲ್ಲೇ ಗರಿಷ್ಠ ಪ್ರಯತ್ನ ನಡೆಯುತ್ತಿದೆಯಾದರೂ, ಸ್ಥಳೀಯ ಕಾಶ್ಮೀರಿಗಳು ಪ್ರವಾಸಿಗರನ್ನು ರಕ್ಷಿಸಲು ನೀಡಿದ ಕೊಡುಗೆ, ಕೋಮುವಾದಿ ಶಕ್ತಿಗಳ ಬಾಯಿ ಮುಚ್ಚಿಸುವಂತೆ ಮಾಡಿದೆ. ಮಾಧ್ಯಮಗಳ ಬಲದಿಂದ ಸಾಕಷ್ಟು ವದಂತಿಗಳನ್ನು ಹರಡಲು ದುಷ್ಕರ್ಮಿಗಳು ಯಶಸ್ವಿಯಾಗಿದ್ದಾರಾದರೂ, ಉಗ್ರರಿಂದ ಪ್ರಾಣ ಉಳಿಸಿಕೊಂಡು ಬಂದ ಪ್ರವಾಸಿಗರು ಕಾಶ್ಮೀರಿಗಳ ನೆರವಿನ ಬಗ್ಗೆ ಮುಕ್ತಕಂಠದಿಂದ ಶ್ಲಾಘಿಸುತ್ತಿರುವುದು ಅವರಿಗೆ ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ.
ಇದೇ ಸಂದರ್ಭದಲ್ಲಿ, ತನ್ನ ವಿರುದ್ಧ ಹರಿದು ಬರುತ್ತಿರುವ ಆಕ್ರೋಶಗಳಿಂದ ರಕ್ಷಿಸಿಕೊಳ್ಳಲು ಕೇಂದ್ರ ಸರಕಾರ ಗರಿಷ್ಠ ಪ್ರಯತ್ನಗಳನ್ನು ಮಾಡುತ್ತಿದೆ. ಉಗ್ರರನ್ನು ಹಿಡಿದು ಅವರಿಗೆ ಶಿಕ್ಷೆ ವಿಧಿಸುವುದಕ್ಕಿಂತಲೂ, ಸಂಕಟ, ನೋವು, ಹತಾಶೆಗಳಿಂದ ಜರ್ಜರಿತವಾಗಿರುವ ದೇಶದ ಜನತೆಯನ್ನು ತಕ್ಷಣಕ್ಕೆ ಸಮಾಧಾನ ಪಡಿಸುವ ದಾರಿಗಾಗಿ ಅದು ತಡಕಾಡುತ್ತಿದೆ. ಐದು ದಿನ ಕಳೆದರೂ, ಉಗ್ರರು ಎಲ್ಲಿದ್ದಾರೆ ಎನ್ನುವುದನ್ನು ಹುಡುಕಿ ತೆಗೆಯುವಲ್ಲಿ ಸೇನೆ ವಿಫಲವಾಗಿದೆ. ಅದು ಅಷ್ಟು ಸುಲಭವೂ ಅಲ್ಲ. ಇದೇ ಸಂದರ್ಭದಲ್ಲಿ ‘ಪಾಕಿಸ್ತಾನದ ಕೈವಾಡವಿದೆ’ ಎಂದು ಏಕಾಏಕಿ ಅದರ ಮೇಲೆ ಯುದ್ಧ ಸಾರುವುದಕ್ಕೂ ಸಾಧ್ಯವಿಲ್ಲ. ಈ ಕಾರಣದಿಂದ, ಜನರನ್ನು ತಕ್ಷಣ ಸಮಾಧಾನಿಸುವ ಭಾಗವಾಗಿ ಕೆಲವು ಕಠಿಣ ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದ್ದೇವೆ ಎಂದು ಭಾರತ ಘೋಷಿಸಿದೆ. ಆದರೆ ಸರಕಾರದ ಈ ನಿರ್ಧಾರದ ಬಗ್ಗೆ ಸ್ವತಃ ಭಾರತದೊಳಗಿರುವ ರಾಜಕೀಯ ನಾಯಕರೇ ವಿಶ್ವಾಸವನ್ನು ಹೊಂದಿಲ್ಲ. ಇದೊಂದು ಕಣ್ಕಟ್ಟಿನ ನಿರ್ಧಾರ ಎಂದು ಹಲವರು ಈಗಾಗಲೇ ಟೀಕಿಸಿದ್ದಾರೆ. ಸಿಂಧೂ ನದಿ ನೀರನ್ನು ತಡೆ ಹಿಡಿದರೆ ಅದನ್ನು ಎಲ್ಲಿ ದಾಸ್ತಾನು ಮಾಡಬೇಕು ಎನ್ನುವ ಪ್ರಾಥಮಿಕ ಅರಿವೂ ಸರಕಾರಕ್ಕೆ ಇಲ್ಲ ಎಂದು ಹಲವರು ಹೇಳಿಕೆ ನೀಡಿದ್ದಾರೆ. ಉಳಿದಂತೆ ಭಾರತದ ನಿರ್ಧಾರಕ್ಕೆ ಪ್ರತಿಯಾಗಿ ಪಾಕಿಸ್ತಾನವೂ ಕ್ರಮಗಳನ್ನು ತೆಗೆದುಕೊಂಡಿದೆ. ಇದೇ ಸಂದರ್ಭದಲ್ಲಿ ‘ತನಿಖೆಗೆ ನಾನು ಸಿದ್ಧ’ ಎಂದು ಪಾಕಿಸ್ತಾನ ಘೋಷಿಸಿಕೊಂಡಿರುವುದು ಮತ್ತು ತನಿಖೆಯಲ್ಲಿ ರಶ್ಯ, ಚೀನಾ ಕೂಡ ಭಾಗಿಯಾಗಬೇಕು ಎಂದು ಬೇಡಿಕೆಯಿಟ್ಟಿರುವುದು ಭಾರತ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅತ್ತ ಪಾಕಿಸ್ತಾನವನ್ನು ಶಿಕ್ಷಿಸಲು ಸಾಧ್ಯವಿಲ್ಲ, ಇತ್ತ ಉಗ್ರರೂ ಕೈಗೆ ಸಿಕ್ಕದೆ ನುಣುಚಿಕೊಂಡಿದ್ದಾರೆ. ಹೀಗಿರುವಾಗ, ಬಲ ಪ್ರದರ್ಶಿಸಲು ಸರಕಾರದ ಮುಂದಿರುವುದು ಅಮಾಯಕ ಕಾಶ್ಮೀರಿಗಳು ಮಾತ್ರ.
ಕೋಟೆ ಸೂರೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ, ಉಗ್ರರು ಬಂದು ಹೋದ ಮೇಲೆ ಸೇನೆ ಎಚ್ಚರಗೊಂಡಿದೆ. ಸಾವಿರಾರು ಪ್ರವಾಸಿಗರ ರಕ್ಷಣೆಗೆ ನಾಲ್ಕೈದು ಯೋಧರನ್ನು ಇಟ್ಟಿದ್ದರೂ ಇಂದು ಉಗ್ರರನ್ನು ಹುಡುಕುತ್ತಾ ಕಾಶ್ಮೀರದ ಕಾಡು ಮೇಡುಗಳನ್ನು ಅಲೆಯುವ ಅಗತ್ಯವಿರಲಿಲ್ಲ. ಇದೀಗ ಉಗ್ರರ ತನಿಖೆಗೆ ಬಿರುಸಿನ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಈ ಕಾರ್ಯಾಚರಣೆಯ ಲಾಭವನ್ನು ಮತ್ತೆ ಉಗ್ರರೇ ತಮ್ಮದಾಗಿಸಿಕೊಳ್ಳುವ ಸಾಧ್ಯತೆಗಳನ್ನು ಕೂಡ ನಾವು ಅಲ್ಲಗಳೆಯುವಂತಿಲ್ಲ. ‘‘ಉಗ್ರರ ಕಾರ್ಯಾಚರಣೆಯ ಹೆಸರಿನಲ್ಲಿ ಕಾಶ್ಮೀರದ ಅಮಾಯಕರಿಗೆ, ನಾಗರಿಕರಿಗೆ ತೊಂದರೆಯಾಗಬಾರದು’’ ಎಂದು ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಹೇಳಿಕೆಯನ್ನು ನೀಡಿದ್ದಾರೆ. ಈಗಾಗಲೇ ಶಂಕಿತ ಉಗ್ರರನ್ನು ಗುರಿ ಮಾಡಿ ಸೇನೆ ದಾಳಿ ನಡೆಸುತ್ತಿದೆ. ನಾಗರಿಕರ ಮನೆಬಾಗಿಲನ್ನು ತಟ್ಟುವ ಕಾರ್ಯ ಜಾರಿಯಲ್ಲಿದೆ. ಉಗ್ರರಿಗೆ ನೆರವು ನೀಡಿದ್ದಾರೆ ಎಂಬ ಅನುಮಾನವಿರುವ ಕಾಶ್ಮೀರಿಗಳ ನಿವಾಸಗಳನ್ನೇ ಯೋಧರು ಧ್ವಂಸಗೊಳಿಸಿದ್ದಾರೆ ಎಂದು ಮಾಧ್ಯಮಗಳು ಸಂಭ್ರಮಿಸಿ ವರದಿ ಮಾಡಿವೆ. ಅನುಮಾನಗಳ ಆಧಾರದಲ್ಲಿ, ಶಂಕೆಯ ಆಧಾರದಲ್ಲಿ ನಾಗರಿಕರಿಗೆ ಚಿತ್ರಹಿಂಸೆ ನೀಡುವುದು, ಅವರ ನಿವಾಸಗಳನ್ನು ಧ್ವಂಸಗೊಳಿಸುವುದರಿಂದ ಕಾಶ್ಮೀರದಲ್ಲಿ ಉಗ್ರವಾದ ದಮನಗೊಳ್ಳುವುದಿಲ್ಲ. ಬದಲಿಗೆ ಇನ್ನಷ್ಟು ಉಲ್ಬಣಿಸುತ್ತದೆ ಎನ್ನುವ ಎಚ್ಚರಿಕೆ ಕೇಂದ್ರ ಸರಕಾರಕ್ಕಿರಬೇಕು. ಕಾಶ್ಮೀರದಲ್ಲಿ ನಾಗರಿಕರು ಉಗ್ರರ ಜೊತೆಗಿಲ್ಲ ಎನ್ನುವುದು ಪೆಹಲ್ಗಾಮ್ ದಾಳಿಯ ಸಂದರ್ಭದಲ್ಲೇ ಸಾಬೀತಾಗಿದೆ. ಉಗ್ರರ ವಿರುದ್ಧ ಹೋರಾಡುತ್ತಾ ಅಲ್ಲಿನ ಶ್ರೀಸಾಮಾನ್ಯನೊಬ್ಬ ಪ್ರಾಣವನ್ನು ತೆತ್ತಿದ್ದಾನೆ. ಗಂಡಸರು, ಮಹಿಳೆಯರು ಎನ್ನದೆ ಕಾಶ್ಮೀರಿಗಳು ಭಾರತದ ಪ್ರವಾಸಿಗರ ರಕ್ಷಣೆಗೆ ಕೈಜೋಡಿಸಿದ್ದಾರೆ. ಜನರ ತಕ್ಷಣದ ಆಕ್ರೋಶಗಳಿಂದ ರಕ್ಷಣೆ ಪಡೆಯುವುದಕ್ಕಾಗಿ ಈ ಅಮಾಯಕ ಕಾಶ್ಮೀರಿಗಳನ್ನು ಸರಕಾರ ಗುರಾಣಿಯಾಗಿ ಬಳಸಿದರೆ ಅದರಿಂದ ಭವಿಷ್ಯದಲ್ಲಿ ನಷ್ಟವಿದೆ. ಉಗ್ರರು ದಾಳಿ ನಡೆಸಿರುವುದು ಅಲ್ಲಿರುವ ಹಿಂದೂಗಳ ವಿರುದ್ಧವಲ್ಲ. ಬದಲಿಗೆ ಕಾಶ್ಮೀರದ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿರುವ ಭಾರತದ ವಿರುದ್ಧ. ಅದಕ್ಕೆ ಬದಲಾಗಿ ಭಾರತದ ಸರಕಾರವು ಸ್ಥಳೀಯ ನಾಗರಿಕರ ಜೊತೆಗೆ ಅಮಾನವೀಯವಾಗಿ ವರ್ತಿಸಿದರೆ, ಪರೋಕ್ಷವಾಗಿ ಉಗ್ರರ ಕೃತ್ಯವನ್ನು ಸಮರ್ಥಿಸಿದಂತಾಗುತ್ತದೆ. ಸೇನೆಯ ದೌರ್ಜನ್ಯದಿಂದ ರೋಸಿದ ಯುವಕರು ಉಗ್ರವಾದಿಗಳ ಕುರಿತಂತೆ ಮೃದು ನಿಲುವನ್ನು ತಳೆಯುವ ಸಾಧ್ಯತೆಗಳಿವೆ. ಕಳೆದ ನಾಲ್ಕೈದು ವರ್ಷಗಳಿಂದ ಕಾಶ್ಮೀರಿ ನಾಗರಿಕರನ್ನು ನಮ್ಮವರನ್ನಾಗಿಸಲು ನಡೆಸಿದ ಪ್ರಯತ್ನಗಳಿಗೆ ಇದು ಭಾರೀ ಹಿನ್ನಡೆಯನ್ನುಂಟು ಮಾಡಬಹುದು. ಉಗ್ರರ ವಿರುದ್ಧದ ಕಾರ್ಯಾಚರಣೆ ನಡೆಯಲೇ ಬೇಕು. ಅವರ ದಮನವಾಗಲೇ ಬೇಕು. ಆದರೆ ಅದು ಕಾಶ್ಮೀರಿಗಳ ಬೆಂಬಲದ ಜೊತೆಗೇ ಆಗಬೇಕಾದ ಕೆಲಸ. ಕಾಶ್ಮೀರಿಗಳನ್ನು ನಮ್ಮವರನ್ನಾಗಿಸುವುದೇ ಉಗ್ರವಾದಿಗಳನ್ನು ಎದುರಿಸಲು ಸರಕಾರಕ್ಕಿರುವ ಅತ್ಯುತ್ತಮ ದಾರಿ. ಕಾಶ್ಮೀರಿಗಳು ಭಾರತದ ಜೊತೆಗೆ ಗಟ್ಟಿಯಾಗಿ ನಿಂತ ದಿನ, ಉಗ್ರವಾದಿಗಳು ಸಂಪೂರ್ಣ ಸೋಲುತ್ತಾರೆ. ಉಗ್ರವಾದಿಗಳು ತಮ್ಮ ಕೃತ್ಯಗಳ ಮೂಲಕ ಕಾಶ್ಮೀರಿಗಳನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸುತ್ತಿರುವಾಗ, ಅವರು ತೋಡಿದ ಖೆಡ್ಡಾಕ್ಕೆ ನಾವು ಹೋಗಿ ಬೀಳಬಾರದು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರ ಸಲಹೆಯನ್ನು ಕೇಂದ್ರ ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು.