HMPV ವೈರಸ್ ನಿಂದ ಯಾವುದೇ ಸಮಸ್ಯೆಯಾಗುವುದಿಲ್ಲ, ಜನರಲ್ಲಿ ಭಯಹುಟ್ಟಿಸಬೇಡಿ : ಡಾ.ಶ್ರೀನಿವಾಸ ಕಕ್ಕಿಲ್ಲಾಯ
ಮಂಗಳೂರು : ಮನುಷ್ಯರನ್ನು ಸೋಂಕುವ ಮೆಟಾ ನ್ಯೂಮೋ ವೈರಸ್ (HMPV) ವೈರಸ್ ಅತ್ಯಂತ ಸರಳವಾದ, ಯಾವುದೇ ಸಮಸ್ಯೆ ಉಂಟುಮಾಡದ ವೈರಸ್ ಸೋಂಕಾಗಿದೆ. ಇದು ಮಕ್ಕಳಲ್ಲಿ ಎರಡು ದಿನ ಸಾಮಾನ್ಯ ಜ್ವರದೊಂದಿಗೆ ನೆಗಡಿ, ಕೆಮ್ಮನ್ನುಂಟು ಮಾಡಿ ತಾನಾಗಿ ವಾಸಿಯಾಗುತ್ತದೆ ಎಂದು ಮಂಗಳೂರಿನ ವೈದ್ಯ ಶ್ರೀನಿವಾಸ್ ಕಕ್ಕಿಲ್ಲಾಯ ಅವರು ಹೇಳಿದ್ದಾರೆ.
ರಾಜ್ಯದಲ್ಲಿ HMPV ವೈರಸ್ ಕಾಣಿಸಿಕೊಂಡಿರುವ ಕುರಿತು ವರದಿಯಾದ ಬಳಿಕ, ʼವಾರ್ತಾಭಾರತಿʼಯೊಂದಿಗೆ ಮಾತನಾಡಿದ ಅವರು, ಈಗ ವಯಸ್ಕರಾಗಿರುವ ನಮಗೆ ಮಕ್ಕಳಾಗಿದ್ದಾಗಲೇ ಈ ಸೋಂಕು ತಗಲಿರುವ ಎಲ್ಲಾ ಸಾಧ್ಯತೆಗಳಿವೆ, ಅದರಿಂದ ನಮಗೆ ರೋಗ ನಿರೋಧಕ ಶಕ್ತಿ ಬೆಳೆದಿರುವುದರಿಂದ ಈಗ ಮತ್ತೆ ಅದು ಸೋಂಕುವುದಿಲ್ಲ. ಈಗ ಕಿರಿಯರಾಗಿರುವ ಮಕ್ಕಳಿಗೆ ಈ ಸೋಂಕು ತಗಲದೇ ಅವರ ಮಟ್ಟಿಗೆ ಇದು ಹೊಸದಾಗಿರುವುದರಿಂದ ಅವರಿಗೇ ಇದು ಸೋಂಕನ್ನುಂಟು ಮಾಡುವ ಸಾಧ್ಯತೆಗಳು ಹೆಚ್ಚು ಎಂದು ಹೇಳಿದ್ದಾರೆ.
“ಪ್ರತೀ ವರ್ಷ ನಾವು ಮೂರ್ನಾಲ್ಕು ಬಾರಿ ಜ್ವರ ನೆಗಡಿಯಿಂದ ಬಳಲಿರುತ್ತೇವೆ. 200-300ಕ್ಕೂ ಹೆಚ್ಚಿನ ಶ್ವಾಸಾಂಗಕ್ಕೆ ಸೋಂಕು ಉಂಟುಮಾಡುವ ವೈರಸ್ ಗಳಿವೆ. ಬೇರೆ ಬೇರೆ ಪ್ರಭೇದಗಳೂ ಇವೆ. ಇವೆಲ್ಲವೂ ನಮಗೆ ತಗುಲುತ್ತದೆ. ಆದರೆ ಅದನ್ನು ತಡೆಯುವ ರೋಗ ನಿರೋಧಕ ಶಕ್ತಿ ನಮ್ಮ ಶರೀರದಲ್ಲಿದೆ. HMPV ಯು ಅಂತಹದ್ದೇ. ಈ ವೈರಸ್ ಗಳು ನಮಗೆ ಸೋಂಕಿದಾಗ ಎರಡು ಮೂರು ದಿನಗಳಲ್ಲಿ ದೇಹದ ರೋಗ ನಿರೋಧಕ ಶಕ್ತಿಯಿಂದಾಗಿ ವಾಸಿಯಾಗಿ ಹೋಗುತ್ತವೆ” ಎಂದರು.
2020ರಿಂದ 23ರ ವರೆಗೆ ನಮ್ಮ ದೇಶದ ಜನರನ್ನು ಕೊರೋನಾ ಹೆಸರಿನಲ್ಲಿ ಭಯಭೀತರನ್ನಾಗಿ ಮಾಡಲಾಗಿತ್ತು. ಶಾಲಾ ಕಾಲೇಜು, ಮಳಿಗೆಗಳು, ವಾಹನ ಸಂಚಾರ ಎಲ್ಲವನ್ನು ದಿಗ್ಭಂಧನಕ್ಕೆ ಒಳಪಡಿಸಿ ಜನರನ್ನು ಮನೆಯಲ್ಲಿ ಕೂಡಿ ಹಾಕಿ ದಬ್ಬಾಳಿಕೆ ನಡೆಸಲಾಗಿತ್ತು. ಇದು ನಮ್ಮ ದೇಶದ ಆಡಳಿತದ ಸಂಪೂರ್ಣ ವೈಫಲ್ಯ. ಇದರ ಬಳಿಕ ನಮ್ಮ ಮಾಧ್ಯಮಗಳು ಒಂದಿಷ್ಟಾದರೂ ಪಾಠ ಕಲಿಯಬೇಕಾಗಿತ್ತು. ಅದರ ಬದಲಿಗೆ ಇನ್ನಷ್ಟು ಸಾಮಾನ್ಯವಾದ ಇನ್ನಷ್ಟು ಸರಳವಾದ ಮತ್ತು ಯಾವುದೇ ಸಮಸ್ಯೆಗಳನ್ನು ಉಂಟು ಮಾಡದ ವೈರಸ್ಗಳ ಬಗ್ಗೆ ಕಟ್ಟು ಕಥೆಗಳನ್ನು ಕಟ್ಟಿ ಕಪೋಲ ಕಲ್ಪಿತವಾದ ವರದಿಗಳನ್ನು ಮಾಡಿ ಜನರನ್ನು ಹೆದರಿಸುವ ಮಟ್ಟಕ್ಕೆ ಮಾಧ್ಯಮಗಳು ಇಳಿದಿರುವುದು ಖೇದನೀಯ ಎಂದು ಡಾ.ಶ್ರೀನಿವಾಸ್ ಕಕ್ಕಿಲ್ಲಾಯ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
HMPV, H1N1 ವೈರಸ್ ಗಳು ಸಾವಿರಾರು ವರ್ಷಗಳಿಂದ ಮನುಷ್ಯರ ಜೊತೆಯಲ್ಲಿಯೇ ಇರುವ ಪ್ರಾಣಿ ಪಕ್ಷಿಗಳಲ್ಲಿ ಕಂಡುಬರುವ ವೈರಸ್ ಗಳಾಗಿದ್ದು, ಪ್ರಾಣಿ ಪಕ್ಷಿಗಳಿಂದ ಮನುಷ್ಯರಿಗೆ ತಗಲುತ್ತವೆ. ಮನುಷ್ಯರಿಂದ ಮನುಷ್ಯರಿಗೆ, ಪ್ರಾಣಿಗಳಿಂದ ಮನುಷ್ಯರ ನಡುವೆ ಇವು ಹರಡುತ್ತವೆ. ಇವು ಅತ್ಯಂತ ಸಾಮಾನ್ಯ ವೈರಸ್ ಗಳು. ಈ ವೈರಸ್ ಈಗ ತಾನೇ ಪತ್ತೆಯಾಗಿದೆ, ಎಲ್ಲರ ಮೇಲೆ ದಾಳಿ ಮಾಡುತ್ತದೆ ಎಂದೆಲ್ಲ ಸುಳ್ಳು ಸುಳ್ಳೇ ಬೊಬ್ಬಿಡುತ್ತಿರುವುದು ಸರಿಯಲ್ಲ ಎಂದು ಅವರು ಕಾಳಜಿ ವ್ಯಕ್ತಪಡಿಸಿದರು.
“ಈ ರೀತಿಯ ವೈರಸ್ ಗಳನ್ನು ಪರೀಕ್ಷೆ ಮಾಡುವ ಸಾಧನಗಳು ಈ ಮೊದಲು ನಮ್ಮಲ್ಲಿ ಇರಲಿಲ್ಲ. HMPV ಪರೀಕ್ಷೆಗೆ RTPCR 2001ರಲ್ಲಿ ಮೊದಲ ಬಾರಿಗೆ ನೆದರ್ಲ್ಯಾಂಡ್ ನಲ್ಲಿ ಬಳಕೆಯಾಯಿತು. ಆ ಬಳಿಕ ಈ ರೀತಿಯ ವೈರಸ್ ಇದೆ ಎಂದು ನಮಗೆ ಗೊತ್ತಾಯಿತು. ಇದು 2001ರಲ್ಲಿ ಬಂದದ್ದೇನೂ ಅಲ್ಲ. ಸಹಸ್ರಾರು ವರ್ಷಗಳಿಂದ ನಮ್ಮ ಜೊತೆ ಈ ವೈರಸ್ ಇತ್ತು. ಮಕ್ಕಳನ್ನು ಕಾಡುತ್ತಿತ್ತು. ಪರೀಕ್ಷೆ ಮಾಡುತ್ತಿರಲಿಲ್ಲ. ಪರೀಕ್ಷೆ ಮಾಡಲು ಬೇಕಾದ ಪರೀಕ್ಷಾ ಸಾಧನಗಳು ನಮ್ಮಲ್ಲಿ ಇರಲಿಲ್ಲ. ಹಾಗಾಗಿ ನಮಗೆ ಅದು ತಿಳಿದಿರಲಿಲ್ಲ” ಎಂದರು.
ಈ ಸಾಮಾನ್ಯ ವೈರಸ್ ನಿಂದಾಗುವ ರೋಗವನ್ನು ಹುಡುಕುವುದಕ್ಕೆ ಜನಸಾಮಾನ್ಯರು ದಯವಿಟ್ಟು ಹಣ ಖರ್ಚು ಮಾಡಬೇಡಿ. ಇದಕ್ಕೆ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ. ಈಗ ಲ್ಯಾಬೊರೇಟರಿಗಳಲ್ಲಿ ವೈರಸ್ ಪರೀಕ್ಷೆ ಎಂದು 4500 -5500 ರೂ, ಎಲ್ಲಾ ಶ್ವಾಸಾಂಗದ ಸೋಂಕುಗಳು ಎಂದು 15 ಸಾವಿರ ರೂಪಾಯಿಯ ಪರೀಕ್ಷೆಗಳು ಎಂದು ಸಿದ್ಧಪಡಿಸಿ ಇಟ್ಟುಕೊಂಡಿದ್ದಾರೆ. ವೈದ್ಯರುಗಳು ಅದನ್ನು ಶಿಫಾರಸ್ಸು ಮಾಡುತ್ತಿದ್ದಾರೆ. ಎರಡು ದಿನಗಳಲ್ಲಿ ಗುಣವಾಗುವ ನೆಗಡಿ ಕೆಮ್ಮುವಿಗೆ ಯಾವುದೇ ಔಷಧ ಅಗತ್ಯವಿಲ್ಲದ ರೋಗಕ್ಕೆ ಯಾರು ಕೂಡ ದುಬಾರಿ ಹಣ ನೀಡಿ ಪರೀಕ್ಷೆ ಮಾಡುವ ಗೊಡವೆಗೆ ಹೋಗಬೇಡಿ. ಸರಕಾರವೂ ಕೂಡ ಈ ರೀತಿಯ ಪರೀಕ್ಷೆ ಮಾಡಿಸಲು ಜನರಲ್ಲಿ ಭಯಹುಟ್ಟಿಸಬಾರದು, ಅಥವಾ ಸ್ವತಃ ಸರಕಾರವೇ ಪರೀಕ್ಷೆ ಮಾಡಿ ಜನರ ಹಣವನ್ನು ಹಾಳು ಮಾಡಬಾರದು ಎಂದು ಅವರು ಮನವಿ ಮಾಡಿದರು.
ಕೊರೋನಾದ ಸಮಯದಲ್ಲಿ ಕೋಟಿಗಟ್ಟಲೆ ಪರೀಕ್ಷೆಗಳನ್ನು ಮಾಡಿ, ಸರಕಾರವೂ ಕೋಟಿಗಟ್ಟಲೆ ಹಣ ಖರ್ಚು ಮಾಡಿದೆ. ಲ್ಯಾಬೊರೇಟರಿಗಳು ಅದರಿಂದ ಬೇಕಾದಷ್ಟು ಲಾಭಗಳನ್ನು ಮಾಡಿಕೊಂಡಿದ್ದಾರೆ. ಅದನ್ನು ನಾವು ಮತ್ತೆ ಪುನಾರವರ್ತಿಸುವುದು ಬೇಡ ಎಂದು ಅವರು ಕಿವಿಮಾತು ಹೇಳಿದ್ದಾರೆ.
ಶಾಲೆಗಳನ್ನು ಮುಚ್ಚುವುದಾಗಲಿ, ನೆಗಡಿ ಬಂತು ಎಂದು ಮಕ್ಕಳನ್ನು ಒಬ್ಬರಿಂದ ಒಬ್ಬರನ್ನು ಪ್ರತ್ಯೇಕಿಸುವುದಾಗಲಿ, ಕಚೇರಿಗಳನ್ನು ಮುಚ್ಚವುದಾಗಲಿ ಮಾಡಿ ಹಿಂಸೆ ಮಾಡಬೇಕಾಗಿಲ್ಲ. ಲಾಕ್ ಡೌನ್ ಗಳನ್ನು ಮಾಡುವುದಾಗಲಿ, ಮಾಸ್ಕ್ ಹಾಕಿ ಎಂದು ಆದೇಶ ನೀಡುವುದಾಗಲಿ, ಕೈಯ್ಯನ್ನು ಸೋಪ್, ಸ್ಯಾನಿಟೈಸರ್ ಹಾಕಿ ತೊಳೆದುಕೊಳ್ಳಿ ಎಂದು ತೀರಾ ಅವೈಜ್ಞಾನಿಕವಾದಂತಹ ಯಾವುದೇ ಉಪಯೋಗವಿಲ್ಲದ ಸಲಹೆಗಳನ್ನು ಸರಕಾರದ ಅಥವಾ ಬೇರೆಯವರ ಮೂಲಕ ಕೊಡುವುದಾಗಲಿ ಮಾಡಬಾರದು. ಪ್ರಯಾಣ ನಿರ್ಬಂಧ ಹೇರುವುದನ್ನು ಸರಕಾರ ದಯವಿಟ್ಟು ಮಾಡಬಾರದು. ಜನರು ಕೂಡ ಇದಕ್ಕೆಲ್ಲ ಭಯಪಟ್ಟು ನರಳಬಾರದು ಎಂದು ಅವರು ಮನವಿ ಮಾಡಿದ್ದಾರೆ.