ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರಕ್ಕೆ ಬೇಡಿಕೆ ವಿಚಾರ | ಪ್ರಗತಿಪರ ಸಂಘಟನೆಗಳ ಜತೆ ಡಿ.16ರಂದು ಮಾತುಕತೆ : ಸಚಿವ ಚಲುವರಾಯಸ್ವಾಮಿ
ಮಂಡ್ಯ : 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ಇರಬೇಕೆಂದು ಬೇಡಿಕೆ ಇಟ್ಟಿರುವ ಪ್ರಗತಿಪರ ಸಂಘಟನೆಗಳ ಜತೆ ಸೋಮವಾರ(ಡಿ.16) ಮಾತುಕತೆ ನಡೆಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಶನಿವಾರ ಸಮ್ಮೇಳನದ ವೇದಿಕೆ ಸಿದ್ದತೆ ಪರಿಶೀಲನೆ ನಂತರ ಮಾತನಾಡಿದ ಅವರು, ಮಾಂಸಾಹಾರ ಬೇಡಿಕೆ ಇಟ್ಟಿರುವ ಸಂಘಟನೆಗಳ ಮುಖಂಡರು ಭೇಟಿಗೆ ಮನವಿ ಮಾಡಿದ್ದು, ಸೋಮವಾರ ಅವರ ಜತೆ ಈ ಬಗ್ಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.
ಸಮ್ಮೇಳನದಲ್ಲಿ ಸುಮಾರು ಒಂದರಿಂದ ಒಂದೂವರೆ ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದ್ದು, ಭಾಗವಹಿಸುವ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ಮಂಗಳವಾರ ಅಥವಾ ಬುಧವಾರದೊಳಗೆ ವೇದಿಕೆಯ ಕಾಮಗಾರಿ ಪೂರ್ಣಗೊಳ್ಳಲಿದೆ. ನಾಳೆಯಿಂದ ನಾನು ಸಹ ಸಂಪೂರ್ಣವಾಗಿ ವೇದಿಕೆ ನಿರ್ಮಾಣದ ಸ್ಥಳದಲ್ಲಿ ಇದ್ದು ವೇದಿಕೆ ಕಾರ್ಯಗಳನ್ನು ವೀಕ್ಷಿಸಲಿದ್ದೇನೆ. ಕೃಷಿ, ಸಾಹಿತ್ಯ ಸೇರಿದಂತೆ ವಿವಿಧ ವಿಷಯಗಳ ಗೋಷ್ಠಿಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಸಮ್ಮೇಳನದ ಯಶಸ್ವಿಗೆ ಜಿಲ್ಲಾಧಿಕಾರಿಗಳು, ಸಾಹಿತ್ಯ ಪರಿಷತ್ ಅಧ್ಯಕ್ಷರು, ಪದಾಧಿಕಾರಿಗಳು, ಶಾಸಕರು, ಮಾಜಿ ಶಾಸಕರು, ಸಂಘಸಂಸ್ಥೆಗಳು, ಸಾರ್ವಜನಿಕರು ತೊಡಗಿಸಿಕೊಂಡಿರುವುದು ಸಂತೋಷದ ಸಂಗತಿ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಶಾಸಕ ರವಿಕುಮಾರ್ ಗಣಿಗ, ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಿಲ್ಲಾಧಿಕಾರಿ ಡಾ.ಕುಮಾರ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಮತ್ತು ಮುಖಂಡರು ಉಪಸ್ಥಿತರಿದ್ದರು.