ಶ್ರೀರಂಗಪಟ್ಟಣ | ನಾಪತ್ತೆಯಾಗಿದ್ದ ತಂದೆ, ಇಬ್ಬರು ಮಕ್ಕಳ ಮೃತದೇಹ ನಾಲೆಯಲ್ಲಿ ಪತ್ತೆ
ಮಂಡ್ಯ: ಶ್ರೀರಂಗಪಟ್ಟಣ ತಾಲೂಕು ಕೆಆರ್‌ಎಸ್ ಜಲಾಶಯದ ಸಮೀಪದ ವಿಶ್ವೇಶ್ವರಯ್ಯ ನಾಲೆಯಲ್ಲಿ ಮಂಗಳವಾರ ಬೆಳಗ್ಗೆ ಕಾರು ಪತ್ತೆಯಾಗಿದ್ದು, ಕಾರಿನೊಳಗೆ ತಂದೆ ಮತ್ತು ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿವೆ.
ಕಾರಿನಲ್ಲಿದ್ದವರು ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಹೆಬ್ಬಾಳು ಗ್ರಾಮದ ಕುಮಾರಸ್ವಾಮಿ(39), ಅವರ ಮಕ್ಕಳಾದ ಅದ್ವೈತ್(8) ಹಾಗೂ ಅಕ್ಷರ(3) ಎಂದು ಗುರುತಿಸಲಾಗಿದೆ.
ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕುಮಾರಸ್ವಾಮಿ 16ರಂದು ಕೆ.ಆರ್.ನಗರ ಮತ್ತು ಮೈಸೂರಿನ ಸಂಬಂಧಿಕರ ಮನೆಗೆ ಬರುತ್ತೇನೆಂದು ಮಕ್ಕಳ ಜತೆ ಕಾರಿನಲ್ಲಿ ಹೊರಟಿದ್ದರು ಎನ್ನಲಾಗಿದೆ.
ಆದರೆ, ರಾತ್ರಿಯಾದರೂ ಮನೆಗೆ ತಲುಪದ ಕಾರಣ, ಈ ಸಂಬಂಧ ಎ.17ರಂದು ಬೆಂಗಳೂರಿನ ಮಾರನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದರು.
ಇದಲ್ಲದೆ, ಕೆ.ಆರ್.ನಗರ ತಾಲೂಕಿನ ಹೆಬ್ಬಳು ಗ್ರಾಮದ ಕುಮಾರಸ್ವಾಮಿ ಪೋಷಕರೂ ಕೆ.ಆರ್.ನಗರ ಪೊಲೀಸ್ ಠಾಣೆಗೆ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು ಎಂದು ತಿಳಿದು ಬಂದಿದೆ.
ನಾಲೆಯಲ್ಲಿ ನೀರಿನ ಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ಕಾರು ಕಾಣಿಸಿಕೊಂಡಿದ್ದು, ಸ್ಥಳೀಯರಿಂದ ಮಾಹಿತಿ ತಿಳಿದ ಕೆ.ಆರ್.ಎಸ್. ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಕಾರನ್ನು ಹೊರತೆಗೆದಾಗ ತಂದೆ ಮತ್ತು ಮಕ್ಕಳ ಮೃತದೇಹ ಕಾರಿನಲ್ಲಿ ಪತ್ತೆಯಾಗಿವೆ.
ಎ.17ರಂದು ಬೆಂಗಳೂರಿನ ಮಾರನಾಯಕನಹಳ್ಳಿ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಾಗಿದ್ದು, ಅಲ್ಲಿನ ಪೊಲೀಸರು ಪರಿಶೀಲಿಸಿದಾಗ ಕುಮಾರಸ್ವಾಮಿ ಅವರ ಮೊಬೈಲ್ ಲೊಕೇಶನ್ ನಾರ್ತ್ಬ್ಯಾಂಕ್ ಹತ್ತಿರ ಕಂಡುಬಂದಿತ್ತು ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಧ್ಯಮಗಳಿಗೆ ತಿಳಿಸಿದರು.
ಇಂದು(ಮಂಗಳವಾರ) ನಾಲೆಯಲ್ಲಿ ಕಾರು ಕಾಣಿಸಿಕೊಂಡಿದ್ದು, ಹೊರತೆಗೆದು ಮೃತದೇಹವ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಕಾರು ನಾಲೆಗೆ ಆಕಸ್ಮಿಕವಾಗಿ ಉರುಳಿದೆಯೋ ಅಥವಾ ಕೊಲೆಯೋ ಎಂಬುದು ನಿಖರವಾಗಿಲ್ಲ. ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.
ಈ ಸಂಬಂಧ ಕೆಆರ್‌ಎಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.