ಬಿಜೆಪಿ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಇಷ್ಟು ಉತ್ಸಾಹವೇಕೆ ?

► ಡಿ ವಿ ಸದಾನಂದ ಗೌಡ ಕಾಂಗ್ರೆಸ್ ಗೆ ಬಂದರೆ ಲಾಭವೇನು ? ► ಬಿಜೆಪಿ ಬಿಟ್ಟಿದ್ದೇನೆ, ಆರೆಸ್ಸೆಸ್ ಬಿಟ್ಟಿಲ್ಲ ಎನ್ನುವವರು ಕಾಂಗ್ರೆಸ್ ಅನ್ನು ಉದ್ಧಾರ ಮಾಡ್ತಾರಾ ?

Update: 2023-10-28 11:00 GMT
Editor : Althaf | Byline : ಆರ್. ಜೀವಿ

ಬಹುಮತದೊಂದಿಗೆ ಗೆದ್ದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಈಗ ಅದೇ ಗೆಲುವಿನ ಓಟವನ್ನು ಲೋಕಸಭೆ ಚುನಾವಣೆಯಲ್ಲೂ ಮುಂದುವರಿಸುವ ಅತಿ ವಿಶ್ವಾಸದಲ್ಲಿ ಇದ್ದಂತಿದೆ. ಹಾಗಾಗಿಯೇ, ಬಿಜೆಪಿಯಿಂದ ಬರಲು ಸಾಲು ಸಾಲು ನಾಯಕರು ತಯಾರಿದ್ದಾರೆ ಎಂದು ಕಾಂಗ್ರೆಸ್ನ ಪ್ರಮುಖ ನಾಯಕರು ಅದನ್ನೊಂದು ಹೆಗ್ಗಳಿಕೆಯೆಂಬಂತೆ ಹೇಳಿಕೊಂಡು ಓಡಾಡುತ್ತಿದ್ದಾರೆ.

ಆದರೆ ಗೆಲುವಿನ ಗುಂಗಿನಲ್ಲಿಯೇ ಇನ್ನೂ ಇರುವ ಕಾಂಗ್ರೆಸ್ ಮರೆಯಬಾರದ ಒಂದು ಸತ್ಯವೇನೆಂದರೆ, ತನಗೆ ಸಿಕ್ಕಿರುವ ಗೆಲುವು ಭ್ರಷ್ಟ ಮತ್ತು ಜನವಿರೋಧಿ ಬಿಜೆಪಿಯನ್ನು ಜನ ತಿರಸ್ಕರಿಸಿದ್ದರಿಂದಾಗಿ ಬಂದಿರುವುದು ಎಂಬುದು. ಅವತ್ತು ಬಿಜೆಪಿ ಮಸಲತ್ತು ಮಾಡಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿತು. ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಕೈಕೊಟ್ಟು ಬಿಜೆಪಿ ಜೊತೆಗೆ ಹೋದ​ ಡಝನ್ ಗೂ ಹೆಚ್ಚು ಶಾಸಕರು ಸರ್ಕಾರ ಉರುಳಿಸಿದರು. ಬಿಜೆಪಿ ಮತ್ತೊಮ್ಮೆ ಅಧಿಕಾರ ಹಿಡಿಯುವುದಕ್ಕೆ ಕಾರಣರಾದರು.

ಆದರೆ ಹಾಗೆ ಅಧಿಕಾರಕ್ಕೆ ಬಂದ ಬಿಜೆಪಿ ಅಧಿಕಾರದ ಅಮಲಿನಲ್ಲಿ ಜನಹಿತ ಮರೆಯಿತು. ಪರಮ ಭ್ರಷ್ಟಾಚಾರದಲ್ಲಿ​, ಕೋಮುವಾದದಲ್ಲಿ ಮುಳುಗಿಹೋಯಿತು. ಅದರ ಪರಿಣಾಮವಾಗಿ ಕಳೆದ ಚುನಾವಣೆಯಲ್ಲಿ ಜನರು ಸರಿಯಾದ ಪಾಠವನ್ನೇ ಕಲಿಸಿದರು. ಬಿಜೆಪಿಯನ್ನು ಸಂಪೂರ್ಣ ಹತಾಶೆಗೆ ತಳ್ಳಿದ ಸೋಲು ಅದು. ನಾಯಕರುಗಳೇ ಇಲ್ಲವೆನ್ನುವಂಥ ಸ್ಥಿತಿಯನ್ನು ಇಂದು ಬಿಜೆಪಿ ಪಾಲಿಗೆ ತಂದಿಟ್ಟಿರುವ ​ದೊಡ್ಡ ಸೋಲು ಅದು.

ಈ ಸತ್ಯ ಕಣ್ಣೆದುರೇ ಇರುವಾಗ, ಇದನ್ನು ದೊಡ್ಡ ಪಾಠವಾಗಿ ತೆಗೆದುಕೊಳ್ಳಬೇಕಿರುವ ಜರೂರು ಇರುವುದು ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೇ ಹೊರತು ಬಿಜೆಪಿಗಲ್ಲ. ಹೀಗಿರಬೇಕಾದರೆ, ಕಾಂಗ್ರೆಸ್ ನಾಯಕರು ಏಕೆ ಜನರಿಂದ ತಿರಸ್ಕಾರಕ್ಕೊಳಗಾಗಿರುವ ಅದೇ ಬಿಜೆಪಿಯಿಂದ ಸಾಲು ಸಾಲು ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ತುದಿಗಾಲ ಮೇಲೆ ನಿಂತಿದ್ದಾರೆ?

ಇಲ್ಲಿ ಇನ್ನೂ ಒಂದು ತಮಾಷೆಯಿದೆ. ಇಡೀ ಪಕ್ಷವೇ ಜನರಿಂದ ತಿರಸ್ಕೃತವಾಗಿರುವುದು ಒಂದು ವಿಚಾರವಾದರೆ, ಬಿಜೆಪಿಯನ್ನು ಬಿಡಲು ತಯಾರಾಗಿರುವವರು ​ಬಿಜೆಪಿಯೊಳಗೇ​ ಸಂಪೂರ್ಣ ತಿರಸ್ಕೃತರಾದವರು. ಹೀಗೆ ತಿರಸ್ಕೃತರೊಳಗಿನ ತಿರಸ್ಕೃತರನ್ನು ಪಕ್ಷಕ್ಕೆ ಕರೆದು ತಂದು ಕಾಂಗ್ರೆಸ್ ಏನು ​ಸಾಧಿಸಲು ಹೊರಟಿದೆ ಎಂಬುದು​ ಅದಕ್ಕೆ ಮತ ನೀಡಿ ಬೆಂಬಲಿಸಿದ ಜನರಲ್ಲಿ ತೀವ್ರ ಕಳವಳ ಹುಟ್ಟಿಸುವಂಥದ್ದಾಗಿದೆ.

ಅಂದು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಕರೆದು ಕರೆದು ತುಂಬಿಕೊಂಡಿದ್ದ ಬಿಜೆಪಿ ಇಂದು ಬೀದಿಯಲ್ಲಿ ಬಂದು ನಿಂತಿದೆ. ​ಈಗ ಅಂಥದೇ ತಪ್ಪನ್ನು ಕಾಂಗ್ರೆಸ್ ಮಾಡಹೊರಟಿದೆಯೆ?. ಅಧಿಕಾರದಲ್ಲಿರುವ ಅದಕ್ಕೆ ತಾನೇನು ಮಾಡುತ್ತಿದ್ದೇನೆ ಎಂಬುದನ್ನು ಒಮ್ಮೆಯಾದರೂ ವ್ಯವಧಾನದಿಂದ ಚಿಂತಿಸುವ ವಿವೇಕ ಇಲ್ಲವಾಗಿದೆಯೆ?

ಬಿಜೆಪಿಗೆ ಬೇಡವಾಗಿರುವ​, ಎಲ್ಲೂ ಸಲ್ಲದವರಾಗಿರುವ ನಾಯಕರನ್ನು ಕರೆತಂದು ತುಂಬಿಸಿಕೊಳ್ಳುವುದರಿಂದ ಕಾಂಗ್ರೆಸ್ಗೆ ಆಗಲಿರುವ ​ರಾಜಕೀಯ ಲಾಭವಾದರೂ ಏನು?. ಲಾಭದ ಮಾತು ಹಾಳಾಗಿ ಹೋಗಲಿ ಎಂದುಕೊಂಡರೂ, ತಾನು ಘನತೆಯಿಂದ ನಡೆದುಕೊಳ್ಳಬೇಕಾದ ಅಗತ್ಯವಿದೆ ಎಂಬ ಎಚ್ಚರವಾದರೂ ಕಾಂಗ್ರೆಸ್ಗೆ ಇರಬೇಕಲ್ಲವೆ?

ಹೀಗೆ ಕಂಡಕಂಡವರನ್ನೆಲ್ಲ ಒಳಗೆ ಕರೆತಂದರೆ, ಪಕ್ಷದೊಳಗೇ ​ದಶಕಗಳಿಂದ ನಿಷ್ಠರಾಗಿ ಇರುವವರಲ್ಲಿ ಅದು ಹುಟ್ಟಿಸುವ ಅನಿಶ್ಚಿತತೆ, ಕಡೆಗೆ ಅದು ಪಕ್ಷದೊಳಗಿನ ಬೇಗುದಿಗೆ ಕಾರಣವಾಗುವುದು, ಅವರು​ ನಿಷ್ಕ್ರಿಯರಾಗುವುದು, ಕೊನೆಗೆ ಪಕ್ಷ ಬಿಡುವ ಸ್ಥಿತಿ ತಲೆದೋರುವುದು ​- ಇಂಥ ಅಧ್ವಾನಗಳನ್ನು ಯಾಕೆ ಮಾಡಿಕೊಳ್ಳಲು ಮುಂದಾಗುತ್ತಿದೆ ಕಾಂಗ್ರೆಸ್?

ಈಗ ಆಗಿರುವ ಬಿಜೆಪಿ-ಜೆಡಿಎಸ್ ಮೈತ್ರಿಯನ್ನೇ ಉದಾಹರಣೆಯಾಗಿ ಕಾಂಗ್ರೆಸ್ ನೋಡಬೇಕಿದೆ. ಮೈತ್ರಿ ಬಗ್ಗೆ ಎರ​ಡೂ ಪಕ್ಷಗಳ ನಾಯಕರಲ್ಲಿಯೇ ಅಸಮಾಧಾನವಿದೆ. ಅಂತಿಮವಾಗಿ ಎರಡೂ ಕಡೆಯಿಂದಲೂ ಪಕ್ಷ ಬಿಡುವ ನಿರ್ಧಾರಕ್ಕೆ ಹಲವರು ಬಂದು ಮುಟ್ಟಿದ್ದಾರೆ. ಅಂಥ ಯಾರು ಯಾರನ್ನೋ ಕರೆತಂದು ಕಾಂಗ್ರೆಸ್ ತನ್ನ ಅಸ್ತಿತ್ವವನ್ನೇ ಅಭದ್ರಗೊಳಿಸಿಕೊಳ್ಳಲಿದೆಯೆ?

ಕಾಂಗ್ರೆಸ್ ಕಡೆ ಬರಲು ಮನಸ್ಸು ಮಾಡಿರುವ ಬೇರೆ ಪಕ್ಷಗಳ ನಾಯಕರುಗಳಲ್ಲಿ ಹೆಚ್ಚಿನವರು ಅಲ್ಲಿ ಅನುಭವಿಸಬೇಕಾದ ಅಧಿಕಾರವನ್ನೆಲ್ಲ ಅನುಭವಿಸಿದವರು.​ ಅವರಿಂದ ಆ ಪಕ್ಷಕ್ಕೆ ಇನ್ನು ಏನೂ ಪ್ರಯೋಜನವಿಲ್ಲ ಎಂದು ಅಲ್ಲಿ ಮೂಲೆಗೆ ಸರಿಸಲ್ಪಟ್ಟವರು. ಅಲ್ಲಿ ಇನ್ನೂ ಬೇಕೆಂದು ಬಯಸಿ ಸಿಗದೇ ಇದ್ದುದಕ್ಕೆ ಮುನಿಸಿಕೊಂಡು ಅಲ್ಲಿಂದ ಹೊರನಡೆಯಲು ನಿರ್ಧರಿಸಿದವರು.

ಅಂಥವರೆಲ್ಲ ಕಾಂಗ್ರೆಸ್ಗೆ ಬಂದರೆ ಇಲ್ಲಿಯೂ ಅವರು ಅದನ್ನೇ ಮಾಡುತ್ತಾರಲ್ಲವೆ? ಅಧಿಕಾರ ಬೇಕೆನ್ನುತ್ತಾರೆ, ಸ್ಥಾನಮಾನಕ್ಕಾಗಿ ಒತ್ತಡ ಹೇರುತ್ತಾರೆ. ಕಡೆಗೆ ಪಕ್ಷದೊಳಗಿರುವವರ ಪಾಲನ್ನು ಕಸಿಯಲೂ ಬಹುದು. ಒಂದು ವೇಳೆ ಬೇಷರತ್ತಾಗಿ ಬರುವವರಾದರೂ, ಅಲ್ಲಿ ತಿರಸ್ಕೃತರಾದವರನ್ನು ಕಟ್ಟಿಕೊಂಡು ಕಾಂಗ್ರೆಸ್ ಮಾಡುವುದಾದರೂ ಏನು?. ಡಿವಿ ಸದಾನಂದಗೌಡರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಗುಸುಗುಸು ಕೂಡ ಕೇಳಿಬಂದಿರುವುದಿದೆ.

ಬಿಜೆಪಿಯಲ್ಲಿ ಸಿಎಂ ಹುದ್ದೆ ಸಹಿತ ಎಲ್ಲವನ್ನೂ ಪಡೆದ ಡಿವಿಎಸ್, ಸಿಕ್ಕ ​ದೊಡ್ಡ ದೊಡ್ಡ ಅವಕಾಶ, ಹುದ್ದೆಗಳನ್ನು ಸಮರ್ಥವಾಗಿ ಬಳಸಿಕೊಳ್ಳದೆ ಹೆಸರು, ವರ್ಚಸ್ಸು ​ಉಳಿಸಿಕೊಳ್ಳಲು ವಿಫಲವಾದವರು. ಕೇಂದ್ರದಲ್ಲೂ ರೈಲ್ವೆ ಸಚಿವ ಸ್ಥಾನ ಪಡೆದವರು. ಯಾವ ಕ್ಷೇತ್ರದಲ್ಲೂ ಪಕ್ಷದ ಬಲವಿಲ್ಲದೆ ​ ನಿಂತು ಗೆಲ್ಲುವ ಸಾಮರ್ಥ್ಯ ಇಲ್ಲದವರು. ಈಗ ಟಿಕೆಟ್ ಕೈತಪ್ಪುವ ಭೀತಿಯಲ್ಲಿಯೂ ಇರುವ ನಾಯಕ​ ಅವರು.

ಅವರ ಕ್ಷೇತ್ರದಲ್ಲಿಯೇ ಜನರಿಗೆ ಅವರು ಬೇಡವಾ​ಗಿದ್ದಾರೆ. ಅಷ್ಟರ ಮಟ್ಟಿಗೆ ಅವರು ಜನರಿಂದಲೂ ತಿರಸ್ಕೃತರು. ಬಿಜೆಪಿಯ ದೆಹಲಿ ನಾಯಕರ ವಿರುದ್ಧವೇ ಅವರು ಮುನಿಸಿಕೊಂಡದ್ದರಿಂದ ಮತ್ತು ಬಿಜೆಪಿ ಜೆಡಿಎಸ್ ಮೈತ್ರಿ ಕುರಿತು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರಿಂದಾಗಿ ಮಾತ್ರವೇ ಅವರು ಈಗ ಸುದ್ದಿಯಲ್ಲಿರುವುದು.

ದೆಹಲಿ ವರಿಷ್ಠರು ಕಡೆಗೂ ಅವರನ್ನು ಕರೆಸಿ ಮಾತನಾಡಿಸಿದ್ದಾರೆ. ಕಾಂಗ್ರೆಸ್ ಸೇರುವಂತೆ ಡಿ​ ಕೆ ಶಿವಕುಮಾರ್ ಡಿವಿಎಸ್ಗೆ ಕೇಳಿಕೊಂಡಿದ್ದರು ಎಂಬ ಮಾತುಗಳ ನಡುವೆಯೇ ಬಿಜೆಪಿ ಹೈಕಮಾಂಡ್ ಡಿವಿಎಸ್ ಜೊತೆ ಮಾತುಕತೆ ನಡೆಸಿದೆಯೆಂಬ ಸುದ್ದಿಗಳಿವೆ. ಡಿವಿಎಸ್ ಕಾಂಗ್ರೆಸ್ಗೆ ಬರುತ್ತಾರೊ ಬಿಡುತ್ತಾರೊ ಬೇರೆ ವಿಚಾರ. ಆದರೆ, ಬನ್ನಿ ಬನ್ನಿ ಎಂದು ಇವರೇ ಮೇಲೆಬಿದ್ದು ಹೋಗಿ ಏನು ಸಾಧಿಸಲು ಬಯಸಿದ್ದಾರೆ?.

ಒಂದು​ ಕಡೆ ವಿಫಲ ನಾಯಕರು, ಮತ್ತೊಂದು ಕಡೆ ಬಿಜೆಪಿಯನ್ನು ಬಿಟ್ಟು ಬಂದರೂ ಅದರ ಸಿದ್ಧಾಂತಗಳನ್ನು ತಲೆಯೊಳಗೆ ತುಂಬಿಕೊಂಡೇ, ಅದನ್ನು ಹೆಮ್ಮೆ​ಯಿಂದ ಬಹಿರಂಗವಾಗಿಯೇ ಹೇಳುತ್ತಿರುವ ನಾಯಕರು.​ ಬಿಜೆಪಿ ಬಿಟ್ಟಿದ್ದೇನೆ, ಆರೆಸ್ಸೆಸ್ ಮತ್ತು ಹಿಂದುತ್ವವನ್ನಲ್ಲ ಎಂದು ಹೇಳಿಕೊಳ್ಳುವವರು. ಕಾಂಗ್ರೆಸ್ ಅಂತಿಮವಾಗಿ ಇಂಥವರೆಲ್ಲರ ಅಡ್ಡೆಯಾಗಬೇಕೆ? . ಕೈಲಾಗದವರ, ತಿರಸ್ಕೃತರ, ಹುದ್ದೆಯಲ್ಲಿದ್ದೂ ಏನನ್ನೂ ಮಾಡದೆ ಅವಧಿ ಪೂರೈಸುವವರ ತಂಗುದಾಣ ಮಾತ್ರವಾಗಿ ಕಾಂಗ್ರೆಸ್ ಗತಿಗೆಡಬೇಕೆ?.

ಕಂಡಕಂಡ ಬಂಡೆಗೆಲ್ಲ ತಲೆ ಗುದ್ದಿಕೊಳ್ಳುವಷ್ಟು ದುಡುಕುತನವೊ ತರಾತುರಿಯೊ, ಏನು ಮಾಡಬೇಕಿದೆ ಎಂದು ವಿವೇಚಿಸಲಾರದ ವ್ಯವಧಾನದ ಕೊರತೆಯೊ ಕಾಂಗ್ರೆಸ್ ಅನ್ನು ಕಾಡುತ್ತಿದೆ. ಅದೀಗ ಇಂಥ ಎಲ್ಲದರಿಂದ ಬಿಡಿಸಿಕೊಂಡು, ಗೆಲ್ಲಿಸಿದ ಜನರನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರತಿಯೊಂದು ನಿರ್ಧಾರಗಳನ್ನೂ ತೆಗೆದುಕೊಳ್ಳಬೇಕಿದೆ. ಬೇರೆಯವರು ಹೇಗೆ ಬೇಕಾದರೂ ಇರಲಿ, ಆದರೆ ಜನಮತದಿಂದ ಅಧಿಕಾರದಲ್ಲಿರುವವರು ಹಳೆಯ ಪಾಠಗಳನ್ನು ಮರೆಯಕೂಡದು. ಕಾಂಗ್ರೆಸ್ ಅಂಥ ಎಚ್ಚರವನ್ನು ಹೆಜ್ಜೆಹೆಜ್ಜೆಗೂ ಕಾಯ್ದುಕೊಳ್ಳದಿದ್ದರೆ ಕೇಡು ದೂರವಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ಆರ್. ಜೀವಿ

contributor

Similar News