ಶನಿಯನ್ನು ಮರೆಮಾಚಲಿರುವ ಚಂದ್ರ | ಜು.25ರಂದು ಕಾಣಸಿಗಲಿದೆ ಖಗೋಳ ವಿಸ್ಮಯ
ಹೊಸದಿಲ್ಲಿ: ದಕ್ಷಿಣ ಭಾರತ ಹಾಗೂ ಈಶಾನ್ಯ ಭಾರತದ ಖಗೋಳ ವೀಕ್ಷಕರಿಗೆ ಗುರುವಾರ ಆಗಸದಲ್ಲಿ ಕೌತುಕದ ದೃಶ್ಯ ಕಾಣಸಿಗಲಿದೆ. ಚಂದ್ರನು ಶನಿ ಗ್ರಹದ ಮುಂದೆ ಹಾದು ಹೋಗುವ ಮೂಲಕ ಉಂಗುರಾಕೃತಿಯ ಗ್ರಹವನ್ನು ಮರೆಮಾಚಲಿದೆ. ಆದರೆ ಒಂದು ತಾಸಿನ ಬಳಿಕ ಶನಿ ಗ್ರಹವು ಮತ್ತೆ ಪ್ರತ್ಯಕ್ಷವಾಗಲಿದೆ.
‘ಚಂದ್ರನ ಮರೆಮಾಚುವಿಕೆ(ಲ್ಯೂನಾರ್ ಒಕ್ಯೂಲ್ಟೇಶನ್) ಎಂದು ಹೆಸರಿಸಲಾದ ಖಗೋಳ ವಿದ್ಯಮಾನವು ಬೆಂಗಳೂರು, ಮುಂಬೈ, ಭುವನೇಶ್ವರ,ಕೋಲ್ಕಕಾ ಹಾಗೂ ಗುವಾಹಟಿ ನಗರಗಳಲ್ಲಿ ಗೋಚರಿಸಲಿದೆ. ಚೀನಾ, ಜಪಾನ್,ಮ್ಯಾನ್ಮಾರ್ ಹಾಗೂ ಶ್ರೀಲಂಕಾದ ಭಾಗಗಳೂ ಈ ಖಗೋಳ ವಿಸ್ಮಯಕ್ಕೆ ಸಾಕ್ಷಿಯಾಗಲಿವೆ.
ಕುಂಭ (ಅಕ್ವೇರಿಯಸ್)ನಕ್ಷತ್ರ ಪುಂಜ ಹಿನ್ನೆಲೆಯಲ್ಲಿ ಶನಿ ಹಾಗೂ ಚಂದ್ರ ಕಾಣಿಸಲಿದೆ. ಪೂರ್ವ ಆಫ್ರಿಕಾ, ಮಡಗಾಸ್ಕರ್, ಭಾರತ, ಈಶಾನ್ಯ ಇಂಡೋನೇಶ್ಯ, ಆಗ್ನೇಯ ಏಶ್ಯ, ಚೀನಾ ಹಾಗೂ ಮಂಗೋಲಿಯಾ ರಾಷ್ಟ್ರಗಳು ಕೂಡಾ ಕೆಲವು ತಾಸುಗಳವರೆಗೆ ಇದು ಗೋಚರವಾಗಲಿದೆ.
ಭಾರತದಲ್ಲಿ ಈ ಖಗೋಳ ವಿಸ್ಮಯವು ಗುರುವಾರ ಮಧ್ಯರಾತ್ರಿ ಕಳೆದು ಶುಕ್ರವಾರ ನಸುಕಿನಲ್ಲಿ 1:30ರಂದು ಆರಂಭಗೊಳ್ಳಲಿದ್ದು, 2:25ಕ್ಕೆ ಕೊನೆಗೊಳ್ಳಲಿದೆ. ಸೂರ್ಯನ ಸುತ್ತ ಪರಿಭ್ರಮಿಸಲು ಶನಿಗ್ರಹವು ದೀರ್ಘಾವಧಿಯನ್ನು ತೆಗೆದುಕೊಳ್ಳುವುದರಿಂದ ಈ ಅಪರೂಪದ ಖಗೋಳ ವಿದ್ಯಮಾನವು ಪ್ರತಿ 18 ವರ್ಷಗಳಿಗೊಮ್ಮೆ ಸಂಭವಿಸುತ್ತದೆ.
ಸೆಪ್ಟೆಂಬರ್ 8ರಂದು ಶನಿಗ್ರಹವು ಭೂಮಿಗೆ ಎಂದಿಗಿAತಲೂ ಅತ್ಯಂತ ನಿಚ್ಛಳವಾಗಿ ಗೋಚರವಾಗಲಿದೆ. ಆಗ ಭೂಮಿಯು ಸೂರ್ಯ ಹಾಗೂ ಶನಿಯ ಮಧ್ಯದಲ್ಲಿ ಇರುವುದರಿಂದ ಶನಿಯು ಅತ್ಯಂತ ಪ್ರಕಾಶಮಾನವಾಗಿ ಕಾಣಲಿದೆ.
ಚಾಂದ್ರ ನಿಗೂಢತೆ ಎಂದರೇನು
ಚಂದ್ರನು ಗ್ರಹ ಅಥವಾ ನಕ್ಷತ್ರದಂತಹ ಖಗೋಳ ಕಾಯದ ಮುಂದೆ ಚಲಿಸಿ, ಅದನ್ನು ತಾತ್ಕಾಲಿಕವಾಗಿ ಮರೆ ಮಾಚುವಂತೆ ಮಾಡುವ ವಿದ್ಯಮಾನವನ್ನು ಚಂದ್ರ ನಿಗೂಢತೆ (ಲ್ಯೂನಾರ್ ಒಕ್ಯುಲ್ಟೇಶನ್) ಎಂದು ಕರೆಯಲಾಗುತ್ತದೆ. ಈ ವಿದ್ಯಮಾನವನ್ನು ಬರಿಗಣ್ಣಿನಿಂದ ವೀಕ್ಷಿಸಬಹುದಾಗಿದೆ.