ಮುಸ್ಲಿಮರು, ರೈತರು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬಹುದಾದ ವಕ್ಫ್ ವಿಚಾರಕ್ಕೆ ಬಿಜೆಪಿ ಕೋಮು ಬಣ್ಣ ಹಚ್ಚುತ್ತಿದೆ: ಚಿಂತಕ ಶಿವಸುಂದರ್

Update: 2024-11-11 16:00 GMT

ಮೈಸೂರು : ರಾಜ್ಯದಲ್ಲಿ ವಕ್ಫ್ ಆಸ್ತಿ ವಿಚಾರದಲ್ಲಿ ರೈತರು ಮತ್ತು ಮುಸ್ಲಿಮರ ನಡುವೆ ಉಂಟಾಗಿರುವ ಆತಂಕವನ್ನು ಸೌಹಾರ್ದದಿಂದ ತಿಳಿಗೊಳಿಸುವ ಬದಲು ಬಿಜೆಪಿ ಇದಕ್ಕೆ ಕೋಮು ಬಣ್ಣ ಹಚ್ಚಿ ರಾಜಕೀಯಗೊಳಿಸಿರುವುದು ಸರಿಯಲ್ಲ ಎಂದು ಚಿಂತಕ, ಅಂಕಣಕಾರ ಶಿವಸುಂದರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರದ ನಳಪಾಡ್ ಹೋಟೆಲ್‌ನಲ್ಲಿ ಸೋಮವಾರ ಬೆಳಗ್ಗೆ ಕಾಂಗ್ರೆಸ್ ಮುಖಂಡ ಅಬ್ದುಲ್ ಖಾದರ್ ಶಾಹೀದ್ ಮತ್ತು ಗೆಳಯರ ಬಳಗದಿಂದ ಏರ್ಪಡಿಸಿದ್ದ ವಕ್ಫ್ ಬೋರ್ಡ್ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ವಕ್ಫ್ ಎಂಬುವುದು ಮುಸ್ಲಿಂ ಕಾನೂನಿನಲ್ಲಿ ಯಾವುದನ್ನು ಪವಿತ್ರ ಧಾರ್ಮಿಕ ಅಥವಾ ದಾನ ಅಥವಾ ಪರೋಪಕಾರಿ ಉದ್ದೇಶಗಳೆಂದು ಪರಿಗಣಿಸುತ್ತಾರೋ ಅದಕ್ಕಾಗಿ ಶಾಶ್ವತವಾಗಿ ಕೊಟ್ಟಿರುವ ಆಸ್ತಿಯು ದತ್ತಿಯಾಗಿರುತ್ತದೆ. ಒಮ್ಮೆ ವಕ್ಫ್ ಆಸ್ತಿ ಎಂದು ಪರಿಗಣಿತವಾದ ಆಸ್ತಿಗಳು ಶಾಶ್ವತವಾಗಿ ತಮ್ಮ ವಕ್ಫ್ ಸ್ವರೂಪವನ್ನು ಉಳಿಸಿಕೊಂಡಿರುತ್ತವೆ. ಬೇರೆ ಮಾತಿನಲ್ಲಿ ಹೇಳುವುದಾದರೆ ಒಮ್ಮೆ ವಕ್ಫ್ ಆಸ್ತಿಯೆಂದು ಘೋಷಿತವಾದ ಆಸ್ತಿಗಳು ಶಾಶ್ವತವಾಗಿ ವಕ್ಫ್ ಆಸ್ತಿಯಾಗಿಯೇ ಉಳಿಯುತ್ತವೆ. ಹೀಗಾಗಿ ಇನಾಮ್ ಕಾಯಿದೆಯಡಿ ಫಲಾನುಭವಿಗಳ ಪರವಾಗಿ ಪಟ್ಟಾ ಕೊಟ್ಟಿದ್ದರೂ ಸಹ ಈ ಹಿಂದೆ ಅದನ್ನು ವಕ್ಫ್ಗಾಗಿ ನೀಡಲಾಗಿದ್ದ ದತ್ತಿ ಅರ್ಥಾತ್ ವಕ್ಫ್ ಆಸ್ತಿ ಎಂಬುದನ್ನು ಇಲ್ಲವಾಗಿಸುವುದಿಲ್ಲ. ಒಮ್ಮೆ ಅದನ್ನು ವಕ್ಫ್ ಆಗಿ ನೀಡಿದ ಮೇಲೆ ಅದು ಎಂದೆಂದೆಂದಿಗೂ ವಕ್ಫ್ ಆಗಿಯೇ ಉಳಿಯುತ್ತದೆ ಮತ್ತು ಫಲಾನುಭವಿಗಳ ಹೆಸರಿನಲ್ಲಿ ಪಟ್ಟಾ ಕೊಟ್ಟ ಮಾತ್ರಕ್ಕೆ ಅದು ಆ ಆಸ್ತಿಯ ಮೂಲ ವಕ್ಫ್ ಸ್ವರೂಪವನ್ನು ಪ್ರಭಾವಿಸುವುದಿಲ್ಲ. ಇದನ್ನು ಸವೋಚ್ಛ ನ್ಯಾಯಾಲಯವೂ ಎತ್ತಿಹಿಡಿದಿದೆ ಎಂದರು.

ಆದರೇ, ವಕ್ಫ್ ಆಸ್ತಿಯನ್ನು ಕಳೆದ ಮೂರು ನಾಲ್ಕು ತಲೆಮಾರುಗಳಿಂದ ರೈತರು ಅನುಭವಿಸಿಕೊಂಡು ಉಳುಮೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಅವರುಗಳ ಪರಿಸ್ಥಿತಿಯ ಬಗ್ಗೆಯೂ ಸರಕಾರ ಚಿಂತನೆ ಮಾಡಬೇಕಿದೆ. ರೈತರು ಉಳುಮೆ ಮಾಡುತ್ತಿರುವ ಕೃಷಿ ಜಮೀನನ್ನು ಕಾಯ್ದೆ ಪ್ರಕಾರ ವಕ್ಫ್ ಆಸ್ತಿಯಾಗಿಯೇ ಉಳಿಸಿಕೊಂಡು ಶಾಶ್ವತವಾಗಿ ರೈತರಿಗೆ ಗೇಣಿಗೆ ಕೊಟ್ಟರೆ ಇಬ್ಬರ ಆತಂಕವೂ ದೂರಾಗುತ್ತದೆ ಎಂದು ಸಲಹೆ ನೀಡಿದರು.

ಬಿಜಾಪುರ ಜಿಲ್ಲೆಯಲ್ಲಿ 1,400 ಎಕರೆ ರೈತರ ಜಮೀನು ವಕ್ಫ್ ಆಸ್ತಿ ಎಂದು ಅವರಿಂದ ಕಿತ್ತುಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಹಸಿ ಸುಳ್ಳುಗಳನ್ನು ಹೇಳಿ ರಾಜ್ಯಾದ್ಯಂತ ಹುಯಿಲೆಬ್ಬಿಸಿದೆ. ಆದರೇ, ವಿವಾದದಲ್ಲಿರುವುದು ಕೇವಲ 10 ಎಕರೆ ಜಮೀನು ಮಾತ್ರ. ರೈತರ ಸಮಸ್ಯೆಗಳನ್ನು ಮುಸ್ಲಿಮರೂ ಮತ್ತು ಮುಸ್ಲಿಮರ ಸಮಸ್ಯೆಗಳನ್ನು ರೈತರೂ ಅರ್ಥ ಮಾಡಿಕೊಂಡು ಈ ಸಮಸ್ಯೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಸೌಹಾರ್ದದಿಂದ ಬಗೆಹರಿಸಿಕೊಳ್ಳಬೇಕು ಎಂದು ಶಿವಸುಂದರ್ ಸಲಹೆ ನೀಡಿದರು.

ವಕ್ಫ್ ಆಸ್ತಿಯನ್ನು ಕೇವಲ ರೈತರು ಮಾತ್ರ ಒತ್ತುವರಿ ಮಾಡಿಕೊಂಡಿಲ್ಲ. ಹೆಚ್ಚಿನ ಪಾಲು ಮುಸ್ಲಿಮರೂ ಒತ್ತುವರಿ ಮಾಡಿಕೊಂಡಿದ್ದು, ಅದನ್ನೂ ಸಹ ಸಮುದಾಯದ ಮುಖಂಡರು ಗಮನದಲ್ಲಿಟ್ಟುಕೊಳ್ಳಬೇಕು. ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಹೋಟೆಲ್ ಕೂಡ ವಕ್ಫ್ ಆಸ್ತಿಯಾಗಿದೆ. ಇದಕ್ಕೆ ತಿಂಗಳಿಗೆ 50 ಸಾವಿರ ರೂ.ಬಾಡಿಗೆ ನೀಡಲಾಗುತ್ತಿದೆ. ಆದರೆ, ಇದರ ವಾರ್ಷಿಕ ವಹಿವಾಟು 500 ಕೋಟಿ ಇದೆ. ಮಾಹಿತಿ ಪ್ರಕಾರ ಮಧ್ಯವರ್ತಿಗಳು ಇದರ ಲಾಭ ಪಡೆಯುತ್ತಿದ್ದಾರೆ ಎಂದು ಹೇಳಿದರು.

ದೇಶದಲ್ಲಿ ರಕ್ಷಣಾ ಇಲಾಖೆ ಬಳಿ 35 ಲಕ್ಷ ಎಕರೆ, ರೈಲ್ವೆ ಇಲಾಖೆ ಬಳಿ 16 ಲಕ್ಷ ಎಕರೆ ಜಮೀನು ಇದ್ದರೆ ವಕ್ಫ್ಬೋರ್ಡ್ ಬಳಿ 9 ಲಕ್ಷ ಎಕರೆ ಆಸ್ತಿ ಇದೆ ಎನ್ನುವುದು ಬಿಜೆಪಿ ಹಬ್ಬಿಸಿರುವ ಹಸಿ ಸುಳ್ಳು. ವಿಭಜಿತ ಆಂದ್ರ ಪ್ರದೇಶದ ದೇವಾಲಯಗಳ ಹೆಸರಲ್ಲಿ 4.85ಲಕ್ಷ ಎಕರೆ ಜಮೀನು ಇದ್ದರೆ, ತಮಿಳುನಾಡಿನಲ್ಲಿ 5.25 ಲಕ್ಷ ಎಕರೆ ಜಮೀನು ದೇವಾಲಯಗಳ ಒಡೆತನದಲ್ಲಿದೆ. ಈ ನಡುವೆ ಆಂದ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು, ಆಂದ್ರಪ್ರದೇಶದಲ್ಲಿ ರೈತರು ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆ ನಡೆಸುತ್ತಿರುವ 83 ಸಾವಿರ ಎಕರೆ ಜಮೀನನ್ನು ರೈತರಿಂದ ಕಿತ್ತುಕೊಳ್ಳಲು ಹೊರಟಿರುವುದು ಬಿಜೆಪಿಯವರ ಕಣ್ಣಿಗೆ ಕಾಣುತ್ತಿಲ್ಲವೇ, ಇಲ್ಲಿ ರೈತಪರ ಹೋರಾಟ ಮಾಡುವವರು ಅಲ್ಲಿಗೂ ಹೋಗಿ ರೈತರ ಪರವಾಗಿ ಹೋರಾಟ ನಡೆಸಿ ಎಂದು ಸವಾಲು ಹಾಕಿದರು.

ವಿಚಾರ ಸಂಕಿರಣದಲ್ಲಿ ಪ್ರೊ.ಶಬ್ಬೀರ್ ಮುಸ್ತಾಫ, ರೈತ ಮುಖಂಡ ಮಂಜು ಕಿರಣ್, ಆಯೋಜಕ ಅಬ್ದುಲ್ ಖಾದರ್ ಶಾಹಿದ್, ಅಜೀಮುದ್ದಿನ್ ಶಾ ಉಪಸ್ಥಿತರಿದ್ದರು.

ವಕ್ಫ್ ವಿಚಾರವಾಗಿ ರೈತರಿಗೆ ಸುಳ್ಳು ನೋಟಿಸ್ ಕೊಟ್ಟಿರುವ ಅಧಿಕಾರಿಗಳನ್ನು ಸರಕಾರ ಅಮಾನತ್ತು ಮಾಡಲಿ. ಅದು ಬಿಟ್ಟು ರಾಜಕೀಯಕ್ಕಾಗಿ ಹಿಂದೂ-ಮುಸ್ಲಿಮರ ನಡುವೆ ಸಂಘರ್ಷ ಉಂಟು ಮಾಡಲು ಪ್ರಯತ್ನ ಮಾಡಬಾರದು. ಹಿಂದೂ-ಮುಸ್ಲಿಮ್ ಒಗ್ಗಟ್ಟಾಗಿರುವುದನ್ನು ಸಹಿಸಲು ಕೆಲವರಿಗೆ ಆಗುತ್ತಿಲ್ಲ. ಕೆಲ ಮಾಧ್ಯಮಗಳು ತಪ್ಪು ತಪ್ಪಾಗಿ ಸುದ್ದಿ ಬಿತ್ತರಿಸುತ್ತಿವೆ. ವಾಸ್ತವವನ್ನು ಅರ್ಥಮಾಡಿಕೊಂಡು ವಕ್ಫ್ ಬೋಡ್೯ ಕುರಿತು ವರದಿ ಮಾಡಿದರೆ ಸಮಾಜಕ್ಕೆ ಒಳಿತಾಗಲಿದೆ.

-ಅಬ್ದುಲ್ ಖಾದರ್ ಶಾಹಿದ್, ಮುಸ್ಲಿಮ್ ಮುಖಂಡ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News