ರೋಹಿಣಿ ಸಿಂಧೂರಿ ಅವರನ್ನು ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷಗಳು ರಕ್ಷಿಸುತ್ತಿವೆ: ಜೆಡಿಎಸ್‌ ನಾಯಕ ಸಾ.ರಾ. ಮಹೇಶ್ ಆಕ್ರೋಶ

Update: 2024-11-30 11:41 GMT

ಮೈಸೂರು: ಮೈಸೂರಿನ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಐ.ಎ.ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ನಡೆಸಿರುವ ಅಕ್ರಮದ ಬಗ್ಗೆ ನಾನು ದೂರು ನೀಡಿ ವರ್ಷಗಳೇ ಕಳೆದಿದ್ದರು ಅವರ ಮೇಲೆ ಇದೂವರೆಗೂ ಯಾವುದೇ ಕ್ರಮ ಆಗಿಲ್ಲ. ಬಿಜೆಪಿ-ಕಾಂಗ್ರೆಸ್ ಎರಡು ಪಕ್ಷಗಳೂ ಅವರನ್ನು ರಕ್ಷಿಸುತ್ತಿದ್ದಾರೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ತಮ್ಮ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೋಹಿಣಿ ಸಿಂಧೂರಿ ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಹಲವಾರು ಅಕ್ರಮಗಳನ್ನು ಎಸಗಿದ್ದಾರೆ. 6 ರೂ.ಗೆ ದೊರಕುವ ಬಟ್ಟೆ ಬ್ಯಾಗ್ ಗೆ 48 ರೂ. ಕೊಟ್ಟು ಖರೀದಿಸಿ 8.5 ಕೋಟಿ ರೂ. ಅಕ್ರಮ ಮಾಡಲು ಮುಂದಾಗಿದ್ದರು. ಜಿಲ್ಲಾಧಿಕಾರಿ ನಿವಾಸದಲ್ಲಿ ಅನುಮತಿ ಇಲ್ಲದೆ ಸ್ವಿಮ್ಮಿಂಗ್ ಪೂಲ್, ಜಿಮ್ ನಿರ್ಮಾಣ ಮಾಡಿಕೊಂಡಿದ್ದರು. ಕೋವಿಡ್ ಸಮಯದಲ್ಲಿ ಚಾಮರಾಜನಗರಕ್ಕೆ ಸಮಯಕ್ಕೆ ಸರಿಯಾಗಿ ಆಕ್ಸಿನ್ ನೀಡದೆ 32 ಜನರ ಸಾವಿಗೂ ಕಾರಣ ರಾಗಿದ್ದರು. ಜೊತೆಗೆ ಮೈಸೂರಿಗೆ ವರ್ಗಾವಣೆಯಾಗಿ ಬಂದಾಗ ಎಟಿಐ ನಲ್ಲಿ ತಂಗಿದ್ದ ವೇಳೆ ಅಲ್ಲಿನ ವಸ್ತುಗಳನ್ನು ಕದ್ದುಕೊಂಡು ಹೋಗಿದ್ದರು. ಇದೆಲ್ಲದರ ಬಗ್ಗೆ ಕ್ರಮ‌ಕೈಗೊಳ್ಳುವಂತೆ ಅಂದಿನ ಬಿಜೆಪಿ ಸರ್ಕಾರಕ್ಕೂ ದೂರು ನೀಡಿದ್ದೆ. ಆದರೆ ತನಿಖೆ ಮಾಡಿಸುವುದಾಗಿ ಹೇಳಿ ಅವರಿಂದ ಕ್ಷಮೆ ಕೇಳಿಸಿದ್ದರು. ಆದರೆ ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೋಹಿಣಿ ಸಿಂಧೂರಿ ನನ್ನ ಒಡೆತನದ ಕಲ್ಯಾಣ ಮಂಟಪ ರಾಜಕಾಲುವೆ ಮೇಲಿದೆ ಎಂದು ತನಿಖೆಗೆ ಆದೇಶಿಸಿದ್ದರು. ತನಿಖೆ ನಡೆದು ರಾಜಕಾಲುವೆ ಮೇಲೆ ಇಲ್ಲ ಎಂದು ವರದಿ ಬಂತು. ಬಳಿಕ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಎರಡನೇ ಬಾರಿ ತನಿಖೆ ಮಾಡಿಸಿದರು ಅದು ಸಹ ಸುಳ್ಳು ಎಂಬ ವರದಿ ಬಂತು. ನನ್ನ ಜಾಗವನ್ನೇ ಸರ್ಕಾರ ಒತ್ತುವರಿ ಮಾಡಿಕೊಂಡಿರುವುದರ ಬಗ್ಗೆ ನ್ಯಾಯಲಯಕ್ಕೆ ಹೋಗಿ ಹೈಕೋಟ್೯ 4 ಸಾವಿರ ಚದರಡಿ ಬದಲಿ ಜಾಗ ನೀಡುವಂತೆ ಆದೇಶಿಸಿದ್ದರೂ ಇದೂವರೆಗೂ ಬದಲಿ ಜಾಗ ನೀಡದೆ ನ್ಯಾಯಾಂಗ ಉಲ್ಲಂಘನೆ ಮಾಡಲಾಗಿದೆ ಎಂದರು.

ನನ್ನ ವಿರುದ್ಧ ಇಷ್ಟೆಲ್ಲಾ ತನಿಖೆಯಾಗಿ ವರದಿ ಬಂದಿದ್ದರೂ ಯಾಕೆ ರೋಹಿಣಿ ಸಿಂಧೂರಿ ಅವರ ಬಗ್ಗೆ ತನಿಖೆಯಾಗಿ ವರದಿ ಬಂದಿಲ್ಲ. ರೋಹಿಣಿ ಸಿಂಧೂರಿ ಮುಜರಾಯಿ ಇಲಾಖೆ ಆಯುಕ್ತರಾಗಿದ್ದ ವೇಳೆ ನಿಯಮ ಉಲ್ಲಂಘಿಸಿ ತಿರುಪತಿಯಲ್ಲಿ ಕರ್ನಾಟಕ ಭವನ ನಿರ್ಮಾಣದ ಉಪ ಗುತ್ತಿಗೆಯನ್ನು 10 ಕೋಟಿ ರೂ.‌ವೆಚ್ಚದಲ್ಲಿ ಕಂಪನಿಯೊಂದಕ್ಕೆ ನೀಡಿದ್ದಾರೆ. ಇದೆಲ್ಲದರ ಬಗ್ಗೆ ತನಿಖೆಯಾಗಿ ವರದಿ ನೀಡುವುದು ಸರ್ಕಾರದ ಕೆಲಸ. ಆದರೆ 2020 ರಿಂದ ಇದೂವರೆಗೂ ಅವರ ಮೇಲೆ ಕ್ರಮ ಆಗಿಲ್ಲ ಯಾಕೆ ಎಂದು ಪ್ರಶ್ನಿಸಿದರು.

ರೋಹಿಣಿ ಸಿಂಧೂರಿ ಅವರನ್ನು ಐ.ಎ.ಎಸ್ ಲಾಭಿ ರಕ್ಷಿಸುತ್ತಿದೆ. ಈ ಹಿಂದೆ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ರವಿಕುಮಾರ್ ತನಿಖಾಧಿಕಾರಿಯನ್ನು ನೆಪಕ್ಕೆ ನೇಮಕ ಮಾಡಿದ್ದರು. ಇತ್ತೀಚೆಗೆ ನಿವೃತ್ತರಾದ ಆಂಧ್ರ ಮೂಲದ ಐಎಎಸ್ ಅಧಿಕಾರಿ ತನಿಖಾಧಿಕಾರಿಯನ್ನು ಬದಲಾಯಿಸಿ 8 ತಿಂಗಳಲ್ಲಿ ಮತ್ತೊಬ್ಬರನ್ನು ನೇಮಕ ಮಾಡಿದರು. ರಜನೀಶ್ ಗೋಯಲ್ ಮುಖ್ಯ ಕಾರ್ಯದರ್ಶಿಯಾದ ವೇಳೆ ಮತ್ತೊಬ್ಬರನ್ನು ನೇಮಿಸಿದರು. ಈಗಿನ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಬೇರೊಬ್ಬರನ್ನು ತನಿಖಾಧಿಕಾರಿಯಾಗಿ ನೇಮಿಸಿದ್ದಾರೆ.‌ಇದೆಲ್ಲವನ್ನು ನೋಡಿದರೆ ರೋಹಿಣಿ ಸಿಂಧೂರಿ ಅವರನ್ನು ರಕ್ಷಣೆ ಮಾಡುವ ಕೆಲಸವಾಗುತ್ತಿದೆ. ಇದರ ಹಿಂದೆ ಯಾವ ಬಲಾಢ್ಯ ಶಕ್ತಿ ಇದೆ ಎಂಬುದು ಬಹಿರಂಗಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಕೂಡಲೇ ರೋಹಿಣಿ ಸಿಂಧೂರಿ ವಿರುದ್ಧದ ತನಿಖೆಯನ್ನು ನಿಷ್ಪಕ್ಷಪಾತವಾಗಿ ಮಾಡಿ ವರದಿ ನೀಡದಿದ್ದರೆ ಸರ್ಕಾರದ ಮುಖ್ಯಕಾರ್ಯದರ್ಶಿ ಸೇರಿದಂತೆ ಎಲ್ಲರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ನಗರಪಾಲಿಕೆ ಸದಸ್ಯ ಎಸ್.ಬಿ.ಎಂ.ಮಂಜು, ರಾಜ್ಯ ವಕ್ತಾರ ರವಿಚಂದ್ರೇಗೌಡ, ಚಾಮರಾಜ ಅಧ್ಯಕಗಷ ಮಂಜು, ಮಾಜಿ ಪಾಲಿಕೆ ಸದಸ್ಯರಾದ ಭಾಗ್ಯ ಮಾದೇಶ್, ಶ್ರೀಧರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News