ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ನಾಳೆ ಮೈಸೂರು ಬಂದ್ ಗೆ ಕರೆ; ವಿವಿಧ ಸಂಘಟನೆಗಳ ಬೆಂಬಲ

Update: 2025-01-06 17:49 GMT

ಮೈಸೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಡಾ. ಬಿ.ಆರ್ ಅಂಬೇಡ್ಕರ್ ಅಭಿಮಾನಿಗಳ ಹೋರಾಟ ಸಮಿತಿ, ಪ್ರಗತಿಪರ ಸಂಘಟನೆಗಳ ಒಕ್ಕೂಟ, ದಸಂಸ, ಜ.7ರ ಮಂಗಳವಾರ ಮೈಸೂರು ಬಂದ್ ಗೆ ಕರೆ ನೀಡಲಾಗಿದ್ದು, ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ.

ನಾಳಿನ ಮೈಸೂರು ಬಂದ್ ಗೆ ಪ್ರಗತಿಪರ ಸಂಘಟನೆ, ಅಂಬೇಡ್ಕರ್ ಸಂಘ, ಪೌರ ಕಾರ್ಮಿಕರ ಸಂಘಗಳು ಬೆಂಬಲ ಸೂಚಿಸಿದ್ದು, ನಾಳೆ ಮೈಸೂರಿನಲ್ಲಿ ಕರ್ತವ್ಯಕ್ಕೆ ಹಾಜರಾಗದಿರಲು ಪೌರ ಕಾರ್ಮಿಕರು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಮೈಸೂರಿನ ಟೌನ್ ಹಾಲ್ ಮುಂಭಾಗ ವೇದಿಕೆ ನಿರ್ಮಾಣ ಮಾಡಲಾಗಿದ್ದು ಮೈಸೂರು ಬಂದ್ ಗೆ ಬೆಂಬಲ ಕೋರಿ ಸಂಘಟನೆ ಮುಖಂಡರು ಕರ ಪತ್ರ ಹಂಚುತ್ತಿದ್ದಾರೆ.

ಮೈಸೂರು ಬಂದ್ ಗೆ ಕರ್ನಾಟಕ ರಾಜ್ಯ ರೈತ ಸಂಘ ಬಡಗಲಪುರ ನಾಗೇಂದ್ರ ಬಣ ಬೆಂಬಲ ಸೂಚಿಸಿ ಪತ್ರ ಬರೆದಿದೆ. ಇನ್ನು ಬಂದ್ ಗೆ ಮೈಸೂರು ಹೋಟೆಲ್ ಮಾಲೀಕರ ಸಂಘದಿಂದ ನೈತಿಕ ಬೆಂಬಲ ನೀಡಿದೆ. ಹೋಟೆಲ್ ಮುಚ್ಚದೆ ಬಂದ್‌ಗೆ ನೈತಿಕ ಬೆಂಬಲ ನೀಡಲಾಗುತ್ತದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ ನಾರಾಯಣ್ ಗೌಡ ಮಾಹಿತಿ ನೀಡಿದ್ದಾರೆ.

ನಮಗೆ ಬಾಬಾಸಾಹೇಬ್ ಡಾ ಬಿ. ಆರ್‌ ಅಂಬೇಡ್ಕರ್ ಅವರ ಬಗ್ಗೆ ಅಪಾರ ಗೌರವ ಇದೆ. ನಮ್ಮದು ಆತಿಥ್ಯದ ಉದ್ಯಮ ಅಗತ್ಯ ಸೇವೆಗಳಡಿಯಲ್ಲಿ ಬರುತ್ತದೆ. ವಿವಿಧ ರಾಜ್ಯಗಳಿಂದ ಆಗಮಿಸಿದ ಪ್ರವಾಸಿಗರಿಗೆ, ಆಸ್ಪತ್ರೆಯ ರೋಗಿಗಳಿಗೆ ಊಟೋಪಚಾರ, ಕುಡಿಯುವ ನೀರು ಅತ್ಯಂತ ಅಗತ್ಯವಾಗಿರುತ್ತದೆ . ಸೇವೆ ನೀಡುವವರಿಗೆ ಸರ್ಕಾರ ಬೆಂಬಲವಾಗಿ ನಿಲ್ಲಬೇಕು. ಬಂದ್ ದಿನ ಕಪ್ಪು ಪಟ್ಟಿ‌ ಧರಿಸಿ ಬಂದ್‌ ಗೆ ಬೆಂಬಲ ನೀಡುತ್ತೇವೆ. ಪ್ರತಿಭಟನೆಯಲ್ಲಿ ಹೋಟೆಲ್ ಮಾಲೀಕರು ಭಾಗಿಯಾಗುತ್ತಾರೆ. ಆದರೆ ಹೋಟೆಲ್ ಬಂದ್ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಮೈಸೂರು ಬಂದ್ ಗೆ ಕೆ.ಎಸ್.ಶಿವರಾಮ್ ಬೆಂಬಲ :

ನಾಳಿನ ಮೈಸೂರು ಬಂದ್ ಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮ್ ಬೆಂಬಲ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಕೆ.ಎಸ್ ಶಿವರಾಮ್, ಪ್ರಧಾನಿ ನರೇಂದ್ರ ಮೋದಿ ಅವರು ಅಮಿತ್ ಶಾ ರಾಜೀನಾಮೆ ಪಡೆಯಬೇಕು. ಈ ನಿಟ್ಟಿನಲ್ಲಿ ನಾಳೆ ಮೈಸೂರು ಬಂದ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಈಗಾಗಲೇ ಹಲವಾರು ಸಂಘಟನೆ ಮುಖಂಡರನ್ನ ಭೇಟಿ ಮಾಡಿದ್ದೇವೆ. ಹೋಟೆಲ್ ಮಾಲೀಕರ ಸಂಘ, ಕನ್ನಡಪರ ಸಂಘಟನೆ, ರೈತ ಸಂಘಟನೆ ಸಾರ್ವಜನಿಕರನ್ನು ಕೂಡ ಮನವಿ ಮಾಡಿದ್ದೇವೆ. ಪ್ರಗತಿಪರರ ಸಂಘಟನೆಗಳು ಕೂಡ ಬೆಂಬಲ ಸೂಚಿಸಿವೆ. ನಾಳಿನ ಬಂದ್ ಶಾಂತಿಯುತವಾಗಿ ಇರುತ್ತದೆ. ಮೈಸೂರಿನ ಜನತೆ ಕೂಡ ಈ ಬಂದ್ ಗೆ ಬೆಂಬಲ ನೀಡಬೇಕು. ಬಂದ್ ವಿಚಾರಕ್ಕೆ ಒಂದಷ್ಟು ತಂಡಗಳನ್ನ ಮಾಡಿಕೊಳ್ಳಲಾಗಿದೆ. ಮೈಸೂರು ನಗರದ ಹಲವು ಕಡೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ತಿಳಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News