ಕೇಂದ್ರದ ಮಧ್ಯಂತರ ಬಜೆಟ್ ಕೇಸರೀಕರಣ ಪಾರ್ಟಿಯ ವಿದಾಯಕ ಬಜೆಟ್: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಲೇವಡಿ
ಮೈಸೂರು: ಕೇಂದ್ರ ಸರಕಾರ ಮಂಡಿಸಿದ ಮಧ್ಯಂತರ ಬಜೆಟ್ ಕೇಸರೀಕರಣ ಪಾರ್ಟಿಯ ವಿದಾಯಕ ಬಜೆಟ್ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಲೇವಡಿ ಮಾಡಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಕೇಂದ್ರ ಸರಕಾರ ಮಂಡಿಸಿದ ಬಜೆಟ್ ನಿರಾಶದಾಯಕ ಬಜೆಟ್. ಯಾವ್ಯಾವ ಕಾಮಗಾರಿಗೆ ಎಷ್ಟೆಷ್ಟು ಹಣ ಮೀಸಲಿಡಬೇಕು ಎನ್ನೋದು ಬಜೆಟ್, ಆದರೆ ಇದ್ಯಾವುದೂ ಇಲ್ಲಿ ಪ್ರಸ್ತಾಪ ಆಗಲಿಲ್ಲ. ರೈಲ್ವೆ ಬಜೆಟ್ ಮಂಡಿಸಲು ಕಡಿಮೆ ಎಂದರೂ ಮೂರು ಗಂಟೆ ಬೇಕು. ಇದು ಅತ್ಯಂತ ಕಡಿಮೆ ಅವಧಿಯಲ್ಲಿ ಕೇವಲ 59 ನಿಮಿಷದಲ್ಲಿ ಓದಿ ಕೈ ತೊಳೆದುಕೊಂಡರು. ಅತ್ಯಂತ ಕಡಿಮೆ ಅವಧಿಯಲ್ಲಿ ಬಜೆಟ್ ಮಂಡಿಸಿದ ಕೀರ್ತಿ ನಿರ್ಮಲಾ ಸೀತಾರಾಮನ್ ಅವರಿಗೆ ಸಲ್ಲುತ್ತದೆ ಎಂದು ಕಿಡಿಕಾರಿದರು.
ನಿರುದ್ಯೋಗ, ಶಿಕ್ಷಣ, ರೈತರ ಸಮಸ್ಯೆ, ಇದ್ಯಾವುದರ ಬಗ್ಗೆಯೂ ಈ ಬಜೆಟ್ ನಲ್ಲಿ ಚರ್ಚೆ ಆಗಿಲ್ಲ. ಯಾವುದೇ ಅನುದಾನ ನೀಡಿಲ್ಲ. ಚಪ್ಪಲಿ ಹಾಕೋರು, ಮೊಬೈಲ್ ಇರುವವರು ಬಡವರಲ್ವಂತೆ, 25ಕೋಟಿಯಷ್ಟು ಜನ ಬಡತನ ರೇಖೆಗಿಂತ ಮೇಲೆ ಎತ್ತಿದ್ದೇವೆ ಎಂದು ಸುಳ್ಳು ಹೇಳುತ್ತಾರೆ. ಈ ಬಜೆಟ್ 30% ಸಾಲದ ಬಜೆಟ್. 2014 ಮಾರ್ಚ್ ವರೆಗೆ ದೇಶದ ಸಾಲ 53 ಲಕ್ಷ ಕೋಟಿ ರೂ. ಇತ್ತು. 2024ರಲ್ಲಿ 195 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಸಾಲ ಮಾಡಿ ತುಪ್ಪ ತಿನ್ನು ಅಂತಾರೆ, ಸಾಲ ಮಾಡಿದ್ರು ತುಪ್ಪ ತಿನ್ನೋಕು ಆಗಲ್ಲ ಎಂದು ಹೇಳಿದರು.
ನೀವು ಅಧಿಕಾರಕ್ಕೆ ಬಂದಾಗಿನಿಂದ ಆತ್ಮಹತ್ಯೆ ಪ್ರಕರಣ 25% ಹೆಚ್ಚಾಗಿದೆ. 16ರಾಜ್ಯಗಳಲ್ಲಿ ಬರ ಬಂದಿದೆ. ಅದಕ್ಕೆ ಪರಿಹಾರ ನೀಡುವ ವಿಚಾರ ಪ್ರಸ್ತಾಪವೇ ಇಲ್ಲ. 2004-2014ರ ಮನಮೋಹನ್ ಸಿಂಗ್ ಕಾಲದಲ್ಲಿ 13.7% ಜಿ.ಡಿ.ಪಿ ಗ್ರೋಥ್ ಇತ್ತು. 2014 ರಿಂದ ಇಲ್ಲಿಯವರೆಗೆ ಕೇವಲ 9.6% ಗ್ರೋಥ್ ಅಷ್ಟೆ ಎಂದು ಟೀಕಿಸಿದರು.