ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರನ್ನು ಜೈಲಿಗೆ ಕಳುಹಿಸದೇ ಬಿಡುವುದಿಲ್ಲ: ಸಂಸದ ಪ್ರತಾಪ್ ಸಿಂಹ
ಮೈಸೂರು: "ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಯಾವಾಗ ಒಕ್ಕಲಿಗನಾದನೊ ನನಗೆ ಗೊತ್ತಿಲ್ಲ. ಈತ ಒಕ್ಕಲಿಗ ನಾಯಕರ ವಿರುದ್ಧವೇ ನಿಂದಿಸಿದ್ದಾನೆ. ಈತನನ್ನು ಜೈಲಿಗೆ ಕಳುಹಿಸದೆ ಬಿಡುವುದಿಲ್ಲ" ಎಂದು ಸಂಸದ ಪ್ರತಾಪ್ ಸಿಂಹ ಏಕವನದಲ್ಲೇ ವಾಗ್ದಾಳಿ ನಡೆಸಿದರು.
ವಿಜಯನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಸಾಮಾಜಿಕ ಸಮ್ಮೇಳನದಲ್ಲಿ ಮಾತಾಡಿದ ಅವರು, "ಎಂ. ಲಕ್ಷ್ಮಣ್ ವಿರುದ್ಧ ಎರಡು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದೇನೆ. ನನ್ನ ಮೇಲೆ ಮಾಡಿದ್ದ ಸುಳ್ಳು ಆರೋಪ ಸಂಬಂಧ ಮೊಕದ್ದಮೆ ದಾಖಲಿಸಿದ್ದೇನೆ. ಲಕ್ಷ್ಮಣ್ ರನ್ನು ಖಂಡಿತವಾಗಿಯೂ ಜೈಲಿಗೆ ಕಳುಹಿಸುತ್ತೇನೆ" ಎಂದರು.
47 ವರ್ಷಗಳ ಬಳಿಕ ಒಕ್ಕಲಿಗರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ ಎನ್ನುತ್ತಿದ್ದಾರೆ. ಎಂ. ಲಕ್ಷ್ಮಣ್ ಹೋದಲ್ಲಿ ಬಂದಲ್ಲಿ ಒಕ್ಕಲಿಗ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಅವರಿಗೆ ಒಕ್ಕಲಿಗ ಎಂದು ಸರ್ಟಿಫಿಕೆಟ್ ಕೊಟ್ಟವರು ಯಾರು? ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.
"ಒಕ್ಕಲಿಗ ನಾಯಕರಾದ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ವಿರುದ್ಧವೇ ಈತ ನಿಂದಿಸಿದ್ದಾರೆ. ಈತನನ್ನು ನಾನು ಜೈಲಿಗೆ ಕಳುಹಿಸದೇ ಬಿಡುವುದಿಲ್ಲ. ಇದನ್ನು ಬರೆದಿಟ್ಟುಕೊಳ್ಳಿ" ಎಂದು ಸವಾಲು ಹಾಕಿದರು.
ಬಿಜೆಪಿ ಅಭ್ಯರ್ಥಿ ಯದುವೀರ್ ಕುಳಿತುಕೊಳ್ಳುವ ಜಾಗದಲ್ಲಿ ಸಂಸದನಾಗಿ ನಾನು ಕುಳಿತಿರುವ ಸೀಟಿನಲ್ಲಿ ಈತ ಕುಳಿತುಕೊಳ್ಳುತ್ತಾನೆ ಎಂದು ಊಹಿಸಿಕೊಳ್ಳವುದು ಸಾಧ್ಯವಿಲ್ಲ ಎಂದು ಏಕ ವಚನದಲ್ಲೇ ಹರಿಹಾಯ್ದರು.