ಗ್ರೇಟರ್ ಬೆಂಗಳೂರು ಯೋಜನೆಯನ್ನು ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಮಾಡುತ್ತೇನೆ: ಡಿ.ಕೆ.ಶಿವಕುಮಾರ್

ಮೈಸೂರು: ಗ್ರೇಟರ್ ಬೆಂಗಳೂರು ಯೋಜನೆಯನ್ನು ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಮಾಡೇ ಮಾಡುತ್ತೇನೆ.ಇದನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವ ಪ್ರಶ್ನಯೇ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ಪಿತಾಮಹ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ. ಅವರಿಗೆ ಡಿ.ನೋಟಿಫೈ ಮಾಡಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಏಕೆ ಹೇಳಲಿಲ್ಲ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿಯೇ ಗ್ರೇಟರ್ ಬೆಂಗಳೂರಿಗೆ ಚಾಲನೆ ನೀಡಿ 300 ಕೋಟಿ ರೂ. ಹಣವನ್ನು ಕಟ್ಟಿಸಿಕೊಂಡಿದ್ದಾರೆ. ಅದನ್ನು ನಾನು ಹಿಂಪಡೆದು ಆರೋಪ ಹೊರಿಸಿಕೊಳ್ಳಲು ಸಾಧ್ಯವಿಲ್ಲ. ತಮ್ಮ ಮಗ ಮಾಡಿದ ಯೋಜನೆಯನ್ನು ಹಿಂಪಡೆಯುವಂತೆ ಆಗಲೆ ದೇವೇಗೌಡರು ಹೇಳಬಹುದಿತ್ತು. ಯಾಕೆ ಅವರು ಆ ಕೆಲಸ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಗ್ರೇಟರ್ ಬೆಂಗಳೂರಿಗೆ ಜೆಡಿಎಸ್ ನವರೇ ಅಡಿಪಾಯ ಹಾಕಿದ್ದಾರೆ. ಅದನ್ನು ನಾವು ಮುಂದುವರೆಸಿಕೊಂಡು ಹೋಗುತ್ತೇವೆ. ದೇಶಕ್ಕೆ ಮಾದರಿಯಾಗುವಂತ ಗ್ರೇಟರ್ ಬೆಂಗಳೂರು ಯೋಜನೆಯನ್ನು ಮಾಡುತ್ತೇನೆ. ಇದರಲ್ಲಿ ಯಾವುದೇ ರೈತರಿಗೆ ತೊಂದರೆಯಾಗುವಂತೆ ನಡೆದುಕೊಳ್ಳುವುದಿಲ್ಲ. ಈಗಾಗಲೇ ಆ ಭಾಗದ ರೈತರ ಜೊತೆ ನಾನು ಮಾತನಾಡಿದ್ದು, ಬೆಂಗಳೂರಿಗಿಂತಲೂ ಉತ್ತಮ ಟೌನ್ ಶಿಪ್ ಗಳನ್ನು ನಿರ್ಮಾಣ ಮಾಡುತ್ತೇವರ. ರೈತರು ನೀಡುವ ಭೂಮಿಗೆ ಪರ್ಯಾಯವಾಗಿ ಹಣ ನೀಡುತ್ತೇವೆ. ಇಲ್ಲ ಅಂದರೆ ಅವರಿಗೆ ಟೌನ್ ಶಿಪ್ ನಲ್ಲಿ ಭೂಮಿ ನೀಡಿ ಅವರು ನಿರೀಕ್ಷೆಗೂ ಮೀರಿದಂತ ಹಣ ಸಿಕ್ಕಿ ಖುಷಿಪಡುವಂತೆ ಮಾಡುತ್ತೇವೆ ಎಂದು ಹೇಳಿದರು.
ರಾಮನಗರ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ವಿರೋಧ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರು ದಕ್ಷಿಣ ಭಾಗಕ್ಕೆ ಇದು ಬರುವುದರಿಂದ ಅದನ್ನು ಬದಲಾಯಿಸಲಾಗುತ್ತಿದೆ. ನಾವು ಹೊರಗಡೆಯಿಂದ ಬಂದು ಬದಲಾಯಿಸುತ್ತಿಲ್ಲ, ನಮ್ಮ ಊರು ನಮ್ಮ ಹಕ್ಕು. ಇದನ್ನು ಹೇಗೆ ಬದಲಾಯಿಸಬೇಕು, ಯಾವಾಗ ಮಾಡಬೇಕು ಎಂಬುದು ನನಗೆ ಗೊತ್ತಿದೆ. ಅದನ್ನು ಮಾಡೇ ಮಾಡುತ್ತೇನೆ ಎಂದು ಹೇಳಿದರು.
ಕಾವೇರಿ ನದಿ ಕರ್ನಾಟಕ,ತಮಿಳುನಾಡು, ಕೇರಳ ರಾಜ್ಯಗಳಿಗೆ ಜೀವ ನದಿ. ಈ ನದಿಯಿಂದ ಹಲವಾರು ಉದ್ಯಮಗಳು, ಜನರ ಬದುಕಿಗೆ ಅನುಕೂಲವಾಗಿದೆ. ಇಂತಹ ಪವಿತ್ರ ನದಿಗೆ ಕಾವೇರಿ ಆರತಿ ಮೂಲಕ ಗೌರವ ಸಲ್ಲಿಸುತ್ತಿದ್ದೇವೆಯೇ ಹೊರತು ಯಾವುದೇ ರಾಜಕಾರಣ ಇಲ್ಲ ಎಂದು ಸ್ಪಷ್ಟಪಡಿಸಿದರು.