ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆ ಸಭೆಯಲ್ಲಿ ನಾನು ಭಾಗಿಯಾಗುವುದಿಲ್ಲ: ಶಾಸಕ ಜಿ.ಟಿ. ದೇವೇಗೌಡ

Update: 2025-01-11 21:46 IST
Photo of GT Devegowda

ಶಾಸಕ ಜಿ.ಟಿ. ದೇವೇಗೌಡ

  • whatsapp icon

ಮೈಸೂರು: ನಾಳೆ ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆ ಸಭೆ ನಡೆಯಲಿದೆ. ಆದರೆ ಸಭೆಯಲ್ಲಿ ನಾನು ಭಾಗಿಯಾಗುವುದಿಲ್ಲ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದ್ದಾರೆ.

ಮೈಸೂರಿನಲ್ಲಿ ಶನಿವಾರ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, ನಾನು ಕ್ಷೇತ್ರದ ಅಭಿವೃದ್ಧಿಗೆ ಓಡಾಟ ಮಾಡುತ್ತಿದ್ದೇನೆ. ಪಕ್ಷದ ಸಂಘಟನೆ ಹಾಗೂ ಸಭೆಗೆ ಹಾಜರಾಗಲು ಆಗುತ್ತಿಲ್ಲ. ಈ ಕಾರಣಕ್ಕೆ ಹೋಗುತ್ತಿಲ್ಲ. ಇದನ್ನು ಹೊರತುಪಡಿಸಿದರೆ ನನಗೆ ಯಾವುದೇ ಅಸಮಾಧಾನ ಇಲ್ಲ. ದಿಶಾ ಸಭೆಗೆ ನಮ್ಮ ನಾಯಕರು ಬಂದ ವೇಳೆ ಹೋಗಬೇಕಿತ್ತು. ಆರೋಗ್ಯ ಸರಿ ಇಲ್ಲದ ಕಾರಣಗಳಿಂದ ಹೋಗಲು ಸಾಧ್ಯವಾಗಲಿಲ್ಲ ಎಂದು ಸ್ಪಷ್ಟನೆ ನೀಡಿದರು.

ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಜಿ.ಟಿ ದೇವೇಗೌಡ, ಪಕ್ಷದಲ್ಲಿ ದೇವೇಗೌಡರು ಹಿರಿಯರಿದ್ದಾರೆ. ಕುಮಾರಸ್ವಾಮಿಯವರು ಎರಡು ಬಾರಿ ಸಿಎಂ ಆಗಿದ್ದವರು. ಎಲ್ಲರೂ ಸೇರಿ ಯಾರನ್ನು ಮಾಡುತ್ತಾರೆ ಅವರು ಅಧ್ಯಕ್ಷರಾಗುತ್ತಾರೆ. ನನ್ನ ಮಗ ಜಿ.ಡಿ. ಹರೀಶ್ ಗೌಡ ಮತ್ತು ನಿಖಿಲ್ ಕುಮಾರಸ್ವಾಮಿ ಸ್ನೇಹಿತರು. ಹಾಗಾಗಿ ಅವರು ನಿಖಿಲ್ ರಾಜ್ಯಾಧ್ಯಕ್ಷರಾಗಲಿ ಎಂಬ ಆಸೆ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು. 

ಇನ್ನು ಮುಡಾದಲ್ಲಿ ಅಕ್ರಮ ಪ್ರಭಾವ ಬೀರಿರುವ ಆರೋಪ ಕುರಿತು ಪ್ರತಿಕ್ರಿಯಿಸಿದ ಶಾಸಕ ಜಿ.ಟಿ ದೇವೇಗೌಡ, ತಪ್ಪು ಮಾಡಿದ್ದರೆ ತನಿಖೆಯಾಗಿ ಕ್ರಮ ಕೈಗೊಳ್ಳಲಿ. ನನ್ನದೇನು ಅಭ್ಯಂತರ ಇಲ್ಲ. ಸ್ನೇಹಮಯಿ ಕೃಷ್ಣ ನಮ್ಮ ಹುಡುಗನೇ. ಒಳ್ಳೆ ಕೆಲಸ ಮಾಡುತ್ತಿದ್ದಾನೆ. ರಾಜಕಾರಣಿಗಳು, ಅಧಿಕಾರಿಗಳು ತಪ್ಪು ಮಾಡಿದರೆ ಅವರಿಗೆ ಶಿಕ್ಷೆಯಾಗಲಿ ಅಂತಾ ಹೋರಾಟ ಮಾಡುತ್ತಿದ್ದಾನೆ. ಅವನಿಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ ಎಂದರು.

ನನ್ನ ಮಗಳು ಅಳಿಯ 50:50 ಸೈಟ್ ಪಡೆದವರಿಂದ ವೈಟ್ ಮನಿ ಕೊಟ್ಟು ಸೈಟ್ ಖರೀದಿಸಿದ್ದಾರೆ. ಈ ಬಗ್ಗೆ ನನಗೆ ಗೊತ್ತಿರಲಿಲ್ಲ. ಇಂದು ಬೆಳಗ್ಗೆ ಮಗಳಿಗೆ ಕರೆ ಮಾಡಿ ವಿಚಾರ ತಿಳಿದುಕೊಂಡೆ. ಈ ಪ್ರಕರಣವನ್ನು ಲೋಕಾಯುಕ್ತರಿಗೆ ಕೊಟ್ಟಿದ್ದರೆ ಸಂತೋಷ. ತಪ್ಪು ಮಾಡಿದ್ದರೆ ತನಿಖೆ ಪ್ರಾರಂಭಿಸಲಿ ಎಂದರು.

2028ಕ್ಕೆ ಸಿಎಂ ಆಗುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಜಿ.ಟಿ ದೇವೇಗೌಡ, ಈ ರೀತಿ ಯಾರೇ ಹೇಳಿದರೂ ಅದು ಭ್ರಮೆ. 2028ಕ್ಕೆ ಏನಾಗುತ್ತೆ ಎಂದು ಹೇಳಲು ಈಗ ಸಾಧ್ಯವಿಲ್ಲ. ಸಿಎಂ ಆಗಬೇಕಾದರೆ ಜನ ಮತ ಹಾಕಬೇಕು. ಶಾಸಕರು ಸಿಎಂ ಆಯ್ಕೆ ಮಾಡಬೇಕು. ಸುಮ್ಮನೆ ಸಿಎಂ ಆಗುತ್ತೇನೆ ಅನ್ನೋದು ಭ್ರಮೆ. ಸದ್ಯದ ಪರಿಸ್ಥಿತಿಯಲ್ಲಿ 2028ಕ್ಕೆ ಸಿಎಂ ಯಾರಾಗುತ್ತಾರೆ ಅಂತ ಹೇಳಲಿಕ್ಕೆ ನಾನು ಜ್ಯೋತಿಷಿ ಅಲ್ಲ. ಹಿಂದೆ ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂದು ಹೇಳಿದ್ದೆ. ಅದು ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಹೇಳಿದ್ದು. ಈಗ ಸಿಎಂ ಯಾರಾಗ್ತಾರೆ ಎಂದು ಹೇಳುವ ಪರಿಸ್ಥಿತಿ ಇಲ್ಲ. ನನಗೆ ಸಿಎಂ ಆಗುವ ಆಸೆ ಇಲ್ಲ. ಸಿಎಂ ಆಗಲು ಖರ್ಚು ಮಾಡಬೇಕಾದಷ್ಟು ಹಣವೂ ನನ್ನ ಬಳಿ ಇಲ್ಲ. ಕೆಲವರು ಸಿಎಂ ಆಗೋ ಕಾರಣಕ್ಕೆ ಹಣ ಖರ್ಚು ಮಾಡಿ ಕಾದಿದ್ದಾರೆ. ಆ ಶಕ್ತಿ ನನ್ನ ಬಳಿ ಇಲ್ಲ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News