ಕಾಂಗ್ರೆಸ್ ನಿಂದ ಆಹ್ವಾನ?: ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದು ಹೀಗೆ...
ಮೈಸೂರು: ಬಿಜೆಪಿ ಟಿಕೆಟ್ ಕೈ ತಪ್ಪಿದ ಮೇಲೆ ಕಾಂಗ್ರೆಸ್ ಪಕ್ಷದಿಂದ ಆಹ್ವಾನ ಬಂದಿದಿಯಾ ಎಂಬ ಪ್ರಶ್ನೆಗೆ ಸಂಸದ ಪ್ರತಾಪ್ ಸಿಂಹ ಸ್ಪಷ್ಟ ಉತ್ತರ ನೀಡಲು ನಿರಾಕರಿಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಸೋಮವಾರ ಬಿಜೆಪಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದಾಗ ನನಗೆ ಎಲ್ಲಾ ಪಕ್ಷದವರು ಮತ ಹಾಕಿದ್ದಾರೆ. ರಾಜಕಾರಣದಲ್ಲಿ ಕೆಲವೊಂದು ವಿಚಾರಗಳನ್ನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.
ಬಿಜೆಪಿ ಟಿಕೆಟ್ ತಪ್ಪಿದಾಗ ಕುರುಬ ಸಮಾಜದ ಮುಖಂಡರು ದೂರವಾಣಿ ಕರೆ ಮಾಡಿ "ನೀವು ಚುನಾವಣೆಗೆ ಸ್ಪರ್ಧಿಸಿ, ಬೇಕಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ" ಎಂದು ಹೇಳಿದ್ದರು. ಹಾಗಾಗಿ ಎಲ್ಲರೂ ನನ್ನೊಂದಿಗೆ ಚೆನ್ನಾಗಿದ್ದಾರೆ ಎಂದರು.
ಯದುವೀರ್ ಅವರು ಅರಮನೆ ಉತ್ತರಾಧಿಕಾರಿಯಾಗಿರುವುದರಿಂದ ಮಹರಾಜರಾಗಿ ಕೆಲಸ ಮಾಡುತ್ತಾರಾ? ಅಥವಾ ಜನಪ್ರತಿನಿಧಿಯಾಗಿ ಕೆಲಸ ಮಾಡುತ್ತಾರಾ ಎಂಬ ಪ್ರಶ್ನೆ ಎತ್ತಿದ್ದೆ ಅಷ್ಟೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಕ್ಷ ಈ ಬಾರಿ ಬೇರೆಯವರಿಗೆ ಟಿಕೆಟ್ ಕೊಟ್ಟಿದೆ. ಇದರಿಂದ ನನಗೆ ಯಾವುದೇ ಬೇಸರ ಇಲ್ಲ. ಪಕ್ಷ ನನ್ನ ತಾಯಿ ಇದ್ದ ಹಾಗೆ. ಪಕ್ಷದ ಅಭ್ಯರ್ಥಿಯ ಗೆಲವಿಗೆ ಶ್ರಮಿಸುತ್ತೇನೆ. ಯದುವೀರ್ ಗೆ ಟಿಕೆಟ್ ಸಿಕ್ಕಿದಾಗ ನಾನು ನಿಮ್ಮ ಏಜೆಂಟ್ ಆಗಿ ಕೆಲಸ ಮಾಡುತ್ತೇನೆ ಎಂದಿದ್ದೇನೆ. ಹಾಗಾಗಿ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.