ವ್ಯವಸ್ಥಿತವಾಗಿ ಜೆಡಿಎಸ್ ಮುಗಿಸಲು ಬಿಜೆಪಿ ಸ್ಕೆಚ್ ಹಾಕಿದೆ : ಕೃಷ್ಣಭೈರೇಗೌಡ
ಮೈಸೂರು : ʼಬಿಜೆಪಿ ವ್ಯವಸ್ಥಿತವಾಗಿ ಜೆಡಿಎಸ್ ಮುಗಿಸಲು ಸ್ಕೆಚ್ ಹಾಕಿದೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷ ಉಳಿಯಬೇಕೆಂದು ಆಸೆ ಪಡುತ್ತೇನೆʼ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜೆಡಿಎಸ್ ಸಮಾವೇಶ ಮಾಡಲಿ. ಜೆಡಿಎಸ್ ಕೂಡ ಬಹಳ ಇತಿಹಾಸ ಹೊಂದಿರುವ ಪಕ್ಷ. ಬಿಜೆಪಿ ಸ್ಕೆಚ್ ಹಾಕಿದ್ದಾರೆ. ಹೇಗೆ ಬದುಕುತ್ತಾರೆ ಕಾದು ನೋಡಬೇಕು. ಕರ್ನಾಟಕದಲ್ಲಿ ಜನತಾ ದಳ ಇರಬೇಕು. ನಾವು ವಿರೋಧ ಪಕ್ಷವನ್ನು ನಿರ್ಣಾಮ ಮಾಡುತ್ತೇವೆ ಎಂದು ಹೇಳಲ್ಲ. ಜೆಡಿಎಸ್‌ಗೆ ಒಳ್ಳೆಯದಾಗಲಿ" ಎಂದರು.
ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ತ್ರಿಕೋನ ಸ್ಪರ್ಧೆ ಇದ್ದಾಗ 97 ಸಾವಿರ ಮತ ಪಡೆದಿದ್ದರು. ಬಿಜೆಪಿ- ಜೆಡಿಎಸ್ ಒಂದಾದ ಮೇಲೆ ಕನಿಷ್ಠ 10 ಸಾವಿರ ಮತಗಳು ಹೆಚ್ಚಾಗಬೇಕಿತ್ತು. ಹೇಗೆ 85 ಸಾವಿರ ಮತಗಳಿಗೆ ಇಳಿಯಿತು. ಎಲ್ಲಿಗೆ ಹೋಯ್ತು ಬಿಜೆಪಿ ಮತಗಳು ಎಂದು ಪ್ರಶ್ನಿಸಿದರು.
ಡಿ.ಕೆ.ಶಿವಕುಮಾರ್‌ಗೆ ಒಳ್ಳೆಯ ಸಮಯ ಬರಲಿ :
ಡಿ.ಕೆ.ಶಿವಕುಮಾರ್ ಅವರಿಗೆ ಒಳ್ಳೆಯ ಸಮಯ ಬರಲಿ, ಒಳ್ಳೆಯದಾಗಲಿ. ಬಹಳ ವರ್ಷದಿಂದ ರಾಜಕೀಯದಲ್ಲಿದ್ದಾರೆ. ಯಾರ್ಯಾರಿಗೆ ಜೀವನದಲ್ಲಿ ಏನು ಸಿಗಬೇಕು ಅದು ಸಿಕ್ಕೇ ಸಿಗುತ್ತೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಪರವಾಗಿ ಮಾತನಾಡಿದರು.
ಡಿ.ಕೆ.ಶಿವಕುಮಾರ್ ನನಗೆ ಸಮಯ ಬರುತ್ತೆ ಒಳ್ಳೆಯದಾಗುತ್ತೆ ಅಂಥ ಹೇಳಿದ್ದಾರೆ. ಅಷ್ಟು ಹೇಳಬಾರದು ಅಂದರೆ ಹೇಗೆ? ಸರಕಾರದ ಮಾಡುತ್ತಿರುವ ಕೆಲಸಗಳ ಬಗ್ಗೆ ಚರ್ಚೆ ಆಗಬೇಕು. ಆದರೆ, ಪ್ರತಿದಿನ ಅಧಿಕಾರದ ಬಗ್ಗೆ ಚರ್ಚೆ ಮಾಡುವುದು ಸರಿಯಲ್ಲ. ರಾಜಕೀಯದಲ್ಲಿ ಬದಲಾವಣೆಗಳು ಕಾಲದಿಂದ ಕಾಲಕ್ಕೆ ಇರುತ್ತೆ. ಅಧಿಕಾರ ಶಾಶ್ವತ ಅಲ್ಲ. ಸಮಯ ಬಂದಾಗ ಏನು ಆಗಬೇಕು ಅದು ಆಗುತ್ತೆ ಎಂದು ಅವರು ಹೇಳಿದರು.