ಲೋಕಾಯುಕ್ತ ವಿಚಾರಣೆ | ಸುಳ್ಳು ಆರೋಪಕ್ಕೆ ಸತ್ಯವನ್ನು ತಿಳಿಸಿದ್ದೇನೆ : ಸಿಎಂ ಸಿದ್ದರಾಮಯ್ಯ

Update: 2024-11-06 09:12 GMT
Photo of CM Siddaramaiah

 ಸಿದ್ದರಾಮಯ್ಯ

  • whatsapp icon

ಮೈಸೂರು : ʼಮುಡಾಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದ್ದು, ಲೋಕಾಯುಕ್ತ ವಿಚಾರಣೆಯಲ್ಲಿ ಸತ್ಯವನ್ನು ತಿಳಿಸಲಾಗಿದೆʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಚಾರಣೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ʼಲೋಕಾಯುಕ್ತ ವಿಚಾರಣೆಗೆ ಇಂದು ಹಾಜರಾಗಿದ್ದು, ಅವರ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನೀಡಿದ್ದೇನೆʼ ಎಂದರು.

ಬಿಜೆಪಿಯವರು ಗೋಬ್ಯಾಕ್ ಸಿಎಂ ಎಂಬ ಪ್ರತಿಭಟನೆ ನಡೆಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ʼಸ್ನೇಹಮಯಿ ಕೃಷ್ಣ ಅವರು ಕೋರಿದಂತೆ, ರಾಜ್ಯಪಾಲರು ಆದೇಶದಂತೆ ಲೋಕಾಯುಕ್ತ ವಿಚಾರಣೆಯನ್ನು ನಡೆಸಲಾಗಿದೆ. ಬಿಜೆಪಿಯವರು ವಿಚಾರಣೆಯ ವಿರುದ್ಧವಾಗಿದ್ದಾರೆ ಎಂಬ ಅರ್ಥವಲ್ಲವೇ? ಇದರಿಂದ ಈ ಆರೋಪ ಸುಳ್ಳು ಎಂದು ಸ್ಪಷ್ಟವಾಗುತ್ತದೆʼ ಎಂದರು.

ವಿಚಾರಣೆ ನಡೆಸುವ ಲೋಕಾಯುಕ್ತದ ಮೇಲೆ ನಂಬಿಕೆಯಿಲ್ಲ, ತನಿಖೆಯನ್ನು ಸಿಬಿಐನವರು ನಡೆಸಬೇಕೆಂಬ ಬಿಜೆಪಿಯವರ ಬೇಡಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿ, ಕೇಂದ್ರ ಸರಕಾರದಲ್ಲಿ ಸಿಬಿಐ ಇದೆ. ಬಿಜೆಪಿಯವರು ಇದುವರೆಗೆ ಯಾವುದಾದರೂ ಹಗರಣವನ್ನು ಸಿಬಿಐ ಗೆ ವಹಿಸಿದ್ದಾರೆಯೇ? ಎಂದು ಪ್ರಶ್ನಿಸಿದರು.

ಬಿಜೆಪಿಯವರಿಗೆ ಕಾನೂನಿನ ಬಗ್ಗೆ ಗೌರವವಿಲ್ಲ :

ʼಲೋಕಾಯುಕ್ತ ಒಂದು ಸ್ವತಂತ್ರ ತನಿಖಾ ಸಂಸ್ಥೆ. ಲೋಕಾಯುಕ್ತದ ನಂಬಿಕೆಯಿಲ್ಲದ ಬಿಜೆಪಿಯವರಿಗೆ ಕಾನೂನಿನ ಬಗ್ಗೆ ಗೌರವವಿಲ್ಲ. ಬಿಜೆಪಿಯವರು ಯಾವುದೇ ಪ್ರಕರಣವನ್ನು ಇದುವರೆಗೆ ಸಿಬಿಐ ಗೆ ನೀಡಿಲ್ಲ. ರಾಜ್ಯಪಾಲರು ಕೂಡ ಲೋಕಾಯುಕ್ತದಲ್ಲಿಯೇ ತನಿಖೆಯಾಗಬೇಕೆಂದು ಸೂಚಿಸಿದ್ದು, ಅದರಂತೆ ವಿಚಾರಣೆ ನಡೆಯುತ್ತಿದೆʼ ಎಂದರು.

ಸುಳ್ಳು ಆರೋಪಗಳಿಗೆ ನ್ಯಾಯಾಲಯದಲ್ಲಿ ತಕ್ಕ ಉತ್ತರ :

ನಿವೇಶನ ಹಂಚಿಕೆ ಕಾನೂನೂ ಬದ್ಧವಾಗಿಯೇ ಆಗಿದೆ. ಬಿಜೆಪಿ ಜೆಡಿಎಸ್ ನವರು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಈ ಸಂಬಂಧ ಲೋಕಾಯುಕ್ತ ವಿಚಾರಣೆಯಲ್ಲಿ ಇಂದು ಉತ್ತರವನ್ನು ನೀಡಿದ್ದು, ತನಿಖೆಯನ್ನು ಕಾನೂನುರೀತ್ಯ ಮುಂದುವರೆಸಲಿದ್ದಾರೆ. ನನ್ನ ಮೇಲೆ ಬಂದ ಸುಳ್ಳು ಆರೋಪಗಳ ಮಾಡಲಾಗಿದ್ದರಿಂದ ನನ್ನ ಪತ್ನಿ ನಿವೇಶನಗಳನ್ನು ವಾಪಸ್ಸು ನೀಡಿದರೇ ಹೊರತು, ತಪ್ಪು ಮಾಡಿದ್ದಕ್ಕಾಗಿ ನಿವೇಶನಗಳನ್ನು ವಾಪಸ್ಸು ನೀಡಲಾಗಿಲ್ಲ. ಈ ಮುಡಾ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ನನ್ನ ಬಳಿಯಿಲ್ಲ ಹಾಗೂ ನನ್ನಿಂದ ಯಾವುದೇ ದಾಖಲೆ ಕೇಳಲಾಗಿಲ್ಲ. ನ್ಯಾಯಾಲಯದಲ್ಲಿ ತೀರ್ಮಾನವಾಗುವವರೆಗೆ ನನ್ನ ರಾಜಕೀಯ ಜೀವನಕ್ಕೆ ಯಾವುದೇ ಕಪ್ಪು ಮಸಿ ಇಲ್ಲ. ನನ್ನ ಮೇಲೆ ಮಾಡಲಾಗಿರುವ ಸುಳ್ಳು ಆರೋಪಗಳಿಗೆ ನ್ಯಾಯಾಲಯದಲ್ಲಿ ತಕ್ಕ ಉತ್ತರವನ್ನು ನೀಡಲಿದ್ದೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News