ಮೈಸೂರು | ದಲೈವಾಲಾ ಅವರ ಪ್ರಾಣ ಉಳಿಸಲು ರಾಷ್ಟ್ರಪತಿ, ಪ್ರಧಾನಿ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ
ಮೈಸೂರು : ರೈತರ ವಿವಿಧ ಬೇಡಿಕೆ ಈಡೇರಿಕೆಗೆ ದೆಹಲಿ ಗಡಿಯಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ನಾಯಕ ಜಗಜಿತ್ ಸಿಂಗ್ ದಲೈವಾಲ ಅವರ ಪ್ರಾಣ ಉಳಿಸಲು ರಾಷ್ಟ್ರಪತಿ, ಪ್ರಧಾನಿ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ರೈತರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತರಿ, ಸಾಲ ಮನ್ನಾ ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಲೈವಾಲ ಅವರು ನ.26ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸತ್ಯಾಗ್ರಹ 48ನೇ ದಿನಕ್ಕೆ ಕಾಲಿಟ್ಟಿದ್ದು ದೇಹ ನಿತ್ರಾಣಗೊಂಡು ರಕ್ತದೊತ್ತಡ ಕೂಡ ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ. ಯಾವಾಗ ಬೇಕಾದರೂ ಪ್ರಾಣ ಹೋಗುವಂತಹ ಸನ್ನಿವೇಶ ನಿರ್ಮಾಣವಾಗಿದೆ. ರೈತ ನಾಯಕನ ಈ ಸ್ಥಿತಿಗೆ ತಲುಪಲು ಕೇಂದ್ರ ಸರ್ಕಾರವೇ ನೇರ ಕಾರಣ ಎಂದು ಕಿಡಿಕಾರಿದರು.
ಐತಿಹಾಸಿಕ ದೆಹಲಿ ರೈತ ಹೋರಾಟದ ಸಂದರ್ಭದಲ್ಲಿ ರೈತರ ಜೀವನ ಹಾಗೂ ಕೃಷಿ ರಕ್ಷಣೆಗೆ ಬಹಳ ಅಗತ್ಯವಿದ್ದ ಕರಾಳ ಕೃಷಿ ಕಾಯ್ದೆಗಳ ರದ್ದತಿ, ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಸೇರಿದಂತೆ ಹಲವು ಹಕ್ಕೋತ್ತಾಯಗಳನ್ನು ಮುಂದಿಟ್ಟಿತ್ತು. 385 ದಿನಗಳ ಅನಿರ್ದಿಷ್ಟ ಹೋರಾಟದ ನಂತರ ರೈತ ಹೋರಾಟಕ್ಕೆ ಮಣಿದ ಸರಕಾರ, ಕರಾಳ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿ ಉಳಿದ ಹಕ್ಕೋತ್ತಾಯಗಳನ್ನು ಈಡೇರಿಸಲು ಲಿಖಿತ ಭರವಸೆ ನೀಡಿತ್ತು. ಆದರೆ ಸರಕಾರ ಈ ಭರವಸೆಗೆ ವಿರುದ್ಧವಾಗಿ ನಡೆದುಕೊಂಡಿದೆ. ದೇಶಾದ್ಯಂತ ಎಲ್ಲಾ ರೈತರ ಪಂಪಸೆಟ್‌ಗಳಿಗೆ ಮೀಟರ್ ಅಳವಡಿಸಿ ವಿದ್ಯುತ್ ಪಾವತಿ ಮಾಡುವಂತೆ ಬಲವಂತದಿಂದ ಆಧಾರ್ ಕಾರ್ಡ್ ಜೋಡಣೆ ಪೂರ್ಣಗೊಳಿಸಿದೆ. ರೈತರ ಬೆಳೆಗಳನ್ನು ಸಕಾಲದಲ್ಲಿ ಖರೀದಿಸುತ್ತಿಲ್ಲ. ರೈತ ವಿರೋಧಿ ಧೋರಣೆ, ರೈತರ ಆಗ್ರಹಗಳನ್ನು ನಿರ್ಲಕ್ಷ ಮಾಡಿದ್ದರ ಫಲವಾಗಿ ರೈತ ನಾಯಕರ ಪ್ರಾಣ ಹೋಗುವಂತಹ ಪರಿಸ್ಥಿತಿ ಉಂಟಾಗಿದೆ. ಕೂಡಲೇ ಕೇಂದ್ರ ಸರಕಾರ ಮಧ್ಯಪ್ರವೇಶ ಮಾಡಬೇಕು. ರಾಜ್ಯ ಸರ್ಕಾರ ಕೂಡ ರೈತ ನಾಯಕರ ಪ್ರಾಣ ಉಳಿಸಲು ತಕ್ಷಣ ಕ್ರಮ ಕೈಗೊಳ್ಳಲು ಆಗ್ರಹಿಸಿ ಪ್ರಧಾನ ಮಂತ್ರಿಗೆ ಪತ್ರ ಬರೆಯಬೇಕು ಎಂದು ಆಗ್ರಹಿಸಿದರು.
ಹಕ್ಕೋತ್ತಾಯಗಳು: ಹಿರಿಯ ರೈತ ನಾಯಕ ಜಗಜಿತ್ ಸಿಂಗ್ ದಲೈವಾಲ ಪ್ರಾಣ ಉಳಿಸಲು ಕ್ರಮವಹಿಸಿ ಹೋರಾಟ ನಿರತರ ಜತೆಗೆ ಮಾತುಕತೆ ಆರಂಭಿಸಬೇಕು. ಎಲ್ಲಾ ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ನೀಡುವ ಕಾನೂನು ಜಾರಿ ಮಾಡಬೇಕು. ರೈತರ ಎಲ್ಲಾ ರೀತಿಯ ಕೃಷಿ ಸಾಲ ಮನ್ನಾ ಮಾಡಬೇಕು. ವಿದ್ಯುತ್ ಖಾಸಗೀಕರಣ ಮಾಡಬಾರದು. 60 ವರ್ಷ ದಾಟಿರುವ ಎಲ್ಲಾ ಕೃಷಿಕರಿಗೆ 5000 ಮಾಸಿಕ ಪಿಂಚಣಿ ನೀಡಬೇಕು. ದೆಹಲಿ ರೈತ ಹೋರಾಟ ಮುಂದಿಟ್ಟಿದ್ದ ಎಲ್ಲಾ ಹಕ್ಕೊತ್ತಾಯಗಳನ್ನು ಈಡೇರಿಸಬೇಕು. ರೈತ ವಿರೋಧಿ, ಕರಾಳ ಕೃಷಿ ಕಾಯ್ದೆಯ ತದ್ರೂಪಾಗಿರುವ ಕೃಷಿ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ಧೋರಣೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಹೊಸಕೋಟೆ ಬಸವರಾಜು, ಮರಂಕಯ್ಯ, ಹೊಸೂರು ಕುಮಾರ್, ಉಗ್ರ ನರಸಿಂಹೇಗೌಡ, ಜಯರಾಂ ಸೇರಿದಂತೆ ಹಲವರು ಭಾಗವಹಿಸಿದ್ದರು.