ಮೈಸೂರು| ಅಂಬೇಡ್ಕರ್ ಭಾವಚಿತ್ರ ವಿರೂಪಗೊಳಿಸಿದ ಪ್ರಕರಣ : ಕಿಡಿಗೇಡಿಗಳನ್ನು ಬಂಧನಕ್ಕೆ ಆಗ್ರಹಿಸಿ ಮೆರವಣಿಗೆ

Update: 2025-04-30 00:12 IST
ಮೈಸೂರು| ಅಂಬೇಡ್ಕರ್ ಭಾವಚಿತ್ರ ವಿರೂಪಗೊಳಿಸಿದ ಪ್ರಕರಣ : ಕಿಡಿಗೇಡಿಗಳನ್ನು ಬಂಧನಕ್ಕೆ ಆಗ್ರಹಿಸಿ ಮೆರವಣಿಗೆ
  • whatsapp icon

ಮೈಸೂರು : ಮೈಸೂರು ತಾಲೂಕು ವಾಜಮಂಗಲ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರ ವಿರೂಪಗೊಳಿಸಿ, ಮಲ ಬಳಿದು ವಿಕೃತಿ ಮೆರೆದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆಂದು ಮತ್ತು ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ವಹಿಸಿರುವುದಾಗಿ ಆರೋಪಿಸಿ ಡಾ.ಬಿ.ಆರ್.ಅಂಬೇಡ್ಕರ್ ಹೋರಾಟ ಸಮಿತಿ ವತಿಯಿಂದ ಮಂಗಳವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ವಾಜಮಂಗಲ ಗ್ರಾಮದಿಂದ ಮೈಸೂರಿನ ಸಿದ್ಧಾರ್ಥನಗರದ ಬುದ್ಧ ಪ್ರತಿಮೆವರೆಗೂ ಸುಮಾರು 10 ಕಿ.ಮೀ. ಪಾದಯಾತ್ರೆ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರು, ಪೊಲೀಸರು ಮತ್ತು ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸುಡುಬಿಸಿಲನ್ನು ಲೆಕ್ಕಿಸದೆ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾದ ಪಾದಯಾತ್ರೆ ಮಧ್ಯಾಹ್ನ 1 ಗಂಟೆಗೆ ಸಿದ್ಧಾರ್ಥನಗರ ತಲುಪಿತು. ಮಹಿಳೆಯರು, ಮಕ್ಕಳು, ಯುವಕರು, ವಯಸ್ಕರು ಸೇರಿದಂತೆ ಸಾವಿರಾರು ಮಂದಿ ಪಾದಯಾತ್ರೆಯಲ್ಲಿ ಭಾಗವಹಿಸದ್ದರು.

ಅಂಬೇಡ್ಕರ್ ಪ್ರತಿಮೆ ವಿರೂಪಗೊಳಿಸಿ 12 ದಿನ ಕಳೆದರೂ ಇನ್ನೂ ಆರೋಪಿಗಳ ಬಂಧನವಾಗಿಲ್ಲ. ಇದು ಪೊಲೀಸರು ಮತ್ತು ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಈ ದೇಶದಲ್ಲಿ ದಲಿತರು, ಶೋಷಿತರು ದಮನಿತರು ಎಂದರೆ ಇಷ್ಟೊಂದು ನಿರ್ಲಕ್ಷ್ಯವೇ? ನಮಗೆ ನ್ಯಾಯಯುತವಾಗಿ ಬದುಕಲು ಅವಕಾಶವಿಲ್ಲವೆ? ಇದು ಅಂಬೇಡ್ಕರ್ ಭಾರತ. ಇಲ್ಲಿ ಎಲ್ಲರಿಗೂ ಸಮಾನ ಹಕ್ಕಿದೆ. ಇದನ್ನು ಆಳುವ ಸರಕಾರಗಳು ಅರ್ಥಮಾಡಿಕೊಂಡು ನ್ಯಾಯದೊರಕಿಸಿಕೊಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ಆಗಮಿಸಿ ಮನವಿ ಸ್ವೀಕರಿಸಿದರು. ಇದೇ ವೇಳೆ ಮಾತನಾಡಿದ ಅವರು, ಈ ಘಟನೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಇನ್ನು ಒಂದು ವಾರದೊಳಗೆ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ದಲಿತ ಹೋರಾಟಗಾರ ಮಾಜಿ ಮೇಯರ್ ಪುರುಷೋತ್ತಮ್, ದಸಂಸ ಹೋರಾಟಗಾರರಾದ ಬೆಟ್ಟಯ್ಯ ಕೋಟೆ, ಶಂಭುಲಿಂಗಸ್ವಾಮಿ, ಆಲಗೂಡು ಶಿವಕುಮಾರ್, ಮಣಿಯಯ್ಯ, ದಸಂಸ ತಾಲೂಕು ಸಂಚಾಲಕ ಕಲ್ಲಹಳ್ಳಿ ಕುಮಾರ್, ಮಾಜಿ.ತಾ.ಪಂ.ಸದಸ್ಯ ಹಾರೋಹಳ್ಳಿ ಸುರೇಶ್, ಮಲ್ಲಹಳ್ಳಿ ನಾರಾಯಣ, ಬನ್ನಳ್ಳಿ ಸೋಮಣ್ಣ, ಲೇಖಕ ಸಿದ್ಧಸ್ವಾಮಿ, ಜನಸಂಗ್ರಾಮ ಪರಿಷತ್ ರಾಜ್ಯಾಧ್ಯಕ್ಷ ನಗರ್ಲೆ ವಿಜಯಕುಮಾರ್, ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ, ಚೆನ್ನಯ್ಯ, ಭೀಮರಾಜ್, ಶಿವು, ರಾಜಣ್ಣ, ದೂರ ನಂದೀಶ್, ಪುಟ್ಟಸ್ವಾಮಿ, ಕುಬೇರ ಮಂಜು, ವಾಜಮಂಗಲ ಗ್ರಾಮ ಪಂಚಾಯತ್ ಸದಸ್ಯ ಕೆ.ಶಿವು, ವಾಜಮಂಗಲ ಗ್ರಾಮದ ಮುಖಂಡರಾದ ಚಿನ್ನಸ್ವಾಮಿ, ಸುರೇಶ್, ಮಂಜು, ಸಿದ್ದಪ್ಪ, ಸಣ್ಣಪ್ಪ, ಮಹದೇವಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸವನ್ನು ಜಾತಿವಾದಿ ಮನಸ್ಸುಗಳು, ಕೋಮುವಾದಿ ಶಕ್ತಿಗಳು ಮಾಡುತ್ತಿವೆ. ಎಲ್ಲ ಜಾತಿಯವರು ಸಾಮರಸ್ಯದಿಂದ ಬದುಕುತ್ತಿದ್ದ ವಾಜಮಂಗಲ ಗ್ರಾಮದಲ್ಲಿ ವಿಷ ಬೀಜ ಬಿತ್ತುವ ಕೆಲಸವನ್ನು ಕಾಣದ ಕೈಗಳು ಮಾಡುತ್ತಿವೆ. ಅವರನ್ನು ಕೂಡಲೇ ಬಂಧಿಸಬೇಕು.

-ಬೆಟ್ಟಯ್ಯ ಕೋಟೆ, ದಸಂಸ ಜಿಲ್ಲಾ ಸಂಚಾಲಕ

ವಾಜಮಂಗಲದ ಘಟನೆಯಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಬೇರೆ ವಿಚಾರಗಳಲ್ಲಿ ಶೀಘ್ರವೇ ಆರೋಪಿಗಳನ್ನು ಪತ್ತೆ ಹಚ್ಚುತ್ತಾರೆ. ಆದರೆ ಈ ಘಟನೆಯನ್ನು ನಿರ್ಲಕ್ಷಿಸುತ್ತಿರುವುದರ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ ಎಂಬ ಅನುಮಾನ ಮೂಡುತ್ತಿದೆ. ಆರೆಸ್ಸೆಸ್, ಬಿಜೆಪಿಯವರು ಒಂದು ಕಡೆ ಅಂಬೇಡ್ಕರ್ ಎನ್ನುತ್ತಾರೆ ಮತ್ತೊಂದು ಕಡೆ ಸಂವಿಧಾನ ಬದಲಾಯಿಸುತ್ತೇವೆ ಎನ್ನುತ್ತಾರೆ. ಈ ಕುತಂತ್ರಕ್ಕೆ ನಾವು ಬಗ್ಗುವುದಿಲ್ಲ.

-ಪುರುಷೋತ್ತಮ್, ಹೋರಾಟಗಾರ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News