ಮೈಸೂರು | ಮುಡಾ ಕಚೇರಿ ಮೇಲೆ ಈಡಿ ದಾಳಿ, ದಾಖಲೆ ಪರಿಶೀಲನೆ
ಮೈಸೂರು : ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅಕ್ರಮ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಮುಡಾ ಕಚೇರಿಗೆ ಜಾರಿ ನಿರ್ದೇಶನಾಲಯದ (ಈ.ಡಿ) ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಶುಕ್ರವಾರ ಬೆಳಿಗ್ಗೆ 10.50 ಗಂಟೆ ಸಮಯದಲ್ಲಿ ಮುಡಾ ಕಚೇರಿಗೆ 20 ಅಧಿಕಾರಿಗಳ ಈ.ಡಿ ತಂಡ ಆಗಮಿಸಿ, ಮುಡಾ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ.
ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಡಾ.ಕೆ.ವಿ.ರಾಜೇಂದ್ರ ಅವರು ಮುಡಾ ಆಡಳಿತಾಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಅವರು ಮೈಸೂರು ನಗರಾಭಿವೃದ್ಧಿ ಇಲಾಖೆಯಲ್ಲಿ 50:50 ಅನುಪಾದಲ್ಲಿ ಅಕ್ರಮವಾಗಿ ಹಂಚಿಕೆ ಮಾಡಿ, ಸುಮಾರು ಒಂದು ಸಾವಿರ ಕೋಟಿ ರೂ. ಅಕ್ರಮ ಎಸಗಲಾಗಿದೆ ಎಂದು ನಗರಾಭಿವೃದ್ಧಿ ಕಾರ್ಯದರ್ಶಿಗಳಿಗೆ ಪತ್ರ ಕೂಡ ಬರೆದಿದ್ದರು.
ಇದರ ಆಧಾರದ ಮೇಲೆ ಮುಡಾ ಕಚೇರಿ ಮೇಲೆ ಈ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಆರ್.ಟಿ.ಐ. ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಸಹ ಮುಡಾದಲ್ಲಿ 5 ಸಾವಿರ ಕೋಟಿ ರೂ. ಗಳಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಈಡಿಗೆ ದೂರು ನೀಡಿದ್ದರು.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಈ.ಡಿ ಅಧಿಕಾರಿಗಳ ತಂಡ ಇಂದು(ಶುಕ್ರವಾರ) ಮುಡಾ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಮುಡಾ ಆಯುಕ್ತ ರಘುನಂದನ್ ಮತ್ತು ಮುಡಾ ಕಾರ್ಯದರ್ಶಿ ಪ್ರಸನ್ನ ಕುಮಾರ್ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿ ಅವರು 50:50 ಅನುಪಾತದಲ್ಲಿ 14 ನಿವೇಶನ ಪಡೆದಿದ್ದು, ವಾಪಸ್ ನೀಡಿದ್ದಾರೆ. ಈ ಸಂಬಂಧ ಕೂಡ ಈಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
"ಅ.18 ಮತ್ತು ಅ.19ರಂದು ಎರಡು ದಿನಗಳು ತನಿಖೆ ಮುಂದುವರಿಯಲಿದೆ. ಈ.ಡಿ ಅಧಿಕಾರಿಗಳು ಕೇಳುವ ಎಲ್ಲಾ ಮಾಹಿತಿಗಳನ್ನು ನೀಡಲಾಗುವುದು" ಎಂದು ಮುಡಾ ಕಾರ್ಯದರ್ಶಿ ಪ್ರಸನ್ನ ಕುಮಾರ್ ಮಾಹಿತಿ ನೀಡಿದ್ದಾರೆ.
ಮುಡಾಗೆ ಪೊಲೀಸ್ ಬಿಗಿ ಭದ್ರತೆ:
ಈ.ಡಿ ದಾಳಿ ಹಿನ್ನೆಲೆಯಲ್ಲಿ ಮೈಸೂರು ಮುಡಾ ಮುಖ್ಯ ಕಚೇರಿಗೆ ಬೀಗ ಹಾಕಲಾಗಿದೆ. ಜೊತೆಗೆ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಈಡಿ ಅಧಿಕಾರಿಗಳ ಜೊತೆ 20 ಸಿಆರ್‌ಪಿಎಫ್ ಯೋಧರು ಆಗಮಿಸಿದ್ದು, ಸಿಆರ್‌ಪಿಎಫ್ ಅಧಿಕಾರಿಗಳಿಗೆ ಸ್ಥಳೀಯ ಪೊಲೀಸರು ಸಹಕಾರ ನೀಡಿದ್ದಾರೆ.