ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಪ್ರತಾಪ್ ಸಿಂಹಗಿಂತ ಉತ್ತಮ ಅಭ್ಯರ್ಥಿ ಸಿಕ್ಕಿದ್ದಾರೆ : ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್
ಮೈಸೂರು: ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ನಿರ್ದಿಷ್ಟವಾದ ಕಾರಣ ಏನೂ ಇಲ್ಲ. ಮೈಸೂರು ಕ್ಷೇತ್ರಕ್ಕೆ ಪ್ರತಾಪ್ ಸಿಂಹಗಿಂತ ಉತ್ತಮ ಅಭ್ಯರ್ಥಿ ಸಿಕ್ಕಿದ್ದಾರೆ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರ್ವಾಲ್ ಸ್ಪಷ್ಟಪಡಿಸಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯದುವಂಶ ಸೇವೆ ಇಡೀ ದೇಶಕ್ಕೆ ಗೊತ್ತಿದೆ. ಈಗ ಅವರು ಪ್ರಜಾಪ್ರಭುತ್ವದ ಭಾಗ ಆಗಲು ಚುನಾವಣೆಗೆ ಬಂದಿದ್ದಾರೆ. ಇವರಿಂಗಿತಲೂ ಉತ್ತಮ ಅಭ್ಯರ್ಥಿ ಬೇಕಾ. ಯದುವೀರ್ ನಮ್ಮ ಸ್ಟಾರ್ ಕ್ಯಾಂಪೇನರ್. ಅವರನ್ನು ಎಲ್ಲಾ ಕಡೆಗಳಲ್ಲಿ ಬಳಸಿಕೊಳ್ಳುತ್ತೇವೆ" ಎಂದು ಹೇಳಿದರು.
ಪ್ರತಾಪ್ ಸಿಂಹ ಕೂಡ ನಮ್ಮ ಸ್ಟಾರ್ ಪ್ರಚಾರಕ. ಅದಕ್ಕಿಂತಲೂ ಅವರ ಬಗ್ಗೆ ಇನ್ನೇನು ಹೇಳಬೇಕು. ನಮ್ಮ ಅಭ್ಯರ್ಥಿ ಜನಸಾಮಾನ್ಯ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮಹಾರಾಜರು. ಆ ಮಹಾರಾಜರ ವಿರುದ್ದ ನಮ್ಮ ಸಾಮಾನ್ಯ ಅಭ್ಯರ್ಥಿ ಹೋರಾಡುತ್ತಿದ್ದಾರೆ ಎಂದರು.
ಸುಮಲತಾಗೆ ಉತ್ತಮ ಭವಿಷ್ಯ: ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟಿದ್ದರಿಂದ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದು, ಸುಮಲತಾಗೆ ಮುಂದೆ ಉತ್ತಮ ಭವಿಷ್ಯವಿದೆ. ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ದೊರೆಯಲಿದೆ ಎಂದು ಹೇಳಿದರು.
ಜೆಡಿಎಸ್‌ಗೆ ಮಂಡ್ಯ, ಹಾಸನ, ಕೋಲಾರ ಕ್ಷೇತ್ರಗಳನ್ನು ಬಿಟ್ಟುಕೊಟ್ಟ ಕಾರಣ ಸುಮಲತಾ ಅವರಿಗೆ ಟಿಕೆಟ್ ಕೈತಪ್ಪಿದೆ. ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸುಮಲತಾ ಜತೆ ಮಾತನಾಡಿದ್ದಾರೆ. ಸುಮಲತಾ ನಮ್ಮೊಂದಿಗೆ ಇರುತ್ತಾರೆ. ಕಳೆದ ಐದು ವರ್ಷಗಳ ಕಾಲ ಅವರು ನಮ್ಮ ಜತೆಯಲ್ಲೇ ಇದ್ದರು. ಮುಂದೆಯೂ ನಮ್ಮ ಜೊತೆಗೆ ಇರುತ್ತಾರೆ ಎಂದರು.
ರಾಜ್ಯ ಬಿಜೆಪಿಯಲ್ಲಿನ ಬಂಡಾಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕ ಬಿಜೆಪಿಯಲ್ಲಿ ಯಾವುದೇ ಬಂಡಾಯ ಇಲ್ಲ. ಕೆ.ಎಸ್. ಈಶ್ವರಪ್ಪ ನಮ್ಮ ಪಕ್ಷದ ದೊಡ್ಡ ನಾಯಕ. ಈಶ್ವರಪ್ಪ ಪ್ರಚಾರ ಶುರು ಮಾಡಿದ್ದಾರೆ. ಪ್ರಚಾರ ಮಾಡಲಿ ಬಿಡಿ, ಎಲ್ಲ ಸಮಸ್ಯೆ ಬಗೆಹರಿಯುತ್ತದೆ. 28 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ಹೇಳಿದರು.