ಸಂಗೀತ ಕ್ಷೇತ್ರಕ್ಕೆ ಮೈಸೂರಿನ ಕೊಡುಗೆ ಅಪಾರ : ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Update: 2024-11-08 17:33 GMT

ನಿರ್ಮಲಾ ಸೀತಾರಾಮನ್ 

ಮೈಸೂರು : ಭಾರತದಲ್ಲಿನ ಪ್ರತಿಯೊಂದು ರಾಜ್ಯವು ತನ್ನದೇ ಆದ ವಿಭಿನ್ನ ಸಂಸ್ಕೃತಿ, ಭಾಷೆ ಹಾಗೂ ಸಂಗೀತದ ಪರಂಪರೆಯನ್ನು ಹೊಂದಿದ್ದು, ಸಂಗೀತ ಕ್ಷೇತ್ರಕ್ಕೆ ಮೈಸೂರಿನ ಕೊಡುಗೆ ಅಪಾರ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಪ್ರವಾಸೋದ್ಯಮ ಸಚಿವಾಲಯದ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಸಭಾಂಗಣದಲ್ಲಿ ಶುಕ್ರವಾರ ಮೈಸೂರು ಸಂಗೀತ ಸುಗಂಧ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತದ ಸಂಗೀತ ಪರಂಪರೆಗೆ ಕರ್ನಾಟಕ ಸಂಗೀತದ ಕೊಡುಗೆ ಮಹತ್ವವಾಗಿದ್ದು, ಜಾತಿ, ಧರ್ಮ ಹಾಗೂ ಭಾಷೆಯನ್ನು ಮೀರಿ ಇಂದು ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿದೆ ಎಂದರು.

12ನೇ ಮತ್ತು 16ನೇ ಶತಮಾನದ ನಡುವೆ, ವಿಜಯನಗರ ಸಾಮ್ರಾಜ್ಯದ ಆಶ್ರಯದಲ್ಲಿ ಕರ್ನಾಟಕ ಸಂಗೀತವು ಪ್ರವರ್ಧಮಾನಕ್ಕೆ ಬಂದಿತು. ಈ ಸಮಯದಲ್ಲಿ ಕರ್ನಾಟಕ ಸಂಗೀತದ ಪಿತಾಮಹ ಎಂದು ಕರೆಯಲ್ಪಡುವ ಸಂತ ಪುರಂದರದಾಸರು ಲಕ್ಷಾಂತರ ಕೀರ್ತನೆಗಳು, ಭಕ್ತಿಗೀತೆಗಳನ್ನು ರಚಿಸಿದ್ದಾರೆ. ಕರ್ನಾಟಕ ಸಂಗೀತದ ಮೂಲಭೂತ ಪಾಠಗಳನ್ನು ಸಹ ರೂಪಿಸಿದ್ದಾರೆ ಎಂದರು.

ಕನ್ನಡ ಸೇರಿದಂತೆ ದೇಶದ ಎಲ್ಲ ಭಾಷೆ, ಸಂಸ್ಕೃತಿ, ಪರಂಪರೆಯ ರಕ್ಷಣೆಗೆ ಕೇಂದ್ರ ಸರಕಾರ ಬದ್ಧವಾಗಿದೆ. ರಾಜ್ಯ ಸರಕಾರಗಳೂ ಕೇಂದ್ರದ ಕಾರ್ಯಕ್ಕೆ ಕೈ ಜೋಡಿಸಬೇಕು. ಕೇಂದ್ರ ಸರಕಾರ ಮೈಸೂರು ಸೇರಿದಂತೆ ರಾಜ್ಯಕ್ಕೆ ಎಲ್ಲ ಅಗತ್ಯ ಸಹಕಾರ ನೀಡುತ್ತಿದೆ ಎಂದು ಹೇಳಿದರು.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಇಲಾಖೆ ರಾಜ್ಯ ಸಚಿವ ಸುರೇಶ್ ಗೋಪಿ, ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಟಿ.ಎಸ್ ಶ್ರೀವತ್ಸ, ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸುಮನ್ ಬಿಲ್ಲಾ ಉಪಸ್ಥಿತರಿದ್ದರು.

"ವಿಜಯನಗರ ಸಾಮ್ರಾಜ್ಯ ಆಳ್ವಿಕೆ ಕಾಲದಲ್ಲಿ ಸಂಗೀತ ಮನ್ನಣೆ ಪಡೆಯಿತು. ಕರ್ನಾಟಕದಲ್ಲಿ ಪುರಂದರ ದಾಸರು ಕೀರ್ತನೆಗಳ ಮೂಲಕ ಸಂಗೀತವನ್ನ ಪಸರಿಸಿದರು. ಈ ದಸರಾದಲ್ಲಿ ಸಂಗೀತದ ಜೊತೆ ಪ್ರತಿಯೊಂದಕ್ಕೂ ಮನ್ನಣೆ ನೀಡಿದ್ದೇವೆ. ಗಣತಂತ್ರ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವವನ್ನ ಗೌರವಿಸುವ ಮೂಲಕ ಸಂವಿಧಾನದ ಆಶಯಗಳನ್ನ ಎತ್ತಿ ಹಿಡಿಯೋಣ"

-ಡಾ.ಎಚ್.ಸಿ. ಮಹದೇವಪ್ಪ,

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News