ಮೈಸೂರು| ದಸಂಸ ಕಾರ್ಯಕರ್ತರ ಮೇಲೆ ಕ್ರಮ ಜರುಗಿಸುವಂತೆ ಯುವ ಬ್ರಿಗೇಡ್ ಕಾರ್ಯಕರ್ತರ ಪ್ರತಿಭಟನೆ

Update: 2023-12-28 12:39 GMT

ನಂಜನಗೂಡು: ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗ ಯುವ ಬ್ರಿಗೇಡ್ ಸಂಘಟನೆ ವತಿಯಿಂದ ಗುರುವಾರ ಬೆಳಿಗ್ಗೆ ಏಕಾಏಕಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವತಿಷ್ಠಾದಿಕಾರಿ ನಂದಿನಿ ಅವರ ಮೇಲೆ ಯುವಕನೊಬ್ಬ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ.

ಡಿ.26 ರ ಮಂಗಳವಾರ ರಾತ್ರಿ ರಾಕ್ಷಸ ಮಂಟಪದ ವೃತ್ತದಲ್ಲಿ ಆಂಧಕಾಸುರನ ಚಿತ್ರ ಬಿಡಿಸಿ ದಹನ ಮಾಡಲಾಗಿತ್ತು ಎಂದು ಶ್ರೀಕಂಠೇಶ್ವರ ಸ್ವಾಮಿ ದೇವಾಲದ ವತಿಯಿಂದ ಹೇಳಲಾಗುತ್ತಿದೆ. ಆದರೆ ಅದು ಅಂಧಕಾಸುರ ಅಲ್ಲ ಮೂಲನಿವಾಸಿಗಳ ರಾಜ ಮಹಿಷನ ಚಿತ್ರ ಬರೆಸಿ ದಹನ ಮಾಡಲಾಗುತ್ತಿದೆ ಎಂದು ದಸಂಸ ಸಂಘಟನೆ ಆರೋಪ ಮಾಡಿ ಅದಕ್ಕೆ ತಡೆ ನೀಡಿತ್ತು. ಈ ನಡುವೆ ಎರಡೂ ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟಿತ್ತು. ಈ ಸಂಬಂಧ ಯುವ ನಗರಸಭಾ ಸದಸ್ಯ ಕಪಿಲೇಶ್ ಸೇರಿದಂತೆ ಯುವ ಬ್ರಿಗೇಡ್‌ ನ 6 ಮಂದಿ ಮೇಲೆ ಎಫ್.ಐ.ಆರ್.ದಾಖಲಾಗಿತ್ತು. ಈ ನಡುವೆ ದೇವರ ಮೆರವಣಿಗೆಗೆ ಬಾಟಲಿಯಲ್ಲಿ ನೀರು ಎರಚಿದ್ದಾರೆ ಎಂದು ದೇವಸ್ಥಾನದ ಕಾರ್ಯನಿರ್ವಹಕಾಧಿಕಾರಿಗಳು ದಸಂಸ ಕಾರ್ಯಕರ್ತರ ವಿರುದ್ಧ ಪ್ರತಿ ದೂರು ದಾಖಲಿಸಿದ್ದರು.

ದಸಂಸ ಕಾರ್ಯಕರ್ತರ ನಡವಳಿಕೆಯಿಂದ ಯುವ ಬ್ರಿಗೇಡ್ ಸಂಘಟನೆಯವರು ಗುರುವಾರ ಬೆಳಿಗ್ಗೆಯೇ ಏಕಾಏಕಿ ಶ್ರೀಕಂಠೇಶ್ವರ ದೇವಸ್ಥಾನದ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದರು.

ಈ ವೇಳೆ ಯಾವುದೇ ಅನುಮತಿ ಪಡೆಯದೆ ಪ್ರತಿಭಟನೆ ನಡೆಸಲಾಗುತ್ತಿರುವುದರಿಂದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮೈಸೂರಿನ ಎ.ಎಸ್.ಪಿ ನಂದಿನಿ ಅವರ ಮೇಲೆ ವ್ಯಕ್ತಿಯೊಬ್ಬ ಹಲ್ಲೆಗೆ ಯತ್ನಿಸಿದ್ದಾನೆ. ಸ್ಥಳದಲ್ಲೇ ಇದ್ದ ಡಿವೈಎಸ್ಪಿ ಗೋವಿಂದರಾಜು ಆಗಮಿಸಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಿಂದ ಯುವಬ್ರಿಗೇಡ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಹೇಳಲಾಗಿದೆ.

ತಕ್ಷಣ ಪೊಲೀಸರು ಅಲ್ಲಿದ್ದ ಪ್ರತಿಭಟನಾ ನಿರತರನ್ನು ಚದುರಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News