ರಸ್ತೆಗೆ ನನ್ನ ಹೆಸರಿಡುವಂತೆ ನಾನು ಯಾರಿಗೂ ಹೇಳಿಲ್ಲ, ಅದರ ಬಗ್ಗೆ ನನಗೆ ಗೊತ್ತೂ ಇಲ್ಲ : ಸಿದ್ದರಾಮಯ್ಯ

Update: 2025-01-10 20:28 IST
ರಸ್ತೆಗೆ ನನ್ನ ಹೆಸರಿಡುವಂತೆ ನಾನು ಯಾರಿಗೂ ಹೇಳಿಲ್ಲ, ಅದರ ಬಗ್ಗೆ ನನಗೆ ಗೊತ್ತೂ ಇಲ್ಲ : ಸಿದ್ದರಾಮಯ್ಯ
  • whatsapp icon

ಮೈಸೂರು : ʼಮೈಸೂರಿನ ರಸ್ತೆಯೊಂದಕ್ಕೆ ನನ್ನ ಹೆಸರಿಡುವಂತೆ ನಾನು ಯಾರಿಗೂ ಹೇಳಿಯೇ ಇಲ್ಲ. ಅದರ ಬಗ್ಗೆ ನನಗೆ ಗೊತ್ತೂ ಇಲ್ಲʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼ40 ವರ್ಷದಿಂದ ರಾಜಕಾರಣದಲ್ಲಿದ್ದೇನೆ. ಯಾರಿಗೂ ನನ್ನ ಹೆಸರಿಡಿ ಎಂದು ಹೇಳಿಲ್ಲ. ಆ ರಸ್ತೆಗೆ ಬೇರೆ ಹೆಸರಿದ್ದರೆ ಬದಲಾವಣೆ ಮಾಡುವುದು ಬೇಡ. ಹೆಸರಿಡುವ ವಿಚಾರವಾಗಿ ನಾನು ಯಾರ ಜೊತೆ ಚರ್ಚೆಯನ್ನು ಮಾಡಿಲ್ಲʼ ಎಂದರು.

ಆಶಾ ಕಾರ್ಯಕರ್ತೆಯರಿಗೆ 10 ಸಾವಿರ ರೂ. :

ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಪ್ರಶ್ನೆಗೆ ಉತ್ತರಿಸಿದ ಅವರು, ʼಪ್ರತಿಭಟನಾನಿರತ ಆಶಾ ಕಾರ್ಯಕರ್ತೆಯರೊಂದಿಗೆ ಮಾತನಾಡಿರುವೆ, ಪ್ರತಿ ತಿಂಗಳು 10 ಸಾವಿರ ಬರುವಂತೆ ಮಾಡುತ್ತೇವೆ. ಪ್ರತಿಭಟನೆ ವಾಪಸ್ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆʼ ಎಂದು ತಿಳಿಸಿದರು.

 ಶಸ್ತ್ರಾಸ್ತ್ರ ಎಲ್ಲಿದೆ ಎಂಬುದು ಗೊತ್ತಿದೆ :

ಶರಣಾದ ನಕ್ಸಲರ ಬಳಿ ಶಸ್ತ್ರಾಸ್ತ್ರಗಳು ಇದೆ. ಮಹಜರು ಮಾಡಿ ತೆಗೆದುಕೊಂಡು ಬರುತ್ತಾರೆ. ಶಸ್ತ್ರಾಸ್ತ್ರ ಎಲ್ಲಿದೆ ಎಂಬುದು ಗೊತ್ತಿದೆ. ನಕ್ಸಲಿಸಂ ನಮ್ಮ ರಾಜ್ಯದಲ್ಲಿ ಇರಬಾರದು ಎಂಬುದು ನಮ್ಮ ಉದ್ದೇಶ. ಯಾವುದೇ ಹೋರಾಟ ಶಾಂತಿಯುತವಾಗಿರಬೇಕು. ಶಸ್ತ್ರಾಸ್ತ್ರಗಳ ಮೂಲಕ ಹೋರಾಟ ನಡೆಯಬಾರದು ಎಂಬುದು ನಮ್ಮ ಉದ್ದೇಶ. ಅನ್ಯಾಯ, ಶೋಷಣೆಗಳನ್ನ ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ ಎಂದು ಹೇಳಿದರು.

ಶೃಂಗೇರಿಯಲ್ಲಿ ಮತ್ತೊಬ್ಬ ನಕ್ಸಲ್ ಇರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇನ್ನೊಬ್ಬ ನಕ್ಸಲ್ ಇದ್ದಾರೆಯೇ ಅಥವಾ ಇಲ್ಲವೋ ನಮಗೆ ಗೊತ್ತಿಲ್ಲ. ಅವನಿಗೆ ನಾನು ಮುಖ್ಯ ವಾಹಿನಿಗೆ ಬರಲು ಮನವಿ ಮಾಡುತ್ತೇನೆ ಎಂದರು.

ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ :

ಫೆ.15ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಮಾಡುತ್ತೇವೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲಾ ಕಡೆಗಳಲ್ಲೂ ಸಚಿವ ಸಂಪುಟ ಸಭೆ ನಡೆಸುತ್ತಿದ್ದೇವೆ. ಅದೇ ರೀತಿ ಇಲ್ಲಿಯೂ ಮಾಡಲಾಗುತ್ತಿದೆ. ಇದರ ಉದ್ದೇಶ ಈ ಭಾಗದ ಸಮಸ್ಯೆಗಳನ್ನು ಪರಿಹರಿಸುವುದಾಗಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News