ರಾಜ್ಯ ಸರಕಾರ ʼತೈಲ ದರʼ ಏರಿಸುವ ಮೂಲಕ ದ್ವೇಷ ರಾಜಕಾರಣ ಮಾಡುತ್ತಿದೆ : ಬಿ.ವೈ.ವಿಜಯೇಂದ್ರ

Update: 2024-06-23 14:14 GMT

ಮೈಸೂರು : ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನ ನೀಡಲಿಲ್ಲ ಎಂದು ರಾಜ್ಯ ಸರಕಾರ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಸುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸೇಡು ತೀರಿಸಿಕೊಳ್ಳಲು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಈ ಸರಕಾರರ ಏರಿಸಿದೆ. ಗ್ಯಾರಂಟಿಗಳನ್ನು ಕೊಟ್ಟರೂ ಜನ ಅವರ ಕೈ ಹಿಡಿಯಲಿಲ್ಲ. ಈ ಸಿಟ್ಟು ಕಾಂಗ್ರೆಸ್‍ನವರಿಗಿದೆ. ಆದ್ದರಿಂದಲೇ ಜನ ವಿರೋಧಿ ನಿರ್ಧಾರಗಳನ್ನು ಮಾಡುತ್ತಿದೆ. ಸರಕಾರ ಜನರ ಮೇಲೆ ಸೇಡಿನ ರಾಜಕಾರಣ ನಿಲ್ಲಿಸಬೇಕು. ತೈಲ ಬೆಲೆಯನ್ನು ತಕ್ಷಣವೇ ಇಳಿಸಬೇಕು" ಎಂದು ಅವರು ಒತ್ತಾಯಿಸಿದರು.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ದೇವದಾರಿ ಕಬ್ಬಿಣದ ಅದಿರು ಗಣಿ ಕಾರ್ಯಾಚರಣೆಗೆ ಕಡತಕ್ಕೆ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಸಹಿ ಹಾಕಿರುವುದಕ್ಕೆ ವಿರೋಧ ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ʼರಾಜ್ಯ ಸರಕಾರವು ಕೇಂದ್ರದ ಪ್ರತಿ ನಿರ್ಧಾರದಲ್ಲೂ ಮೊಸರಿನಲ್ಲಿ ಕಲ್ಲು ಹುಡುಕುವ ರೀತಿ ವರ್ತಿಸುತ್ತಿದೆʼ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಒಂದು ಕೈಗಾರಿಕೆಯೂ ಬಂದಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರವು ಕೈಗಾರಿಕೆಗಳನ್ನು ಸ್ಥಾಪಿಸಲು ಹೊರಟಾಗ ಅದಕ್ಕೂ ಕಾಂಗ್ರೆಸ್ ತಕರಾರು ಮಾಡುತ್ತಿದೆ. ಎಲ್ಲದರಲ್ಲೂ ರಾಜಕೀಯ ಮಾಡುತ್ತಾ ಕುಳಿತರೆ ರಾಜ್ಯದ ಅಭಿವೃದ್ಧಿ ಹೇಗಾಗುತ್ತದೆ? ಎಂದು ಪ್ರಶ್ನಿಸಿದರು.

ಚನ್ನಪಟ್ಟಣ ಉಪ ಚುನಾವಣೆ ; ಹೈಕಮಾಂಡ್ ಜತೆ ಚರ್ಚೆ

ಚನ್ನಪಟ್ಟಣ ಉಪ ಚುನಾವಣೆ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಮಂಗಳವಾರ (ಜೂನ್ 25) ಹೊಸದಿಲ್ಲಿಗೆ ತೆರಳಿ ಹೈಕಮಾಂಡ್ ಜತೆ ಚರ್ಚಿಸುತ್ತೇನೆ. ಸೀಟನ್ನು ಜೆಡಿಎಸ್‍ಗೆ ಬಿಟ್ಟು ಕೊಡುವ ಅಥವಾ ತೆಗೆದುಕೊಳ್ಳವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಪ್ರಾಥಮಿಕ ಚರ್ಚೆಯೂ ನಡೆದಿಲ್ಲ. ಜೆಡಿಎಸ್ ಮತ್ತು ಬಿಜೆಪಿ ನಾಯಕರು ಸೇರಿ ಚರ್ಚಿಸಿದ ಬಳಿಕವಷ್ಟೇ ನಿರ್ಧಾರ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದರು.

ಕಾಂಗ್ರೆಸ್‍ನಿಂದ ಯಾರಾದರೂ ಸ್ಪರ್ಧಿಸಲಿ, ಅದು ಅವರಿಗೆ ಬಿಟ್ಟ ವಿಚಾರ. ಜನ ಮನಸ್ಸು ಮಾಡಿದರೆ ಎಂತಹ ಫಲಿತಾಂಶ ಬರುತ್ತದೆ ಎಂಬುದಕ್ಕೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶ ಸಾಕ್ಷಿಯಾಗಿದೆ. ಯಾರು ಎಷ್ಟೇ ಬಲಾಢ್ಯರಾದರೂ ಜನರ ತೀರ್ಮಾನವೇ ಅಂತಿಮವಾಗುತ್ತದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News