ಅಮಿತ್ ಶಾ ಹೇಳಿಕೆ ಖಂಡಿಸಿ ಮೈಸೂರು ಬಂದ್ ಗೆ ವ್ಯಾಪಕ ಬೆಂಬಲ: ಆರೆಸ್ಸೆಸ್ ಕಚೇರಿಗೆ ಮುತ್ತಿಗೆ ಯತ್ನ
ಮೈಸೂರು, ಜ.7: ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಡಾ.ಬಿ.ಆರ್.ಅಂಬೇಡ್ಕರ್ ಅಭಿಮಾನಿಗಳ ಹೋರಾಟ ಸಮಿತಿ ಕರೆ ನೀಡಿದ್ದ ಮೈಸೂರು ಬಂದ್ ಗೆ ವ್ಯಾಪಕ ಬೆಂಬಕ ವ್ಯಕ್ತವಾಗುತ್ತಿದೆ. ಈ ನಡುವೆ ಪ್ರತಿಭಟನಾಕಾರರು ಆರೆಸ್ಸೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆಯೂ ನಡೆಯಿತು.
ಇಂದು ಬೆಳಗ್ಗೆ 6 ಗಂಟೆಯಿಂದಲೇ ಅಂಬೇಡ್ಕರ್ ಹೋರಾಟ ಸಮಿತಿಯ ಮುಖಂಡರು ಬೀದಿಗಿಳಿದಿದ್ದು, ಬಂದ್ ಬೆಂಬಲಿಸಿ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿವೆ.
ನಗರದ ಅಶೋಕಪುರಂನ ಬಲ್ಲಾಳ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕೇಂದ್ರ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಇದೇ ವೇಳೆ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಎನ್.ಭಾಸ್ಕರ್ ನೇತೃತ್ವದಲ್ಲಿ ಪ್ರತಿಭಟನಾಕಾರರು ವಾಣಿ ವಿಲಾಸ ರಸ್ತೆಯ ನಂಜುಮಳಿಗೆ ಬಳಿ ಇರುವ ಆರೆಸ್ಸೆಸ್ ಕಚೇರಿ ಮಾಧವ ಕೃಪಾಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ ವಾಸನ್ ಐ ಕೇರ್ ಬಳಿಯೇ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಈ ವೇಳೆ ಕೆಲ ಕಾಲ ಗೊಂದಲ ಉಂಟಾಯಿತು.
ಮಾಜಿ ಮೇಯರ್ ಪುರುಷೋತ್ತಮ್ ನೇತೃತ್ವದಲ್ಲಿ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಮೈಸೂರು ನಗರವನ್ನು ಸಂಪರ್ಕಿಸುವ ಐದು ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ಅಂಬೇಡ್ಕರ್ ಹೋರಾಟ ಸಮಿತಿ ಕರೆ ನೀಡಿರುವ ಬಂದ್ ಕರೆಗೆ ಪೌರ ಕಾರ್ಮಿಕರ ಸಂಘಟನೆ ಬೆಂಬಲ ಸೂಚಿಸಿ ಕೆಲಸ ಸ್ಥಗಿತಗೊಳಿಸಿದೆ. ದಲಿತರ ಪರ ಸಂಘಟನೆ, ಕಾಂಗ್ರೆಸ್ ಪಕ್ಷ, ಹೋಟೆಲ್ ಮಾಲಕರ ಸಂಘಟನೆ, ಕಾರ್ಮಿಕ, ರೈತ, ಅಹಿಂದ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಅಲ್ಲಲ್ಲಿ ಪ್ರತಿಭಟನೆ ನಡೆಸಿ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸುತ್ತಿವೆ.
ಬಂದ್ ಹಿನ್ನಲೆಯಲ್ಲಿ ನಗರ ಸಾರಿಗೆ, ಗ್ರಾಮಾಂತರ ಸಾರಿಗೆ ಬಸ್ ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿವೆ. ಆಟೋ ಚಾಲಕರುಗಳು ಸಹ ಬಂದ್ ಹಿನ್ನೆಲೆಯಲ್ಲಿ ತಮ್ಮ ಸಂಚಾರವನ್ನು ನಿಲ್ಲಿಸಿದ್ದಾರೆ.