ಕ್ರಿಕೆಟ್ ಪಂದ್ಯದ ವೇಳೆ ಗುಂಪು ಥಳಿತ | ವ್ಯಕ್ತಿ ಮೃತ್ಯು

Update: 2024-07-01 16:18 GMT

PC : X 

ಗಾಂಧಿನಗರ : ಗುಜರಾತ್ ನ ಆನಂದ್ ಜಿಲ್ಲೆಯ ಚಿಖೋದರ ಗ್ರಾಮದಲ್ಲಿ ಜೂನ್ 22ರಂದು ನಡೆದ ಕ್ರಿಕೆಟ್ ಪಂದ್ಯಾವಳಿಯೊಂದರ ಫೈನಲ್ ಪಂದ್ಯದ ವೇಳೆ ಗುಂಪೊಂದು 23 ವರ್ಷದ ಸಲ್ಮಾನ್ ವೋಹ್ರಾ ಎಂಬವರನ್ನು ಥಳಿಸಿ ಕೊಂದಿದೆ ಎಂದು ಆರೋಪಿಸಲಾಗಿದೆ.

ಘಟನೆಯು ರಾತ್ರಿ 11:30ಕ್ಕೆ ನಡೆದಿದೆ. ಕ್ರಿಕೆಟ್ ಪಂದ್ಯವನ್ನು ನೋಡಲು ಬಂದಿದ್ದ ಜನರ ಗುಂಪೊಂದು ಸಲ್ಮಾನ್ ಜೊತೆಗೆ ಘರ್ಷಣೆಗೆ ಇಳಿಯಿತು. ಬಳಿಕ ಆ ಗುಂಪು ಅವರನ್ನು ಥಳಿಸಿ ಕೊಂದಿತು ಎನ್ನಲಾಗಿದೆ.

ಸಲ್ಮಾನ್ ಅಲ್ಲದೆ, ಇತರ ಇಬ್ಬರು ಮುಸ್ಲಿಮರೂ ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ ಒಬ್ಬರಿಗೆ 17 ಹೊಲಿಗೆಗಳನ್ನು ಹಾಕಿದರೆ, ಇನ್ನೊಬ್ಬರಿಗೆ 7 ಹೊಲಿಗೆಗಳನ್ನು ಹಾಕಲಾಗಿದೆ ಎಂದು ‘ದ ಕ್ವಿಂಟ್’ ವರದಿ ಮಾಡಿದೆ.

ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ ಆಟಗಾರರ ಪೈಕಿ ಮುಸ್ಲಿಮರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದರು ಮತ್ತು ಅವರು ‘‘ಚೆನ್ನಾಗಿಯೂ ಆಡುತ್ತಿದ್ದರು. ಇದು ‘‘ಹಿಂದುತ್ವವಾದಿ’’ ಸ್ಥಳೀಯರ ಒಂದು ವರ್ಗಕ್ಕೆ ಪಥ್ಯವಾಗಲಿಲ್ಲ. ಹಾಗಾಗಿ, ಪಂದ್ಯ ಆರಂಭಗೊಳ್ಳುವ ಮೊದಲೇ ಅಲ್ಲಿ ಉದ್ವಿಗ್ನತೆ ನೆಲೆಸಿತ್ತು ಎಂದು ಸ್ಥಳೀಯರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಈ ಪಂದ್ಯದಲ್ಲಿ ಆಡಿದ ಒಂದು ತಂಡದ ಬಹುತೇಕ ಆಟಗಾರರು ಮುಸ್ಲಿಮರಾಗಿದ್ದರು ಮತ್ತು ಇನ್ನೊಂದು ತಂಡದಲ್ಲಿ ಮೂವರು ಮುಸ್ಲಿಮ್ ಆಟಗಾರರಿದ್ದರು ಎನ್ನಲಾಗಿದೆ.

ಇದರಿಂದಾಗಿ ಕೋಮು ಗಲಭೆ ಆಗಬಹುದು ಎಂಬ ಎಚ್ಚರಿಕೆಯನ್ನು ಕ್ರಿಕೆಟ್ ಪಂದ್ಯಾವಳಿಯ ಸಂಘಟಕರು ನೀಡಿದ್ದರು. ಅದೂ ಅಲ್ಲದೆ, ಮುಸ್ಲಿಮ್ ಆಟಗಾರರು ಪಂದ್ಯದಲ್ಲಿ ಆಡುವ ಬಗ್ಗೆ ಭೀತಿ ವ್ಯಕ್ತಪಡಿಸಿದ್ದರು.

ಪಂದ್ಯ ನಡೆಯುತ್ತಿದ್ದಾಗ ಓರ್ವ ಕುಡುಕ ಸೇರಿದಂತೆ ಜನರ ಒಂದು ಗುಂಪು ಸಲ್ಮಾನ್ ಅವರ ಬೈಕ್ ನಿಲ್ಲಿಸುವ ವಿಷಯದಲ್ಲಿ ಅವರ ಜೊತೆಗೆ ಜಗಳಕ್ಕೆ ಇಳಿಯಿತು. ಸ್ವಲ್ಪ ಹೊತ್ತಿನ ಬಳಿಕ ಆ ಗುಂಪು ಇನ್ನೂ ಹಲವರನ್ನು ಜೊತೆಗೆ ಕರೆದುಕೊಂಡು ಬಂದು ಸಲ್ಮಾನ್ ಎಂದು ಭಾವಿಸಿ ಸುಹೈಲ್ ಗೆ ಹಲ್ಲೆ ಮಾಡಿತು. ಆಗ ಸುಹೈಲ್ ಅವರ ರಕ್ಷಣೆಗೆ ಧಾವಿಸಿದ ಸಲ್ಮಾನ್ ರನ್ನು ಸುತ್ತುವರಿದ ಗುಂಪು ನಿರ್ದಯೆಯಿಂದ ಥಳಿಸಿತು.

ಆಗ ಅಲ್ಲಿದ್ದ ಕೆಲವು ವ್ಯಕ್ತಿಗಳು ‘‘ಮಾರೋ, ಮಾರೋ’’ ಎಂದು ಹೇಳುತ್ತಾ ಆಕ್ರಮಣಕಾರರನ್ನು ಹುರಿದುಂಬಿಸುತ್ತಿದ್ದರು ಎನ್ನುವುದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೊಗಳಿಂದ ತಿಳಿದು ಬರುತ್ತದೆ.

ದುಷ್ಕರ್ಮಿಗಳು ಥಳಿಸುವುದನ್ನು ನಿಲ್ಲಿಸಿದ ಬಳಿಕ, ಕೆಲವರು ಸಲ್ಮಾನ್ ರನ್ನು ಎತ್ತಿ ನೀರು ಕುಡಿಸಿದರು. ಅವರು ಆ್ಯಂಬುಲೆನ್ಸ್ ಗೆ ಕರೆ ಮಾಡಿದರು. ಆ್ಯಂಬುಲೆನ್ಸ್ ಅವರನ್ನು ಸ್ಥಳೀಯ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂಬುದಾಗಿ ಘೋಷಿಸಲಾಯಿತು.

ಅವರಿಗೆ ಬಿದಿರಿನ ಬಡಿಗೆಗಳು ಮತ್ತು ಬ್ಯಾಟ್ ಗಳಿಂದ ಬಡಿಯಲಾಗಿತ್ತು ಮತ್ತು ಚೂರಿಗಳಿಂದ ಇರಿಯಲಾಗಿತ್ತು ಎನ್ನುವುದು ಮರಣೋತ್ತರ ಪರೀಕ್ಷೆಯ ವರದಿಯಿಂದ ತಿಳಿದುಬರುತ್ತದೆ. ಚೂರಿಯು ಅವರ ಮೂತ್ರಪಿಂಡವನ್ನು ಘಾಸಿಗೊಳಿಸಿದೆ. ಅವರ ಸಾವಿನ ಮುಖ್ಯ ಕಾರಣಗಳ ಪೈಕಿ ಇದೂ ಒಂದಾಗಿದೆ.

ಆನಂದ್ ಗ್ರಾಮೀಣ ಪೊಲೀಸರು 11 ಮಂದಿಯನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News