111 ಔಷಧ ಮಾದರಿಗಳು ಪ್ರಮಾಣೀಕೃತ ಗುಣಮಟ್ಟ ಹೊಂದಿಲ್ಲ!

Update: 2024-12-28 15:59 GMT

ಸಾಂದರ್ಭಿಕ ಚಿತ್ರ | credit: Meta AI

ಹೊಸದಿಲ್ಲಿ: ನವೆಂಬರ್ ತಿಂಗಳಲ್ಲಿ ಕೇಂದ್ರೀಯ ಔಷಧ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಗಾಗಿರುವ 41 ಔಷಧ ಮಾದರಿಗಳು ಪ್ರಮಾಣೀಕೃತ ಗುಣಮಟ್ಟ ಹೊಂದಿಲ್ಲದಿರುವುದನ್ನು ಕೇಂದ್ರೀಯ ಔಷಧ ಪ್ರಮಾಣೀಕರಣ ನಿಯಂತ್ರಣ ಸಂಸ್ಥೆ(CDSCO)ಯು ಪತ್ತೆ ಹಚ್ಚಿದೆ.

ಇದಲ್ಲದೆ, ಇದೇ ಅವಧಿಯಲ್ಲಿ ರಾಜ್ಯ ಔಷಧ ಪರೀಕ್ಷಾ ಪ್ರಯೋಗಾಲಯಗಳು ಪರೀಕ್ಷೆ ಮಾಡಿರುವ 70 ಔಷಧ ಮಾದರಿಗಳನ್ನು ಪ್ರಮಾಣೀಕೃತ ಗುಣಮಟ್ಟ ಹೊಂದಿಲ್ಲದ ಔಷಧಗಳು ಎಂದು ವರ್ಗೀಕರಿಸಲಾಗಿದೆ.

ಒಂದು ಅಥವಾ ಅದಕ್ಕಿಂತ ಹೆಚ್ಚು ಮಾನದಂಡಗಳಲ್ಲಿ ವಿಫಲವಾಗುವ ಔಷಧ ಮಾದರಿಗಳನ್ನು ಪ್ರಮಾಣೀಕೃತ ಗುಣಮಟ್ಟ ಹೊಂದಿಲ್ಲದ ಔಷಧ ಎಂದು ವರ್ಗೀಕರಿಸಲಾಗುತ್ತದೆ. ಪರೀಕ್ಷೆಗೊಳಗಾಗಿರುವ ನಿರ್ದಿಷ್ಟ ಬ್ಯಾಚ್ ಗಳ ಔಷಧಗಳಲ್ಲಿ ಮಾತ್ರ ಈ ಅಂಶ ಪತ್ತೆಯಾಗಿದ್ದು, ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಔಷಧೋತ್ಪನ್ನಗಳಿಗೆ ಈ ಮಾನದಂಡ ಅನ್ವಯವಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಕಳೆದ ನವೆಂಬರ್ ತಿಂಗಳಲ್ಲಿ ಎರಡು ಔಷಧ ಮಾದರಿಗಳು ನಕಲಿ ಎಂದು ಪತ್ತೆಯಾಗಿತ್ತು. ಬಿಹಾರ ಔಷಧ ನಿಯಂತ್ರಣ ಪ್ರಾಧಿಕಾರ ಹಾಗೂ ಘಾಝಿಯಾಬಾದ್ ನ ಕೇಂದ್ರೀಯ ಔಷಧ ಪ್ರಮಾಣೀಕರಣ ನಿಯಂತ್ರಣ ಸಂಸ್ಥೆ ವಶಪಡಿಸಿಕೊಂಡಿದ್ದ ಈ ಔಷಧ ಮಾದರಿಗಳನ್ನು ಇತರ ಕಂಪನಿಗಳ ಹೆಸರಿನಲ್ಲಿ ಅನಧಿಕೃತ ಸಂಸ್ಥೆಗಳು ಉತ್ಪಾದಿಸಿರುವುದು ಬೆಳಕಿಗೆ ಬಂದಿತ್ತು.

ಸಾರ್ವಜನಿಕರ ಸುರಕ್ಷತೆಯನ್ನು ಖಾತರಿಪಡಿಸಲು ಪ್ರಮಾಣೀಕೃತ ಗುಣಮಟ್ಟ ಹೊಂದಿಲ್ಲದ ಹಾಗೂ ನಕಲಿ ಔಷಧಗಳನ್ನು ಮಾರುಕಟ್ಟೆಯಲ್ಲಿ ಗುರುತಿಸಲು ಹಾಗೂ ತೆಗೆದು ಹಾಕಲು ಕೇಂದ್ರೀಯ ಪ್ರಾಧಿಕಾರಗಳು ನಿಯಮಿತವಾಗಿ ರಾಜ್ಯ ನಿಯಂತ್ರಕರೊಂದಿಗೆ ಸೇರಿ ಕೆಲಸ ಮಾಡುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News