ಗುಜರಾತ್ | ಚಿನ್ನಾಭರಣ ಮಳಿಗೆಯ ಮೇಲೆ ಈಡಿ ಅಧಿಕಾರಿಗಳ ಸೋಗಿನಲ್ಲಿ ದಾಳಿ : 12 ಮಂದಿಯ ಬಂಧನ
ಭುಜ್ : ಗುಜರಾತ್ ನ ಗಾಂಧಿಧಾಮದಲ್ಲಿರುವ ಚಿನ್ನಾಭರಣ ಮಳಿಗೆಯೊಂದರ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಸೋಗಿನಲ್ಲಿ ಸಿನಿಮೀಯ ಶೈಲಿಯ ದಾಳಿ ನಡೆಸಿ, ಮಳಿಗೆಯಿಂದ 22.25 ಲಕ್ಷ ರೂ. ಮೌಲ್ಯದ ನಗದು ಮತ್ತು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗುರುವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆ ಡಿಸೆಂಬರ್ 2 ರಂದು ಚಿನ್ನಾಭರಣ ಮಳಿಗೆಯೊಂದರ ಆವರಣದಲ್ಲಿ ನಡೆದಿತ್ತು ಎಂದು ಪೂರ್ವ ಕುಛ್ ಪೊಲೀಸರು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
“ಅವರು ಈ ನಕಲಿ ದಾಳಿಯ ಸಂದರ್ಭದಲ್ಲಿ 22.25 ಲಕ್ಷ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ವ್ಯಾಪಾರಿಯು ಪೊಲೀಸರನ್ನು ಸಂಪರ್ಕಿಸಿದ ನಂತರ, ಆರೋಪಿಗಳನ್ನು ಪತ್ತೆ ಹಚ್ಚಲು ಹಲವು ತಂಡಗಳನ್ನು ರಚಿಸಲಾಗಿತ್ತು. ಕಾರ್ಯಾಚರಣೆಯ ಸಂದರ್ಭದಲ್ಲಿ ಭರತ್ ಮೊರ್ವಾಡಿಯ, ದೇವಾಯತ್ ಖಚ್ಚರ್, ಅಬ್ದುಲ್ ಸತ್ತಾರ್ ಮಂಜೋತಿ, ಹಿತೇಶ್ ಠಕ್ಕರ್, ವಿನೋದ್ ಚೂಡಾಸಮ, ಯೂಜೀನ್ ಡೇವಿಡ್, ಆಶಿಶ್ ಮಿಶ್ರೋ, ಚಂದ್ರರಾಜ್ ನಾಯರ್, ಅಜಯ್ ದುಬೆ, ಅಮಿತ್ ಮೆಹ್ತಾ, ಆತನ ಪತ್ನಿ ನಿಶಾ ಮೆಹ್ತಾ ಹಾಗೂ ಶಲೇಂದ್ರ ದೇಸಾಯಿ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.
“ಮೂರು ಕಾರುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದರೊಂದಿಗೆ, 22.27 ರೂ. ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ದಾಳಿಯ ಪಿತೂರಿಯಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ವಿನೋದ್ ಚಂದ್ರನನ್ನು ಇನ್ನೂ ಬಂಧಿಸಬೇಕಿದೆ. ರಾಧಿಕಾ ಜ್ಯೂಯೆಲರ್ಸ್ ಮೇಲೆ ಈ ಬಗೆಯ ದಾಳಿ ನಡೆಸುವ ಯೋಜನೆ ಗಾಂಧಿಧಾಮದ ನಿವಾಸಿ ಮೊರ್ವಾಡಿಯಾದಾಗಿತ್ತು. ಆರು ತಿಂಗಳ ಹಿಂದೆ ಈ ಚಿನ್ನಾಭರಣ ವ್ಯಾಪಾರಿಯ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ, ದೊಡ್ಡ ಮೊತ್ತದ ನಗದು ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿತ್ತು ಎಂದು ಆತ ತನ್ನ ಸಹಚರ ಕಚ್ಚರ್ ಗೆ ತಿಳಿಸಿದ್ದ” ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.
ರಾಧಿಕಾ ಜ್ಯೂಯೆಲರ್ಸ್ ನ ಮಾಲಕರು ಈಗಲೂ 100 ಕೋಟಿ ರೂ.ಮೊತ್ತದ ಆಸ್ತಿಯನ್ನು ಹೊಂದಿದ್ದಾರೆ ಎಂದು ಮೊರ್ವಾಡಿಯ ತನ್ನ ಸಹಚರ ಕಚ್ಚರ್ ಗೆ ತಿಳಿಸಿದ್ದ. ನಂತರ, ಅವರು ಈ ದಾಳಿ ಪಿತೂರಿಯಲ್ಲಿ ಮಂಜೋತಿ, ಹಿತೇಶ್ ಠಕ್ಕರ್ ಹಾಗೂ ವಿನೋದ್ ಚೂಡಾಸಮರನ್ನೂ ಸೇರ್ಪಡೆ ಮಾಡಿಕೊಂಡಿದ್ದರು ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
“ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಸೋಗಿನಲ್ಲಿ ದಾಳಿ ನಡೆಸುವ ಯೋಜನೆ ರೂಪಿಸಲು ಅವರೆಲ್ಲ 15 ದಿನಗಳ ಹಿಂದೆಯೆ ಆದಿಪುರ್ ಪಟ್ಟಣದ ಟೀ ಅಂಗಡಿಯೊಂದರಲ್ಲಿ ಭೇಟಿಯಾಗಿದ್ದರು. ಇದಾದ ನಂತರ, ಚೂಡಾಸಮ ಮಿಶ್ರನ ನೆರವು ಪಡೆದಿದ್ದ. ನಂತರ ಈ ಯೋಜನೆಗೆ ಅಹಮದಾಬಾದ್ ನಿವಾಸಿಗಳಾದ ನಾಯರ್, ಅಮಿತ್, ನಿಶಾ, ವಿಪಿನ್ ಶರ್ಮ ಹಾಗೂ ಅಹಮದಾಬಾದ್ ನಲ್ಲಿರುವ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಯಲ್ಲಿ ತರ್ಜುಮೆದಾರನಾಗಿ ಕಾರ್ಯನಿರ್ವಹಿಸುತ್ತಿರುವ ಶೈಲೇಂದ್ರ ದೇಸಾಯಿಯನ್ನು ಸೇರ್ಪಡೆ ಮಾಡಿಕೊಂಡರು” ಎಂದೂ ಹೇಳಲಾಗಿದೆ.
“ನಂತರ, ಅಂಕಿತ್ ತಿವಾರಿ ಎಂಬ ಹೆಸರಿನಲ್ಲಿ ದೇಸಾಯಿ ನಕಲಿ ಜಾರಿ ನಿರ್ದೇಶನಾಲಯದ ಅಧಿಕಾರಿಯ ಗುರುತಿನ ಚೀಟಿ ಸಿದ್ಧಪಡಿಸಿದ. ದೇಸಾಯಿ, ಮಿಶ್ರ, ನಾಯರ್, ದುಬೆ, ಅಮಿತ್ ಮೆಹ್ತಾ, ನಿಶಾ ಮೆಹ್ತಾ ಹಾಗೂ ವಿಪಿನ್ ಶರ್ಮರನ್ನು ಒಳಗೊಂಡಿದ್ದ ದಾಳಿ ತಂಡವು ಡಿಸೆಂಬರ್ 2ರಂದು ಚಿನ್ನಾಭರಣ ಮಳಿಗೆ ಹಾಗೂ ಅದರ ಮಾಲಕನ ನಿವಾಸದ ಮೇಲೆ ದಾಳಿ ನಡೆಸಿತ್ತು. ಈ ನಕಲಿ ದಾಳಿಯಲ್ಲಿ ನಿಶಾ ಮೆಹ್ತಾ 25.25 ಲಕ್ಷ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣಗಳನ್ನು ಲಪಟಾಯಿಸಿದ್ದ” ಎಂದೂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.