ಲೋಕಸಭೆಯಿಂದ ಇಂದು ಮತ್ತಿಬ್ಬರು ಸಂಸದರ ಅಮಾನತು
ಹೊಸದಿಲ್ಲಿ: ಅಶಿಸ್ತಿನ ನಡವಳಿಕೆ ತೋರಿದ್ದಕ್ಕಾಗಿ ಇಂದು ಲೋಕಸಭೆಯಿಂದ ಇನ್ನೂ ಇಬ್ಬರು ವಿಪಕ್ಷ ಸಂಸದರು ಅಮಾನತುಗೊಂಡಿದ್ದು ಇದರೊಂದಿಗೆ ಇಲ್ಲಿಯ ತನಕ ಅಮಾನತುಗೊಂಡ ವಿಪಕ್ಷ ಸಂಸದರ ಸಂಖ್ಯೆ 143ಕ್ಕೆ ಏರಿಕೆಯಾಗಿದೆ. ಇದು ಲೋಕಸಭೆಯ ಇತಿಹಾಸದಲ್ಲಿಯೇ ಅಭೂತಪೂರ್ವ ಅಮಾನತು ಕ್ರಮವಾಗಿದೆ. ಕಳೆದ ವಾರದ ಸಂಸತ್ ಭದ್ರತಾ ವೈಫಲ್ಯ ಕುರಿತಂತೆ ಚರ್ಚೆಗೆ ಹಾಗೂ ಗೃಹ ಸಚಿವರ ಹೇಳಿಕೆಗೆ ವಿಪಕ್ಷ ಸಂಸದರು ಆಗ್ರಹಿಸಿದ ನಂತರದ ಬೆಳವಣಿಗೆಯಾಗಿದೆ. ಅಮಾನತುಗೊಂಡ ಒಟ್ಟು 143 ಸಂಸದರ ಪೈಕಿ 97 ಮಂದಿ ಲೋಕಸಭಾ ಸಂಸದರಾಗಿದ್ದಾರೆ.
ಇಂದು ಲೋಕಸಭೆಯ ಸ್ಪೀಕರ್ ಅವರು ಅಮಾನತುಗೊಳಿಸಿದ ಸಂಸದರು, ಕೇರಳ ಕಾಂಗ್ರೆಸ್ (ಮಣಿ) ಸಂಸದರ ಥಾಮಸ್ ಚಝಿಕಡನ್ ಮತ್ತು ಸಿಪಿಐ(ಎಂ) ನ ಎ ಎಂ ಆರಿಫ್. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಮಂಡಿಸಿದ ನಿರ್ಣಯವನ್ನು ಸದನ ಅಂಗೀಕರಿಸಿದ ನಂತರ ಇಬ್ಬರು ಸದಸ್ಯರು ಅಧಿವೇಶನದ ಉಳಿದ ಸಮಯದ ತನಕ ಅಮಾನತುಗೊಂಡಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನ ಮುಕ್ತಾಯಗೊಳ್ಳಲು ಇನ್ನು ಎರಡು ದಿನ ಬಾಕಿ ಇದ್ದು, ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗಿಂತ ಮುಂಚಿನ ಕೊನೆಯ ಪೂರ್ಣಾವಧಿ ಅಧಿವೇಶನ ಇದಾಗಿದೆ.