ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಚಾಲನೆ ನೀಡಿದ ಕಾರ್ಯಕ್ರಮಕ್ಕೆ 2.6 ಕೋಟಿ ಖರ್ಚು
ಈ ಬಗ್ಗೆ ಮಾಹಿತಿ ಕೋರಿ ಆರ್ ಟಿಐ ಕಾರ್ಯಕರ್ತ ಅಜಯ್ ಬೋಸ್ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಈ ಮಾಹಿತಿಗೆ ಸಿಕ್ಕ ಉತ್ತರದ ಪ್ರಕಾರ ಚೆನ್ನೈಯಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ರೈಲ್ವೆಯು 1,14,42,108 ರೂಪಾಯಿ ಖರ್ಚು ಮಾಡಿದ್ದು, ಇದರಲ್ಲಿ 1,05,03,624 ರೂಪಾಯಿಗಳನ್ನು ಎವೋಕ್ ಮೀಡಿಯಾ ಎಂಬ ಇವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಗೆ ಪಾವತಿಸಲಾಗಿತ್ತು.
ಚೆನ್ನೈ: ತಿರುವಂತಪುರಂ ಮತ್ತು ಚೆನ್ನೈಯಲ್ಲಿ ವಂದೇಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ ಕಾರ್ಯಕ್ರಮಗಳಿಗೆ ಭಾರತೀಯ ರೈಲ್ವೆಯು 2.6 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎನ್ನುವ ಮಾಹಿತಿ ಆರ್ ಟಿಐ ಉತ್ತರದಿಂದ ಬಹಿರಂಗಗೊಂಡಿದೆ.
ಎಪ್ರಿಲ್ 8ರಂದು ಚೆನ್ನೈ–ಕೊಯಮತ್ತೂರು ಮತ್ತು ಎಪ್ರಿಲ್ 25ರಂದು ತಿರುವನಂತಪುರಂ–ಕಾಸರಗೋಡು ನಡುವೆ ಸಂಚರಿಸುವ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ ಕಾರ್ಯಕ್ರಮಗಳಿಗೆ ದಕ್ಷಿಣ ರೈಲ್ವೆಯು ಒಟ್ಟು 2,62,60,367 ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಆರ್ ಟಿಐ ಉತ್ತರ ತಿಳಿಸಿದೆ.
ಈ ಬಗ್ಗೆ ಮಾಹಿತಿ ಕೋರಿ ಆರ್ ಟಿಐ ಕಾರ್ಯಕರ್ತ ಅಜಯ್ ಬೋಸ್ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಈ ಮಾಹಿತಿಗೆ ಸಿಕ್ಕ ಉತ್ತರದ ಪ್ರಕಾರ ಚೆನ್ನೈಯಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ರೈಲ್ವೆಯು 1,14,42,108 ರೂಪಾಯಿ ಖರ್ಚು ಮಾಡಿದ್ದು, ಇದರಲ್ಲಿ 1,05,03,624 ರೂಪಾಯಿಗಳನ್ನು ಎವೋಕ್ ಮೀಡಿಯಾ ಎಂಬ ಇವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಗೆ ಪಾವತಿಸಲಾಗಿತ್ತು.
ತಿರುವನಂತಪುರಂ-ಕಾಸರಗೋಡು ವಂದೇ ಭಾರತ್ ರೈಲಿಗೆ ಪ್ರಧಾನಿ ಚಾಲನೆ ನೀಡಿದ ಕಾರ್ಯಕ್ರಮವನ್ನು ನಿರ್ವಹಿಸಲು ದಕ್ಷಿಣ ರೈಲ್ವೆಯ ತಿರುವನಂತಪುರಂ ವಿಭಾಗವು ಮೈತ್ರಿ ಅಡ್ವರ್ಟೈಸಿಂಗ್ ವರ್ಕ್ಸ್ ಲಿಮಿಟೆಡ್ ಎಂಬ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಗೆ 1,48,18, 259 ರೂಪಾಯಿ ಪಾವತಿಸಿತ್ತು ಎನ್ನುವುದು ಆರ್ ಟಿಐ ಉತ್ತರದಿಂದ ಬಹಿರಂಗಗೊಂಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಜಯ್ ಬೋಸ್, "ಈ ಕಾರ್ಯಕ್ರಮಗಳಿಗೆ ಸಾಕಷ್ಟು ಹಣ ಖರ್ಚು ಮಾಡಲಾಗಿದೆ. ಈ ಹಣವನ್ನು ಸುರಕ್ಷತಾ ಕ್ರಮಗಳಿಗಾಗಿ ಬಳಸಬಹುದಿತ್ತು. ರೈಲ್ವೆ ತನ್ನದೇ ಆದ ಸಾರ್ವಜನಿಕ ಸಂಪರ್ಕ ವಿಭಾಗಗಳನ್ನು ಹೊಂದಿರುವಾಗ ಹೊರಗಿನ ಏಜೆನ್ಸಿಗಳನ್ನು ನೇಮಿಸಿಕೊಳ್ಳಲಾಗಿದೆ" ಎಂದು ಹೇಳಿದ್ದಾರೆ.