70 ಕಿ.ಮೀ. ಎತ್ತರದಿಂದ ಸೆರೆ ಹಿಡಿದ ಚಂದ್ರನ ಚಿತ್ರಗಳನ್ನು ಬಿಡುಗಡೆ ಮಾಡಿದ ಇಸ್ರೋ
ಬೆಂಗಳೂರು: ಚಂದ್ರಯಾನ-3 ಅಭಿಯಾನದ ಲ್ಯಾಂಡರ್ ಪೊಜಿಷನ್ ಡಿಟೆಕ್ಷನ್ ಕ್ಯಾಮೆರಾ (ಎಲ್‌ಪಿಡಿಸಿ) ಆ.19ರಂದು ಸುಮಾರು 70 ಕಿ.ಮೀ.ಎತ್ತರದಿಂದ ಸೆರೆ ಹಿಡಿದಿದ್ದ ಚಂದ್ರನ ಚಿತ್ರಗಳನ್ನು ಇಸ್ರೋ ಮಂಗಳವಾರ ಬಿಡುಗಡೆಗೊಳಿಸಿದೆ.
ನಿಗದಿಯಾಗಿರುವಂತೆ ಅಭಿಯಾನದ ಲ್ಯಾಂಡರ್ ಮಾಡ್ಯೂಲ್ ಬುಧವಾರ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಲಿದೆ. ಲ್ಯಾಂಡರ್ ತನ್ನಲ್ಲಿ ಅಳವಡಿಸಲಾಗಿರುವ ಮೂನ್ ರೆಫರೆನ್ಸ್ ಮ್ಯಾಪ್‌ನೊಂದಿಗೆ ತಾಳೆ ಹಾಕುವ ಮೂಲಕ ತನ್ನ ಸ್ಥಾನ (ಅಕ್ಷಾಂಶ ಮತ್ತು ರೇಖಾಂಶ)ವನ್ನು ನಿರ್ಧರಿಸಲು ಈ ಚಿತ್ರಗಳು ನೆರವಾಗುತ್ತವೆ ಎಂದು ಇಸ್ರೋ ತಿಳಿಸಿದೆ.
ಲ್ಯಾಂಡರ್ ಹಝಾರ್ಡ್ ಡಿಟೆಕ್ಷನ್ ಆ್ಯಂಡ್ ಅವಾಯ್ಡನ್ಸ್ ಕ್ಯಾಮೆರಾ (ಎಲ್‌ಎಚ್‌ಡಿಎಸಿ) ಸೆರೆಹಿಡಿದಿದ್ದ ಚಂದ್ರನ ದೂರದ ಪ್ರದೇಶದ ಚಿತ್ರಗಳನ್ನು ಇಸ್ರೋ ಸೋಮವಾರ ಬಿಡುಗಡೆಗೊಳಿಸಿತ್ತು.
ಲ್ಯಾಂಡರ್ ಇಳಿಯಲು ಬಂಡೆಗಳು ಅಥವಾ ಆಳವಾದ ಕಂದಕಗಳಿಲ್ಲದ ಸುರಕ್ಷಿತ ಪ್ರದೇಶವನ್ನು ಪತ್ತೆ ಹಚ್ಚಲು ನೆರವಾಗುವ ಈ ಕ್ಯಾಮೆರಾವನ್ನು ಇಸ್ರೋದ ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಾಗಿರುವ ಅಹ್ಮದಾಬಾದ್ ಮೂಲದ ಸ್ಪೇಸ್ ಅಪ್ಲಿಕೇಷನ್ಸ್ ಸೆಂಟರ್ (ಎಸ್‌ಎಸಿ) ಅಭಿವೃದ್ಧಿಗೊಳಿಸಿದೆ.
ಇಸ್ರೋದ ಪ್ರಕಾರ ಚಂದ್ರಯಾನ-3ರ ಅಭಿಯಾನದ ಗುರಿಗಳನ್ನು ಸಾಧಿಸಲು ಎಲ್‌ಎಚ್‌ಡಿಎಸಿಯಂತಹ ಹಲವಾರು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಲ್ಯಾಂಡರ್‌ನಲ್ಲಿ ಅಳವಡಿಸಲಾಗಿದೆ.
ಜು.14ರಂದು ಉಡಾವಣೆಗೊಂಡ ಚಂದ್ರಯಾನ-3 ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಇಳಿಯುವಿಕೆ ಮತ್ತು ಪರ್ಯಟನ ಸಾಮರ್ಥ್ಯವನ್ನು ಸಾಬೀತುಗೊಳಿಸಲು ಚಂದ್ರಯಾನ-2ರ ಅನುಸರಣಾ ಅಭಿಯಾನವಾಗಿದೆ.