ವರ್ಷಕ್ಕೆ 78.5 ಲಕ್ಷ ಉದ್ಯೋಗ ಸೃಷ್ಟಿ ಅಗತ್ಯ: ಖಾಸಗಿ ಸಹಕಾರಕ್ಕೆ ಮನವಿ

Update: 2024-07-23 04:01 GMT

ಸಾಂದರ್ಭಿಕ ಚಿತ್ರ PC: freepik 

ಹೊಸದಿಲ್ಲಿ: ದೇಶದಲ್ಲಿ ಹೆಚ್ಚುತ್ತಿರುವ ಶ್ರಮ ಶಕ್ತಿಗೆ ಅನುಗುಣವಾಗಿ ಉದ್ಯೋಗಾವಕಾಶ ಹೆಚ್ಚಿಸಬೇಕಾದರೆ ವಾರ್ಷಿಕ 78.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಖಾಸಗಿ ಕ್ಷೇತ್ರ ಸಹಕರಿಸಬೇಕು ಎಂದು ಆರ್ಥಿಕ ಸಮೀಕ್ಷೆ ಆಗ್ರಹಿಸಿದೆ.

ದೇಶದಲ್ಲಿ 2030ರ ವರೆಗೂ ಪ್ರತಿ ವರ್ಷ 78.5 ಲಕ್ಷ ಉದ್ಯೋಗಗಳನ್ನು ಕೃಷಿಯೇತರ ವಲಯಗಳಲ್ಲಿ ಸೃಷ್ಟಿಸುವ ಅಗತ್ಯವಿದೆ ಎಂದು ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ.

ಇದಕ್ಕಾಗಿ ಕಳೆದ ಐದು ವರ್ಷಗಳಲ್ಲಿ 60 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದ ಉತ್ಪಾದನಾ ಸಂಬಂಧಿ ಉತ್ತೇಜಕ ಯೋಜನೆಗಳು, ವಾರ್ಷಿಕ 20 ಲಕ್ಷ ಉದ್ಯೋಗ ಸೃಷ್ಟಿಸುತ್ತಿರುವ ಮಿತ್ರಾ ಜವಳಿ ಯೋಜನೆ ಹಾಗೂ ಮುದ್ರಾದಂತಹ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡುವುದು ಅಗತ್ಯ ಎಂದು ವರದಿ ಪ್ರತಿಪಾದಿಸಿದೆ.

ಅಭಿವೃದ್ಧಿ ಅಗತ್ಯತೆಗಳಿಗೆ ಅನುಗುಣವಾಗಿ ಸರ್ಕಾರ ಖಾಸಗಿ ರಂಗದ ಮೇಲಿನ ಹೊಣೆಗಾರಿಕೆ ಹೊರೆಯನ್ನು ಕಡಿಮೆ ಮಾಡಿ, ಭೂಮಿ ಖರೀದಿಯ ಕಾನೂನುಗಳನ್ನು ಸುಧಾರಿಸುವ ಅಗತ್ಯವಿದೆ. ಲಾಭದ ಪ್ರಮಾಣ ಕಳೆದ 15 ವರ್ಷಗಳಲ್ಲೇ ಗರಿಷ್ಠ ಮಟ್ಟವನ್ನು ತಲುಪಿದ್ದರೂ, ಖಾಸಗಿ ಹಾಗೂ ಕಾರ್ಪೊರೇಟ್ ಜಗತ್ತಿನಲ್ಲಿ ಉದ್ಯೋಗ ಸೃಷ್ಟಿ ಸ್ಥಿತಿಗತಿ ಸದ್ಯಕ್ಕೆ ಉತ್ತಮವಾಗಿಲ್ಲ ಎಂದು ವಿಶ್ಲೇಷಿಸಿದೆ.

ವ್ಯವಹಾರ ಕ್ಷೇತ್ರದಲ್ಲಿ ಬಂಡವಾಳ ಮರು ನಿಯೋಜನೆ ಮತ್ತು ಉದ್ಯೋಗಿಗಳ ನಿಯೋಜನೆ ನಡುವೆ ಸಮತೋಲನ ಸಾಧಿಸುವ ಅಗತ್ಯವಿದೆ. ಬಂಡವಾಳ ಮತ್ತು ಕಾರ್ಮಿಕರ ಆದಾಯವನ್ನು ನ್ಯಾಯಸಮ್ಮತ ರೀತಿಯಲ್ಲಿ ಹಂಚಿಕೆ ಮಾಡುವುದು ಅಗತ್ಯ ಎಂದು ಸಮೀಕ್ಷಾ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News