ಬೇರ್ಪಟ್ಟಿದ್ದ ಮರಿ ಆನೆಯ ರಕ್ಷಣಾ ಕಾರ್ಯಾಚರಣೆ ಬಳಿಕ, ತಾಯಿಯೊಂದಿಗೆ ನಿದ್ದೆ ಮಾಡುತ್ತಿರುವ ಹೃದಯಸ್ಪರ್ಶಿ ಫೋಟೋ ವೈರಲ್
ಕೊಯಂಬತ್ತೂರು: ಅರಣ್ಯ ಸಿಬ್ಬಂದಿ ರಕ್ಷಿಸಿದ ಮರಿ ಆನೆಯೊಂದು ತನ್ನ ತಾಯಿಯ ಪಕ್ಕದಲ್ಲಿ ಮಲಗಿರುವ ಹೃದಯಸ್ಪರ್ಶಿ ಫೋಟೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ.
ತಮಿಳುನಾಡು ಸರ್ಕಾರದ ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ಸುಪ್ರಿಯಾ ಸಾಹು ಅವರು ಮಂಗಳವಾರ ಸಂಜೆ ಸಾಮಾಜಿಕ ಮಾಧ್ಯಮ ʼxʼನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಆನಮಲೈ ಹುಲಿ ಸಂರಕ್ಷಿತ ಪ್ರದೇಶವು ತಮಿಳುನಾಡಿನ ಕೊಯಂಬತ್ತೂರು ಮತ್ತು ಪೊಲ್ಲಾಚಿ ಜಿಲ್ಲೆಗಳಲ್ಲಿದೆ.
ಶನಿವಾರ ಡಿಸೆಂಬರ್ 30 ಮರಿ ಆನೆ ತನ್ನ ತಾಯಿಯಿಂದ ಬೇರ್ಪಟ್ಟ ಬಳಿಕ ಹುಡುಕುತ್ತಿರುವುದನ್ನು ಅರಣ್ಯಾಧಿಕಾರಿಗಳು ಗಮನಿಸಿದ್ದಾರೆ. ಬಳಿಕ ರಕ್ಷಣಾ ಕಾರ್ಯಾಚರಣೆ ಕೈಗೊಂಡು ಮರಿಯಾನೆಯನ್ನು ರಕ್ಷಿಸಿದ್ದಾರೆ ಎಂದು ಸುಪ್ರಿಯಾ ಸಾಹು ತಿಳಿಸಿದ್ದಾರೆ.
"ಡ್ರೋನ್‌ಗಳ ಸಹಾಯದಿಂದ ಮತ್ತು ಅನುಭವಿ ಅರಣ್ಯ ವೀಕ್ಷಕರ ನೆರವಿನಿಂದ, ಆನೆ ಹಿಂಡನ್ನು ಪತ್ತೆ ಮಾಡಲಾಯಿತು. ಮರಿಯಾನೆಯನ್ನು ಸುರಕ್ಷಿತವಾಗಿ ತಾಯಿಯೊಂದಿಗೆ ಮತ್ತೆ ಸೇರಿಸಲಾಯಿತು" ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಮರಿ ಆನೆಯ ವಯಸ್ಸು ನಾಲ್ಕೈದು ತಿಂಗಳುಗಳಾಗಿರಬಹುದು. ಬೇರ್ಪಟ್ಟಿದ್ದ ಮರಿಯಾನೆಯನ್ನು ರಕ್ಷಿಸಿದ ಸಿಬ್ಬಂದಿಗಳು ಅದನ್ನು ಚೆನ್ನಾಗಿ ತೊಳೆದು, ಮಾನವ ಸ್ಪರ್ಷದ ಕುರುಹು ಮರೆಮಾಚಲು ಕೆಸರಿನ ಮಣ್ಣನ್ನು ಅದರ ಮೇಲೆ ಮೆತ್ತಿ, ಆನೆಯ ಹಿಂಡಿನ ಹತ್ತಿರಕ್ಕೆ ಕೊಂಡೊಯ್ದು ಮರಿಯನ್ನು ಬಿಟ್ಟರು” ಎಂದು ಆನಮಲೈ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮರಿ ಆನೆಯನ್ನು ತಾಯಿ ಜೊತೆ ಸೇರಿಸಿದ ನಂತರ ಅದು, ತಾಯಿ ಆನೆಯ ಸೊಂಡಿಲಿನ ಬಳಿ ಮಲಗಿರುವ ಚಿತ್ರ ಹೃದಯ ತಟ್ಟುತ್ತಿದೆ.
2017 ರಲ್ಲಿ ನಡೆದ ಆನೆ ಗಣತಿಯು ಭಾರತದಲ್ಲಿ 29,964 ಆನೆಗಳಿವೆ ಎಂದು ಹೇಳಿದೆ. ಭಾರತದ ವನ್ಯಜೀವಿ ಸಂರಕ್ಷಣಾ ಕಾನೂನಿನ ಅಡಿಯಲ್ಲಿ, ಆನೆಗಳು ಶೆಡ್ಯೂಲ್ 1 ರಲ್ಲಿ ಬರುವ ಪ್ರಾಣಿಗಳಾಗಿವೆ. ಹಾಗಾಗಿ ಅವುಗಳಿಗೆ ಹೆಚ್ಚಿನ ಮಟ್ಟದ ಕಾನೂನು ರಕ್ಷಣೆಯೂ ಇದೆ.
ವನ್ಯಜೀವಿ ಕಾರ್ಯಾಚರಣೆಯ ಸೂಕ್ಷ್ಮತೆ :
ವನ್ಯಜೀವಿ ರಕ್ಷಣಾ ಕಾರ್ಯಚರಣೆ ಬಹುಸೂಕ್ಷ್ಮ ಕಾರ್ಯಾಚರಣೆಯಾಗಿದ್ದು, ಪ್ರಾಣಿಗಳನ್ನು ಅದರಲ್ಲೂ ಮರಿಗಳನ್ನು ಕಾರ್ಯಚರಣೆ ಸಂದರ್ಭ ಮಾನವ ಸ್ಪರ್ಷದ ಗುರತು – ವಾಸನೆಗಳು ತಿಳಿದರೆ, ಉಳಿದ ಪ್ರಾಣಿಗಳು ಅವುಗಳನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ. ಆ ಪ್ರಾಣಿಗಳು ತಾಯಿ – ಮರಿ ಗಳಾದರೂ ಸರಿ, ದೂರ ಮಾಡುತ್ತವೆ. ಈ ಕಾರಣದಿಂದ ಮರಿಗಳು ಸಾಯುವ ಸ್ಥಿತಿ ನಿರ್ಮಾಣವಾಗುವುದು ಇದೆ.
ಪೂರಕ ಮಾಹಿತಿ thewire.in