ವಿಮಾನಯಾನ ಕ್ಷೇತ್ರಕ್ಕೆ ಹೊಸ ಸವಾಲು; ವಂದೇ ಭಾರತ್ ಸ್ಲೀಪರ್ ರೈಲು

Update: 2023-10-13 02:31 GMT

ಹೊಸದಿಲ್ಲಿ: ಮುಂದಿನ ವರ್ಷದ ಆರಂಭಕ್ಕೆ ಭಾರತದಲ್ಲಿ ಧೀರ್ಘದೂರದ ಪ್ರಯಾಣಕ್ಕೆ ವಿಶ್ವದರ್ಜೆಯ ರೈಲುಸೇವೆ ಲಭ್ಯವಾಗಲಿದೆ. ವಂದೇ ಭಾರತ್ ಆರಂಭಿಸಿದ ಐದನೇ ವರ್ಷಾಚರಣೆ ಸಮೀಪಿಸುತ್ತಿದ್ದಂತೆ, ಭಾರತೀಯ ರೈಲ್ವೆ, ಅತ್ಯಾಧುನಿಕ ರೈಲಿನ ಸ್ಲೀಪರ್ ಅವತರಣಿಕೆ ಬಿಡುಗಡೆಗೆ ಸಜ್ಜಾಗುತ್ತಿದೆ. ಇದು ಈ ಇಂಟರ್ ಸಿಟಿ ರೈಲುಗಳಲ್ಲಿ ಅತ್ಯಾಧುನಿಕ ಐಷಾರಾಮಿ ಅಂಶಗಳನ್ನು ಹೊಂದಿರುತ್ತದೆ. ಈ ಸ್ಲೀಪರ್ ರೈಲುಗಳು ಭಾರತದ ಅತಿ ವೇಗದ ರೈಲುಗಳಾಗಲಿದ್ದು, ಗರಿಷ್ಠ 200 ಕಿಲೋಮೀಟರ್ ವೇಗದಲ್ಲಿ ಸಂಚರಿಸಲಿವೆ.

ದೆಹಲಿ- ವಾರಣಾಸಿ ನಡುವೆ 2019ರಲ್ಲಿ ಮೊದಲ ಬಾರಿಗೆ ವಂದೇ ಭಾರತ್ ರೈಲುಸೇವೆ ಆರಂಭಿಸಿದ ಬಳಿಕ, ಈ ರೈಲುಗಳು ಸುಧಾರಿಸುತ್ತಲೇ ಇವೆ. ಪ್ರಸ್ತುತ 34 ಜೋಡಿ ಹವಾನಿಯಂತ್ರಿತ ರೈಲುಗಳು ಚೇರ್ ಕಾರ್ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ಆಸನ ಸೌಲಭ್ಯದೊಂದಿಗೆ ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿವೆ ಎಂದು ರೈಲ್ವೆ ಸಚಿವಾಲಯ ಹೇಳಿದೆ.

ಹಾಲಿ ಇರುವ ರಾಜಧಾನಿ ಎಕ್ಸ್ಪ್ರೆಸ್ ರೈಲುಗಳ ಬದಲು ಸ್ಲೀಪರ್ ಸೌಲಭ್ಯ ಹೊಂದಿದ ವಂದೇ ಭಾರತ್ ರೈಲುಗಳು ಕಾರ್ಯಾಚರಣೆಗೆ ಇಳಿಯಲಿವೆ. ಹಳಿಗಳ ಮೂಲ ಸೌಕರ್ಯ ಮೇಲ್ದರ್ಜೆಗೆ ಏರಿದ ಬಳಿಕ ಇವು ಕಾರ್ಯಾರಂಭ ಮಾಡಲಿವೆ. ಈಗಾಗಲೇ ದೆಹಲಿ- ಮುಂಬೈ ಹಾಗೂ ದೆಹಲಿ-ಹೌರಾ ಮಾರ್ಗಗಳನ್ನು ಗಂಟೆಗೆ 160 ಕಿಲೋಮೀಟರ್ ವೇಗಕ್ಕೆ ಅನುವಾಗುವಂತೆ ಸುಧಾರಿಸಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಹೊಸ ವಂದೇಭಾರತ್ ರೈಲುಗಳು ಸದ್ಯವೇ ಕಾರ್ಯಾರಂಭ ಮಾಡಲಿವೆ. ಪ್ರತಿ ರೈಲಿನಲ್ಲಿ 16 ಬೋಗಿಗಳ ಬದಲಾಗಿ ಕೇವಲ ಎಂಟು ಬೋಗಿಗಳು ಮಾತ್ರ ಇರುತ್ತವೆ. ಇದೀಗ ಇಂಥ ಆರು ಅಥವಾ ಏಳು ಹೊಸ ರೈಲುಗಳನ್ನು ಪ್ರತಿ ತಿಂಗಳು ಸಿದ್ಧಪಡಿಸಲಾಗುತ್ತಿದೆ. ಇವುಗಳ ದರ ಎಕ್ಸ್ಪ್ರೆಸ್ ರೈಲಿಗಿಂತ ಅಧಿಕ ಇದ್ದರೂ, ಕೆಲ ಮಾರ್ಗಗಳನ್ನು ಹೊರತುಪಡಿಸಿ, ಉಳಿದೆಡೆ ಭರ್ತಿ ದರ ಶೇಕಡ 100ರಷ್ಟು ಇದೆ ಎಂದು ಸಚಿವಾಲಯದ ಅಧಿಕಾರಿಗಳು ವಿವರಿಸಿದ್ದಾರೆ.

ಸ್ಲೀಪರ್ ವಂದೇಭಾರತ್ ರೈಲುಗಳು 16 ಬೋಗಿಗಳನ್ನು ಹೊಂದಿರುತ್ತವೆ. ಕನಿಷ್ಠ ಒಂದು ಎಸಿ1 ಬೋಗಿಗಳಿದ್ದು, ಉಳಿದಂತೆ ಎಸಿ2 ಹಾಗೂ ಎಸಿ3 ಬೋಗಿಗಳನ್ನು ಹೊಂದಿರುತ್ತವೆ. ಮೊದಲ ಅವತರಣಿಕೆಯಲ್ಲಿ 857 ಬರ್ತ್ ಗಳು ಇರುತ್ತವೆ. ಈ ಪೈಕಿ 823 ಪ್ರಯಾಣಿಕರಿಗೆ ಹಾಗೂ ಉಳಿದವು ಸಿಬ್ಬಂದಿಗೆ ಇರಲಿವೆ. ಪ್ರತಿ ಬೋಗಿಯಲ್ಲಿ ನಾಲ್ಕರ ಬದಲಾಗಿ ಮೂರು ಶೌಚಾಯಗಳು ಇರುತ್ತವೆ ಹಾಗೂ ಮಿನಿ ಪ್ಯಾಂಟ್ರಿ ಹೊಂದಿರುತ್ತವೆ ಎಂದು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News