ಏರ್ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರಿಗೆ ವಿಮಾನದೊಳಗೆ ಸಹ ಪ್ರಯಾಣಿಕನಿಂದ ಕಪಾಳಮೋಕ್ಷ, ನಿಂದನೆ
ಹೊಸದಿಲ್ಲಿ: ಸಿಡ್ನಿ-ದಿಲ್ಲಿ ವಿಮಾನದಲ್ಲಿ ಜುಲೈ 9 ರಂದು ಪ್ರಯಾಣಿಕನೊಬ್ಬ ಏರ್ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರಿಗೆ ನಿಂದಿಸಿ ದೌರ್ಜನ್ಯ ಎಸಗಿರುವ ಘಟನೆ ವರದಿಯಾಗಿದೆ. ಇದರೊಂದಿಗೆ ಇತ್ತೀಚೆಗಿನ ದಿನಗಳಲ್ಲಿ ವಿಮಾನದೊಳಗೆ ಅಶಿಸ್ತಿನ ವರ್ತನೆ ಮುಂದುವರಿದಿದೆ.
ತನ್ನ ಸೀಟು ಸರಿಯಿಲ್ಲದ ಕಾರಣ ಏರ್ ಇಂಡಿಯಾ ಅಧಿಕಾರಿ ಬಿಸಿನೆಸ್ ಕ್ಲಾಸ್ ಸೀಟಿನಿಂದ ಎಕಾನಮಿ ಕ್ಲಾಸ್ ಸೀಟಿಗೆ ತೆರಳಬೇಕಾದಾಗ ಆರೋಪಿಗೆ ಮೃದುವಾಗಿ ಮಾತನಾಡಲು ವಿನಂತಿಸಿದಾಗ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಏರ್ ಇಂಡಿಯಾ ಅಧಿಕಾರಿಗೆ ಎಕಾನಮಿ ಕ್ಲಾಸ್ ನಲ್ಲಿ 30-ಸಿ ಸೀಟು ನೀಡಲಾಗಿತ್ತು. ಇತರ ಪ್ರಯಾಣಿಕರು ಇದ್ದ ಕಾರಣ, ಅವರು 25 ನೇ ಸಾಲಿನಲ್ಲಿ ಕುಳಿತುಕೊಳ್ಳಲು ಆಯ್ಕೆ ಮಾಡಿಕೊಂಡರು ಎಂದು ಮೂಲಗಳು ತಿಳಿಸಿವೆ.
"ಅಧಿಕಾರಿಯು ತನ್ನ ಸಹ-ಪ್ರಯಾಣಿಕನನ್ನು ಮೃದುವಾಗಿ ಮಾತನಾಡಲು ವಿನಂತಿಸಿದರು. ಆದರೆ ಆತ ಅಧಿಕಾರಿಗೆ ಕಪಾಳಮೋಕ್ಷ ಮಾಡಿದನು, ಹಲ್ಲೆ ನಡೆಸಿ ನಿಂದಿಸಿದನು" ಎಂದು ಮೂಲಗಳು ತಿಳಿಸಿವೆ.
ಐವರು ಕ್ಯಾಬಿನ್ ಸಿಬ್ಬಂದಿಗಳು ರೌಡಿ ಪ್ರಯಾಣಿಕನನ್ನು ನಿಯಂತ್ರಿಸಲು ವಿಫಲವಾದಾಗ ಅಧಿಕಾರಿ ಹಿಂದಿನ ಸೀಟುಗಳಿಗೆ ಧಾವಿಸಿದರು ಎಂದು ಮೂಲಗಳು ತಿಳಿಸಿವೆ.
ಕ್ಯಾಬಿನ್ ಮೇಲ್ವಿಚಾರಕರನ್ನು ಕರೆಸಲಾಗಿದ್ದು, ಪ್ರಯಾಣಿಕನಿಗೆ "ಮೌಖಿಕ ಮತ್ತು ಲಿಖಿತ ಎಚ್ಚರಿಕೆಯನ್ನು ನೀಡಲಾಗಿದೆ" ಎಂದು ಮೂಲಗಳು ತಿಳಿಸಿವೆ, ದೈಹಿಕ ಹಲ್ಲೆಯ ಹೊರತಾಗಿಯೂ, ಅಶಿಸ್ತಿನ ಪ್ರಯಾಣಿಕನನ್ನು ನಿಯಂತ್ರಿಸಲು ಸಿಬ್ಬಂದಿ ಯಾವುದೇ ನಿಗ್ರಹ ಸಾಧನಗಳನ್ನು ಬಳಸಲಿಲ್ಲ ಎಂದು ವರದಿಯಾಗಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಏರ್ ಇಂಡಿಯಾ "ಜುಲೈ 9, 2023 ರಂದು ಸಿಡ್ನಿ-ದಿಲ್ಲಿಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ AI-301 ವಿಮಾನದಲ್ಲಿದ್ದ ಪ್ರಯಾಣಿಕ ಮೌಖಿಕ ಮತ್ತು ಲಿಖಿತ ಎಚ್ಚರಿಕೆಗಳ ಹೊರತಾಗಿಯೂ ವಿಮಾನದ ಸಮಯದಲ್ಲಿ ಸ್ವೀಕಾರಾರ್ಹವಲ್ಲದ ರೀತಿಯಲ್ಲಿ ವರ್ತಿಸಿದ್ದ , ಇದರಿಂದಾಗಿ ಇತರ ಪ್ರಯಾಣಿಕರು, ನಮ್ಮ ಉದ್ಯೋಗಿಯೊಬ್ಬರಿಗೂ ತೊಂದರೆಯಾಯಿತು ಎಂದಿದೆ.
"ವಿಮಾನವನ್ನು ದಿಲ್ಲಿಯಲ್ಲಿ ಸುರಕ್ಷಿತವಾಗಿ ಇಳಿಸಿದ ನಂತರ, ಪ್ರಯಾಣಿಕನನ್ನು ಭದ್ರತಾ ಏಜೆನ್ಸಿಗೆ ಹಸ್ತಾಂತರಿಸಲಾಯಿತು. ನಂತರ ಆತ ಲಿಖಿತವಾಗಿ ಕ್ಷಮೆಯಾಚಿಸಿದ" ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.