ಸಿಎಎ ಸ್ವೀಕಾರಾರ್ಹವಲ್ಲ, ತಮಿಳುನಾಡಿನಲ್ಲಿ ಜಾರಿಗೊಳಿಸಬಾರದು: ನಟ ವಿಜಯ್
ಚೆನ್ನೈ: ತಮಿಳು ನಟ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ ವಿಜಯ್ ಸೋಮವಾರದಂದು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಡಿಸೆಂಬರ್ 31, 2014ಕ್ಕೂ ಮುಂಚೆ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ದಾಖಲೆರಹಿತ ಮುಸ್ಲಿಮೇತರ ವಲಸಿಗರಿಗೆ ತ್ವರಿತ ಗತಿಯಲ್ಲಿ ಪೌರತ್ವ ನೀಡುವ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯ ಜಾರಿಗೆ ನಾಲ್ಕು ವರ್ಷಗಳ ನಂತರ ನರೇಂದ್ರ ಮೋದಿ ನೇತೃತ್ವದ ಸರಕಾರವು ಸೋಮವಾರ ಅಧಿಸೂಚನೆ ಹೊರಡಿಸಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ನಟ ವಿಜಯ್, "ಎಲ್ಲ ಸಮುದಾಯದವರೂ ಸೌಹಾರ್ದತೆಯಿಂದ ಬದುಕುತ್ತಿರುವ ದೇಶವೊಂದರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಜಾರಿಯು ಸ್ವೀಕಾರಾರ್ಹವಲ್ಲ" ಎಂದು ಹೇಳಿದ್ದಾರೆ.
ಇದರೊಂದಿಗೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಮಿಳುನಾಡಿನಲ್ಲಿ ಜಾರಿಗೊಳಿಸಬಾರದು ಎಂದೂ ಅವರು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.
"ಈ ಕಾಯ್ದೆಯು ತಮಿಳುನಾಡಿನಲ್ಲಿ ಜಾರಿಯಾಗದಿರುವುದನ್ನು ನಾಯಕರು ಖಾತರಿ ಪಡಿಸಬೇಕು" ಎಂದು ಅವರು ತಮ್ಮ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.