ಇಂದೇ ಅದಾನಿಯನ್ನು ಬಂಧಿಸಬೇಕು, ಆದರೆ ಪ್ರಧಾನಿ ಅವರನ್ನು ರಕ್ಷಿಸುತ್ತಿದ್ದಾರೆ: ರಾಹುಲ್ ಗಾಂಧಿ
ಹೊಸದಿಲ್ಲಿ: ಸೌರ ಗುತ್ತಿಗೆಗೆ ಸಂಬಂಧಿಸಿ ಲಂಚ ಮತ್ತು ವಂಚನೆ ಆರೋಪದಡಿ ನ್ಯೂಯಾರ್ಕ್ ನ್ಯಾಯಾಲಯ ಉದ್ಯಮಿ ಗೌತಮಿ ಅದಾನಿ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇಂದೇ ಅದಾನಿಯನ್ನು ಬಂಧಿಸಬೇಕು, ಆದ್ರೆ ಪ್ರಧಾನಿ ಅವರನ್ನು ರಕ್ಷಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ರೊಂದಿಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಗೌತಮ್ ಅದಾನಿಯನ್ನು ಬಂಧಿಸುವ ಸಾಮರ್ಥ್ಯ ಪ್ರಧಾನಿ ನರೇಂದ್ರ ಮೋದಿಗಿಲ್ಲ ಎಂದು ಹೇಳಿದ್ದಾರೆ. ಲೋಕಸಭಾ ವಿರೋಧ ಪಕ್ಷದ ನಾಯಕನಾಗಿ ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವುದು ನನ್ನ ಜವಾಬ್ದಾರಿಯಾಗಿದೆ. ಮೋದಿ ಶೇ. 100ರಷ್ಟು ಅದಾನಿಯನ್ನು ಬೆಂಬಲಿಸುತ್ತಿದ್ದಾರೆ. ನಾವು ಜಂಟಿ ಸದನ ಸಮಿತಿ ತನಿಖೆಗೆ ಒತ್ತಾಯಿಸುತ್ತೇವೆ ಹಾಗೂ ಅದಾನಿ ಬಂಧನಕ್ಕೆ ಆಗ್ರಹಿಸುತ್ತೇವೆ ಎಂದು ಹೇಳಿದರು.
ಇದೇ ವೇಳೆ, ಅದಾನಿ ಮತ್ತು ಮೋದಿ ಒಗ್ಗಟ್ಟಾಗಿದ್ದರೆ ಸುರಕ್ಷಿತವಾಗಿರುತ್ತಾರೆ ಎಂದೂ ಅವರು ವ್ಯಂಗ್ಯವಾಡಿದರು. ಅದಾನಿ ವಿರುದ್ಧ ಎಫ್ಬಿಐ ದೋಷಾರೋಪ ಹೊರಿಸಿದ್ದರೂ, ಸಿಬಿಐ ಮತ್ತು ಸೆಬಿ ಯಾಕೆ ಏನನ್ನೂ ಹೇಳುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ಜಂಟಿ ಸದನ ಸಮಿತಿ ಮುಖ್ಯವಾಗಿದೆ. ಅದು ಆಗಲಿದೆ. ಆದರೆ, ಅದಾನಿ ಯಾಕೆ ಜೈಲಿನಲ್ಲಿಲ್ಲ ಎಂಬುದು ಪ್ರಶ್ನೆಯಾಗಿದೆ. ಅದಾನಿ ಭಾರತದಲ್ಲಿ ಅಪರಾಧವೆಸಗಿದ್ದಾರೆ. ಅವರು ಲಂಚದ ಆಮಿಷವೊಡ್ಡಿದ್ದಾರೆ ಹಾಗೂ ವಿದ್ಯುತ್ ಅನ್ನು ದುಬಾರಿ ಬೆಲೆಗೆ ಮಾರಾಟ ಮಾಡಿದ್ದಾರೆ ಎಂದು ಅಮೆರಿಕ ತನಿಖಾ ಸಂಸ್ಥೆಗಳು ಆರೋಪಿಸಿವೆ. ಆದರೆ, ಪ್ರಧಾನಿ ಮೋದಿ ಏನನ್ನೂ ಮಾಡುತ್ತಿಲ್ಲ. ಅವರು ಏನನ್ನಾದರೂ ಮಾಡಬೇಕೆನ್ನಿಸಿದರೂ, ಅವರಿಗೆ ಮಾಡಲು ಸಾಧ್ಯವಿಲ್ಲ. ಯಾಕೆಂದರೆ, ಅವರು ಅದಾನಿಯ ನಿಯಂತ್ರಣದಲ್ಲಿದ್ದಾರೆ. ಅದಾನಿ ರೂ. 2,000 ಕೋಟಿ ಹಗರಣವೆಸಗಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಆದರೆ, ಪ್ರಧಾನಿ ಮೋದಿ ಅದಾನಿಯೊಂದಿಗೆ ಸಂಪರ್ಕ ಹೊಂದಿರುವುದರಿಂದ, ಅವರ ಬಂಧನವೂ ಆಗುವುದಿಲ್ಲ ಅಥವಾ ತನಿಖೆಯನ್ನೂ ಎದುರಿಸುವುದಿಲ್ಲ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.