ಪಹಲ್ಗಾಮ್ ದಾಳಿ ಬಳಿಕ ನಾಲ್ಕು ರಾಜ್ಯಗಳಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರ!; ವರದಿ

Update: 2025-04-30 16:42 IST
ಪಹಲ್ಗಾಮ್ ದಾಳಿ ಬಳಿಕ ನಾಲ್ಕು ರಾಜ್ಯಗಳಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರ!; ವರದಿ

Screengrab:X/@HateDetectors

  • whatsapp icon

ಜಮ್ಮುಕಾಶ್ಮೀರ : ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯ ನಂತರ ದೇಶದ ಕನಿಷ್ಠ ನಾಲ್ಕು ರಾಜ್ಯಗಳಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರ ಮತ್ತು ಬೆದರಿಕೆ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿದೆ ಎಂದು scroll.in ವರದಿ ಮಾಡಿದೆ.

ಪಹಲ್ಗಾಮ್ ಭಯೋತ್ಪಾದನಾ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. 17 ಮಂದಿ ಗಾಯಗೊಂಡಿದ್ದರು. ಪ್ರವಾಸಿಗರನ್ನು ಹತ್ಯೆ ಮಾಡುವ ಮೊದಲು ಭಯೋತ್ಪಾದಕರು ಧರ್ಮವನ್ನು ಕೇಳಿದ್ದರು ಎಂದು ವರದಿಯಾಗಿತ್ತು. ಈ ಘಟನೆ ನಂತರ, ಉತ್ತರಾಖಂಡ, ಕರ್ನಾಟಕ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಹಿಂಸಾಚಾರ ಮತ್ತು ಮುಸ್ಲಿಮರ ವಿರುದ್ಧದ ಬೆದರಿಕೆಯ ಘಟನೆಗಳು ವರದಿಯಾಗಿವೆ.

ಉತ್ತರಾಖಂಡದಲ್ಲಿ ಶಾಲು ಮಾರಾಟಗಾರರ ಮೇಲೆ ದಾಳಿ: 

ಉತ್ತರಾಖಂಡದ ಮಸ್ಸೂರಿಯಲ್ಲಿ ಇಬ್ಬರು ಕಾಶ್ಮೀರಿ ಶಾಲು ಮಾರಾಟಗಾರರ ಮೇಲೆ ಸಂಘ ಪರಿವಾರದ ಗುಂಪೊಂದು ಹಲ್ಲೆ ಮಾಡಿದೆ. ಘಟನೆಯ ನಂತರ ಸುಮಾರು 16 ಕಾಶ್ಮೀರಿ ಶಾಲು ಮಾರಾಟಗಾರರು ಮಸ್ಸೂರಿ ತೊರೆದು ಕಾಶ್ಮೀರ ಕಣಿವೆಗೆ ಮರಳಿದ್ದಾರೆ.

ಶಾಲು ಮಾರಾಟಗಾರರ ಮೇಲೆ ಹಲ್ಲೆ ಮಾಡಿದ ಮೂವರನ್ನು ಬಂಧಿಸಲಾಗಿದೆ ಎಂದು ಡಿಜಿಪಿ ದೀಪಮ್ ಸೇಥ್ ತಿಳಿಸಿದ್ದಾರೆ.

ಆರೋಪಿಗಳನ್ನು ತೆಹ್ರಿ ಗರ್ವಾಲ್‌ನ ಪೋಸ್ಟ್ ಕೆಂಪ್ಟಿ ನಿವಾಸಿ ಸೂರಜ್ ಸಿಂಗ್, ಮಸ್ಸೂರಿಯ ಹಾಥಿಪಾನ್ ನಿವಾಸಿ ಪ್ರದೀಪ್ ಸಿಂಗ್ ಮತ್ತು ಮಸ್ಸೂರಿಯ ಕಂಪನಿ ಗಾರ್ಡನ್ ನಿವಾಸಿ ಅಭಿಷೇಕ್ ಉನಿಯಾಲ್ ಎಂದು ಗುರುತಿಸಲಾಗಿದೆ. ಬಂಧಿತ ಮೂವರು ಆರೋಪಿಗಳು ಬಜರಂಗದಳದ ಸದಸ್ಯರು ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

ʼನಾನು ಸಾಲು ಮಾರಾಟಕ್ಕೆ 18 ವರ್ಷಗಳಿಂದ ಮಸ್ಸೂರಿಗೆ ಭೇಟಿ ನೀಡುತ್ತಿದ್ದೇನೆ. ಹಲ್ಲೆ ಮಾಡಿದವರು ಮಸ್ಸೂರಿ ಪ್ರದೇಶದವರು ಮತ್ತು ಅವರನ್ನು ಮೊದಲು ನೋಡಿದ್ದೇನೆ. ನಮ್ಮ ಮೇಲೆ ಹಲ್ಲೆ ನಡೆದರೂ ನಮ್ಮ ಪರವಾಗಿ ಯಾರೂ ಮಾತನಾಡಲಿಲ್ಲ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಕಾಶ್ಮೀರಿಗಳಿಗೆ ಬೆದರಿಕೆಗಳಿವೆ. ನೀವು ಇಲ್ಲಿಂದ ತೆರಳುವುದು ಉತ್ತಮ ಎಂದು ಪೊಲೀಸರು ತಿಳಿಸಿರುವುದಾಗಿ ಶಾಲು ಮಾರಾಟಗಾರ ಕುಪ್ವಾರದ ಶಬೀರ್ ಅಹ್ಮದ್ ದಾರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾನಸಿಕ ಅಸ್ವಸ್ಥ ಯುವಕನ ಗುಂಪುಹತ್ಯೆ: 

ಮಂಗಳೂರು ನಗರ ಹೊರವಲಯದ ಕುಡುಪು ಬಳಿ ರವಿವಾರ ಕೇರಳದ ವಯನಾಡಿನ ಪುಲ್ಪಳ್ಳಿ ನಿವಾಸಿಯಾಗಿರುವ ಅಶ್ರಫ್ ಎಂಬವರನ್ನು ಗುಂಪೊಂದು ಥಳಿಸಿ ಹತ್ಯೆ ನಡೆಸಿತ್ತು.

ರವಿವಾರ ಸಂಜೆ 5.30ರ ಸುಮಾರಿಗೆ ಮಂಗಳೂರಿನ ಹೊರವಲಯದಲ್ಲಿರುವ ದೇವಾಲಯದ ಬಳಿ ಅಪರಿಚಿತ ಶವ ಪತ್ತೆಯಾಗಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಮೊದಲು ಪಶ್ಚಿಮ ಬಂಗಾಳ ಅಥವಾ ಬಿಹಾರದ ಕಾರ್ಮಿಕ ಎಂದು ಹೇಳಲಾಗಿತ್ತು. ಹೆಚ್ಚಿನ ತನಿಖೆಯ ವೇಳೆ ವಯನಾಡು ನಿವಾಸಿ ಅಶ್ರಫ್ ಎನ್ನುವುದು ಬಯಲಾಗಿದೆ.

ಕ್ರಿಕೆಟ್ ಪಂದ್ಯದ ವೇಳೆ ಅಶ್ರಫ್ ಅವರನ್ನು ಥಳಿಸಿ ಹತ್ಯೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ 20 ಮಂದಿ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಅಲಿಗಢದಲ್ಲಿ 15 ವರ್ಷದ ಬಾಲಕನ ಮೇಲೆ ಹಲ್ಲೆ:

ಪಹಲ್ಗಾಮ್ ಭಯೋತ್ಪಾದನಾ ದಾಳಿಯ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ರಸ್ತೆಯಲ್ಲಿ ಇರಿಸಿದ್ದ ಪಾಕಿಸ್ತಾನ ಧ್ವಜವನ್ನು ಎತ್ತಿಕೊಂಡ ಮುಸ್ಲಿಂ ವಿದ್ಯಾರ್ಥಿಯ ಮೇಲೆ ಗುಂಪೊಂದು ಅಲಿಗಢದಲ್ಲಿ ಸೋಮವಾರ ಹಲ್ಲೆ ನಡೆಸಿದೆ. ಇದಲ್ಲದೆ ಪಾಕಿಸ್ತಾನ ಧ್ವಜದ ಮೇಲೆ ಮೂತ್ರ ವಿಸರ್ಜನೆ ಮಾಡುವಂತೆ ಆತನಿಗೆ ಬಲವಂತ ಮಾಡಲಾಗಿದೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

ಬಾಲಕ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಬಾಲಕನನ್ನು ಪ್ರತಿಭಟನಾಕಾರರು ಸುತ್ತುವರಿದಿರುವುದು ಕಂಡು ಬಂದಿದೆ.

ಭೋಪಾಲ್‌ನಲ್ಲಿ ಶಾಸಕನಿಗೆ ಜೀವ ಬೆದರಿಕೆ:

ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಬೆಂಬಲಿಸಿದ್ದಾರೆಂದು ಆರೋಪಿಸಿ ಭೋಪಾಲ್ ಕಾಂಗ್ರೆಸ್ ಶಾಸಕ ಆರಿಫ್ ಮಸೂದ್ ಅವರಿಗೆ ಸಚಿನ್ ರಘುವಂಶಿ ಎಂಬಾತ ಫೇಸ್ಬುಕ್‌ನಲ್ಲಿ ಜೀವ ಬೆದರಿಕೆ ಹಾಕಿದ್ದಾನೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಭೋಪಾಲ್ ಶಾಸಕ ಮಸೂದ್ ದೂರಿನ ಮೇರೆಗೆ ಈ ಕುರಿತು ಎಫ್ಐಆರ್ ದಾಖಲಿಸಲಾಗಿದೆ.

ʼನನ್ನನ್ನು ಜೈಲಿನಿಂದ ಬಿಡುಗಡೆ ಮಾಡುವ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ? ಪಹಲ್ಗಾಮ್‌ನಲ್ಲಿ ನಡೆದ ಹತ್ಯಾಕಾಂಡದ ನಂತರ, ನಾನು ದೇಶದ್ರೋಹಿ ಘಟನೆಯನ್ನು ಬೆಂಬಲಿಸುತ್ತಿರುವ ವ್ಯಕ್ತಿಯನ್ನು ಕೊಲ್ಲುತ್ತೇನೆʼ ಎಂದು ಆತ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News