AI ಬಳಸಿ, ಸುನಿಲ್ ಮಿತ್ತಲ್ ಧ್ವನಿಯಲ್ಲಿ ವಂಚಿಸಲು ಯತ್ನಿಸಿದ ಸೈಬರ್ ವಂಚಕರು!

Update: 2024-10-21 17:28 GMT
AI ಬಳಸಿ, ಸುನಿಲ್ ಮಿತ್ತಲ್ ಧ್ವನಿಯಲ್ಲಿ ವಂಚಿಸಲು ಯತ್ನಿಸಿದ ಸೈಬರ್ ವಂಚಕರು!

ಸುನಿಲ್ ಭಾರ್ತಿ ಮಿತ್ತಲ್

  • whatsapp icon

ಹೊಸದಿಲ್ಲಿ: ಕೃತಕ ಬುದ್ಧಿಮತ್ತೆ(AI) ತಂತ್ರಜ್ಞಾನ ಸಂವಹನ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿರುವಂತೆ, ವಂಚಕರ ಪಾಲಿನ ಬ್ರಹ್ಮಾಸ್ತ್ರವಾಗಿಯೂ ಬದಲಾಗತೊಡಗಿದೆ. ಇದಕ್ಕೆ ತಾಜಾ ಉದಾಹರಣೆ: ಸೈಬರ್ ವಂಚಕರು ಪ್ರಖ್ಯಾತ ಉದ್ಯಮಿ ಸುನಿಲ್ ಮಿತ್ತಲ್ ಅವರ ಧ್ವನಿಯನ್ನು ಕೃತಕ ಬುದ್ಧಿಮತ್ತೆ ಬಳಸಿ ಯಥಾವತ್ ನಕಲು ಮಾಡಿರುವುದು!

ಟೆಲಿಕಾಮ್ ದೈತ್ಯ ಸುನಿಲ್ ಭಾರ್ತಿ ಮಿತ್ತಲ್ ಅವರ ಧ್ವನಿಯಲ್ಲಿ ಕರೆ ಮಾಡಿರುವ ಸೈಬರ್ ವಂಚಕರು, ದುಬೈನಲ್ಲಿರುವ ಅವರ ಅಧಿಕಾರಿಗೆ ಭಾರಿ ಮೊತ್ತವನ್ನು ವರ್ಗಾಯಿಸುವಂತೆ ಸೂಚಿಸಿದ್ದಾರೆ. ಆದರೆ, ಅವರಿಗಿಂತ ಚತುರರಾದ ಅಧಿಕಾರಿಗೆ ಮಿತ್ತಲ್ ಅಷ್ಟು ದೊಡ್ಡ ಮೊತ್ತದ ಹಣ ವರ್ಗಾಯಿಸುವಂತೆ ತನಗೆ ಸೂಚಿಸುವುದಿಲ್ಲ ಎಂಬುದು ಅರಿವಾಗಿದೆ. ಹೀಗಾಗಿ ದೊಡ್ಡ ವಂಚನೆಯೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.

ಸೋಮವಾರ NDV ವಿಶ್ವ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮಿತ್ತಲ್, ಕೃತಕ ಬುದ್ಧಿಮತ್ತೆ(AI)ಯಂತಹ ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳು ಒಡ್ಡುವ ಅಪಾಯಗಳ ಕುರಿತು ಜನರಿಗೆ ಎಚ್ಚರಿಕೆ ನೀಡಿದರು.

ದುಬೈನಲ್ಲಿ ನಿಯೋಜಿಸಲಾಗಿರುವ ತಮ್ಮ ಅಧಿಕಾರಿಯು ಹೇಗೆ ತಮ್ಮದೇ ಧ್ವನಿ ಹೋಲುವ ಕರೆಯನ್ನು ಸ್ವೀಕರಿಸಿದರು ಹಾಗೂ ಆ ಧ್ವನಿಯು ಹೇಗೆ ಭಾರಿ ಮೊತ್ತವನ್ನು ವರ್ಗಾಯಿಸುವಂತೆ ಅವರಿಗೆ ಸೂಚಿಸಿತು ಎಂಬ ಬಗ್ಗೆ ಸುನೀಲ್ ಮಿತ್ತಲ್ ಮೆಲುಕು ಹಾಕಿದರು.

ಆದರೆ, ಅಧಿಕಾರಿಯು ಜಾಗರೂಕತೆ ಮತ್ತು ವಿವೇಚನೆ ಉಳ್ಳವರಾಗಿದ್ದರು. ಹೀಗಾಗಿ ತಕ್ಷಣವೇ ಅವರಿಗೆ ಇದೊಂದು ವಂಚನೆ ಎಂಬುದು ಅರಿವಾಗಿ ಹೋಯಿತು ಎಂದು ಮಿತ್ತಲ್ ತಿಳಿಸಿದರು. “ಧ್ವನಿ ಮುದ್ರಿಸಿಕೊಂಡಿದ್ದ ಆ ಧ್ವನಿಯನ್ನು ನಾನು ಕೇಳಿದಾಗ, ನಾನು ಸಂಪೂರ್ಣವಾಗಿ ದಿಗ್ಮೂಢನಾದೆ. ಯಾಕೆಂದರೆ, ಆ ಧ್ವನಿಯು ನಿಖರವಾಗಿ ನನ್ನದೇ ಧ್ವನಿಯನ್ನು ಹೋಲುತ್ತಿತ್ತು” ಎಂದು ಅವರು ಹೇಳಿದರು.

“ಒಂದು ವೇಳೆ ಯಾರಾದರೂ ಜಾಗರೂಕರಾಗಿರದಿದ್ದರೆ, ಏನಾದರೊಂದು ಆಗಿರುತ್ತಿತ್ತು” ಎಂದು ಅವರು ಅಭಿಪ್ರಾಯ ಪಟ್ಟರು. ಭವಿಷ್ಯದಲ್ಲಿ ತಂತ್ರಜ್ಞಾನದ ದುರ್ಬಳಕೆಯು ವಂಚಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗುವಂತೆ ಮಾಡಲಿದ್ದು, ಇಂತಹ ಅಪರಾಧ ಕೃತ್ಯಗಳನ್ನು ಮಾಡಲು ಡಿಜಿಟಲ್ ಸಹಿ ಹಾಗೂ ಝೂಮ್ ಕರೆಗಳಲ್ಲಿ ತಮ್ಮ ಮುಖಗಳನ್ನು ಯಥಾವತ್ತಾಗಿ ಇತರರ ಮುಖಗಳಂತೆ ಪ್ರತಿಬಿಂಬಿಸಿ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯೂ ಇದೆ” ಎಂದು ಅವರು ಜನರನ್ನು ಎಚ್ಚರಿಸಿದರು.

“ನಾವು ನಮ್ಮ ಸಮಾಜವನ್ನು ಕೃತಕ ಬುದ್ಧಿಮತ್ತೆ(AI) ತಂತ್ರಜ್ಞಾನದಿಂದ ರಕ್ಷಿಸಬೇಕಿದೆ. ಹಾಗೆಯೇ ನಾವು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಉತ್ತಮ ಅಂಶಗಳನ್ನು ಬಳಸಿಕೊಳ್ಳಬೇಕಿದೆ. ಯಾಕೆಂದರೆ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದ ದೇಶಗಳು, ಸಂಸ್ಥೆಗಳು ಹಿಂದೆ ಬೀಳಲಿವೆ. ಹೀಗಾಗಿ ಹೊಸ ತಂತ್ರಜ್ಞಾನ ಚಾಲ್ತಿಗೆ ಬಂದಾಗಲೆಲ್ಲ ಇದೊಂದು ಜಟಿಲ ಸಮಸ್ಯೆಯಾಗಿದ್ದು, ಅದರಲ್ಲಿ ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳೆರಡೂ ಇರುತ್ತವೆ. ಮನುಷ್ಯರು ಮಾಡಲು ಸಾಧ್ಯವೇ ಇಲ್ಲದಂತಹ ಕಠಿಣ ಕೆಲಸಗಳನ್ನು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿಕೊಂಡು ಮಾನವ ಜನಾಂಗವು ಅದನ್ನು ಸಾಧಿಸಲು ಸಾಧ್ಯವಾಗುತ್ತದೆ” ಎಂದು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಗ್ಗೆ ಅವರು ಆಶಾವಾದ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News