ಕೇರಳ | ಕೋವಿಡ್ ಸೋಂಕಿತೆ ಮೇಲೆ ಅತ್ಯಾಚಾರ ಎಸಗಿದ ಆಂಬ್ಯುಲೆನ್ಸ್ ಚಾಲಕನಿಗೆ ಜೀವಾವಧಿ ಶಿಕ್ಷೆ

ಸಾಂದರ್ಭಿಕ ಚಿತ್ರ | NDTV
ತಿರುವನಂತಪುರ: ಕೋವಿಡ್ ಸೋಂಕಿತೆ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆಂಬ್ಯುಲೆನ್ಸ್ ಚಾಲಕನಿಗೆ ಕೇರಳದ ಪತ್ತನಂತಿಟ್ಟಂನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
2020ರ ಸೆಪ್ಟೆಂಬರ್‌ನಲ್ಲಿ ಈ ಘಟನೆ ನಡೆದಿದೆ. ಆಸ್ಪತ್ರೆಯೊಂದರಿಂದ ಸರಕಾರದ ಅಧೀನದ ಕೋವಿಡ್ ಕೇರ್ ಸೆಂಟರ್‌ಗೆ ಯುವತಿಯನ್ನು ಕೆರದೊಯ್ಯುವ ಜವಾಬ್ಧಾರಿಯನ್ನು ಆಂಬ್ಯುಲೆನ್ಸ್ ಚಾಲಕ ನೌಫಲ್‌ಗೆ ವಹಿಸಲಾಗಿತ್ತು. ಆದರೆ ನೌಫಲ್ ಯುವತಿಯನ್ನು ಕೋವಿಡ್ ಕೇಂದ್ರಕ್ಕೆ ಕರೆದೊಯ್ಯುವ ಬದಲು ಬೇರೆ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಘಟನೆಯ ಬಳಿಕ ನೌಫಲ್ ಆಕೆಯ ಬಳಿ ಕ್ಷಮೆ ಯಾಚಿಸಿದ್ದಾನೆ. ಈ ವೇಳೆ ಸಂತ್ರೆಸ್ತೆ ತನ್ನ ಮೊಬೈಲ್‌ನಲ್ಲಿ ವೀಡಿಯೊವನ್ನು ರೆಕಾರ್ಡ್ ಮಾಡಿಕೊಂಡಿದ್ದಳು.
ಪ್ರಕರಣದ ತನಿಖೆಯ ನೇತೃತ್ವ ವಹಿಸಿರುವ ಪೊಲೀಸ್ ಅಧಿಕಾರಿ ಆರ್.ಬಿನು ಈ ಕುರಿತು ಪ್ರತಿಕ್ರಿಯಿಸಿ, ಲಾಕ್‌ಡೌನ್ ಸಮಯದಲ್ಲಿ ನಡೆದ ಪ್ರಕರಣ ಇದಾಗಿರುವುದರಿಂದ ಸಾಕ್ಷಿಗಳನ್ನು ಕಲೆ ಹಾಕುವುದು ಸವಾಲಾಗಿತ್ತು. ಆದರೆ, ನಮ್ಮ ತಂಡವು ಎಲ್ಲಾ ಸಾಕ್ಷಿಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ ಎಂದು ಹೇಳಿದರು.